ನೀವು ಹಳೆಯ ಸಿನಿಮಾಗಳನ್ನು ನೋಡಿದ್ದರೆ ಒಂದು ವಿಷಯ ನೆನಪಿನಲ್ಲಿರುತ್ತದೆ. ಡಾ.ರಾಜ್ ಅವರ ಯಾವ ಸಿನಿಮಾಗಳಲ್ಲೂ ಹಿಂದಿನ ಸಿನಿಮಾಗಳ ಸಂಭಾಷಣೆ, ದೃಶ್ಯವನ್ನು ಮರುಸೃಷ್ಟಿ ಮಾಡ್ತಾ ಇರಲಿಲ್ಲ. ಅಂಬರೀಷ್, ವಿಷ್ಣುವರ್ಧನ್ ಅವರ ವಿಷಯಕ್ಕೆ ಬಂದರೆ, ಕೊನೆಯ ದಿನಗಳಲ್ಲಿ ಸಿಂಹ ಎಂಬ ಬಿರುದನ್ನು ಮೆರೆಸುವ ಪ್ರಯತ್ನ ಆಯ್ತು. ಆರಂಭಿಸಿದ್ದು ಎಸ್ ನಾರಾಯಣ್. ಇನ್ನು ಅಂಬಿಯ ಕನ್ವರ್ ಲಾಲ್, ರೆಬೆಲ್ ಎನ್ನುವುದನ್ನು ರಿಪೀಟ್ ಮಾಡುವ ಪ್ರಯತ್ನಗಳೂ ಇದ್ದವು. ರವಿಚಂದ್ರನ್ ಅವರಿಗೆ ಪ್ರೇಮಲೋಕ, ರಣಧೀರ ಹಾಗೆಯೇ ಅಂಟಿಕೊಂಡಿದೆ.
ಆದರೆ ಇತ್ತೀಚೆಗೆ ಬಹುತೇಕ ಎಲ್ಲ ಸ್ಟಾರ್ ನಟರ ಚಿತ್ರಗಳಲ್ಲೂ ಅವರದ್ದೇ ಹಳೆಯ ಹಿಟ್ ಸಿನಿಮಾಗಳನ್ನು ನೆನಪಿಸುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಸುದೀಪ್ ಅವರು ಹುಚ್ಚ ಕಿಚ್ಚನಿಂದ ಹೊರಬಂದಿಲ್ಲ. ಶಿವಣ್ಣ ಓಂ, ಜೋಗಿ ದೃಶ್ಯಗಳು, ದರ್ಶನ್ ಅವರು ರೌಡಿ ಡೈಲಾಗುಗಳು, ಉಪೇಂದ್ರರ ಎ, ಉಪೇಂದ್ರ ಡೈಲಾಗ್ಸ್, ಗಣೇಶ್ ಅವರ ಮಳೆ ಮತ್ತು ಪರ ಪರ ಪರ ಡೈಲಾಗು… ಹೀಗೆ ಯಾವುದೇ ಡೈರೆಕ್ಟರ್ ಮತ್ತು ಹೀರೋ ಸಿನಿಮಾಗಳಲ್ಲಿ ಹಳೆಯ ಡೈಲಾಗ್ಸ್ ರಿಪೀಟ್ ಆಗುತ್ತಲೇ ಇರುತ್ತವೆ. ಇದು ಈಗ 45 ಚಿತ್ರದಲ್ಲೂ ಕಾಣಿಸಿದೆ.
ನಾನು ಓಂ ಡೈರೆಕ್ಟರು.. ನಾನು ಹೀರೋ.. ಇದು 45 ಟೀಸರ್ ಡೈಲಾಗ್ಸ್.. ಓಂ ಸಿನಿಮಾದಲ್ಲಿ ಡೈರೆಕ್ಷರ್ ನಾನೆ ಎಂದು ಉಪೇಂದ್ರ ಹೇಳಿದರೆ, ಅದರಲ್ಲಿ ಹೀರೋ ನಾನು ಎನ್ನುತ್ತಾರೆ ಶಿವಣ್ಣ. ಎರಡು ಡೈಲಾಗ್ಸ್ ಮೂಲಕ ಉಪೇಂದ್ರ ಮತ್ತು ಶಿವಣ್ಣ 45 ರಂಗಪ್ರವೇಶ ಮಾಡಿಸಿದ್ದಾರೆ ಅರ್ಜುನ್ ಜನ್ಯ. ಯಾಕೆ.. ಹೊಸ ಕಥೆ.. ಹಳೆ ಡೈಲಾಗ್ಸ್ ಯಾಕೆ..? ಇದು ಪ್ರೇಕ್ಷಕರಿಗೆ ಅರ್ಥವಾಗದ ಪ್ರಶ್ನೆ. ಅಂತಹ ಡೈಲಾಗುಗಳಿಂದ ಕಟ್ಟರ್ ಅಭಿಮಾನಿಗಳು ಥ್ರಿಲ್ ಆಗಬಹುದೇನೋ.. ಹೊಸ ಪ್ರೇಕ್ಷಕರು ಹುಟ್ಟೋದಿಲ್ಲ.
ಇದನ್ನು ಹೊರತು ಪಡಿಸಿದರೆ 45 ಟೀಸರಿನಲ್ಲಿ ಮನುಷ್ಯ ಸತ್ತ ಮೇಲೆ ತೋರಿಸೋ ಪ್ರೀತಿನಾ, ಅವನ ಬದುಕ್ಕಿದ್ದಾಗಲೇ ತೋರಿಸಿ ಎನ್ನುವ ಡೈಲಾಗ್, ಹಾರ್ಟ್ ಟಚ್ ಮಾಡುತ್ತದೆ. ರಾಜ್ ಬಿ ಶೆಟ್ಟಿ ಭಯ ಹುಟ್ಟಿಸುತ್ತಾರೆ. ಒಂದೇ ಚಿತ್ರದಲ್ಲಿ ಮೂವರು ಹೀರೋಗಳನ್ನ ಅರ್ಜುನ್ ಜನ್ಯ ಫಸ್ಟ್ ಸಿನಿಮಾದಲ್ಲೇ ಭರವಸೆ ಹುಟ್ಟಿಸುತ್ತಾರೆ. ಇದು 45 ಟೀಸರ್ ಝಲಕ್.
ಓಂ ಹೀರೋ.. ಡೈರೆಕ್ಟರ್ ಡೈಲಾಗ್.. ಮತ್ತದೇ ಹಳೇ ಸಿನಿಮಾಗಳ ಬಿಲ್ಡಪ್ ಎನಿಸಿದರೂ.. ಅದು ಚಿತ್ರಕ್ಕೆ ಬೇಕಿತ್ತೋ.. ಬೇಕಿಲ್ಲವೋ ಅನ್ನೋದನ್ನು ಸಿನಿಮಾ ಬಂದ ಮೇಲೆ ಹೇಳಬೇಕಷ್ಟೇ. ಇತ್ತೀಚೆಗೆ ಸ್ಟಾರ್ ಸಿನಿಮಾಗಳಲ್ಲಿ ಅವರ ಹಳೆಯ ಸಿನಿಮಾಗಳ ಡೈಲಾಗು, ಸೀನ್ಸ್ ರೀ-ಕ್ರಿಯೇಟ್ ಮಾಡಿ ಪ್ರೇಕ್ಷಕರನ್ನು ಬೋರು ಹೊಡೆಸಲಾಗ್ತಿದೆ. ಚಿತ್ರದ ಕಥೆಗೆ ಅನಿವಾರ್ಯವಾಗಿ ಬಂದರೆ ಪ್ರೇಕ್ಷಕರು ಥ್ರಿಲ್ ಆಗ್ತಾರೆ. ಬಲವಂತವಾಗಿ ತುರುಕಬಾರದು. ಅದನ್ನು ಹೊರತುಪಡಿಸಿ ನೋಡಿದರೆ.. ಟೀಸರ್‌ನಲ್ಲಿ ಹಿನ್ನಲೆ ಧ್ವನಿ ಸೆಂಟರ್ ಆಫ್ ಅಟ್ರ್ಯಾಕ್ಷನ್. ಇನ್ನು ಲುಕ್, ಡೈಲಾಗ್ಸ್, ಚಿತ್ರ ವಿಚಿತ್ರ ಜೀವಿಗಳು ತೆರೆಮೇಲೆ ಬಂದು ಕಿಕ್ ಕೊಡುತ್ತವೆ. ಮೇಕಿಂಗ್, ಆಕ್ಷನ್, ವಿಷ್ಯುವಲ್ಸ್, ಸ್ಕೇಲ್, ಬಿಜಿಎಂ, ಗ್ರಾಫಿಕ್ಸ್ ಎಲ್ಲವೂ ಅಬ್ಬಬ್ಬಾ ಎನಿಸುವಂತಿದೆ. ಒಳ್ಳೆಯದು ಹಾಗೂ ಕೆಟ್ಟದರ ನಡುವಿನ ಸಂಘರ್ಷದ ಕಥೆ ಅನ್ನೋದು ಮಾತ್ರ ಗೊತ್ತಾಗುತ್ತಿದೆ. ಕೊನೆ ಶಾಟ್‌ನಲ್ಲಿ ನಾಯಿಯ ಮುಂದೆ ಉಪ್ಪಿ ಕೂತು ಅದರಂತೆ ವರ್ತಿಸುವ ಫ್ರೇಮ್ ಮಜವಾಗಿದೆ. ಶಿವಣ್ಣ-ಉಪೇಂದ್ರ-ರಾಜ್ ಬಿ ಶೆಟ್ಟಿ ನಟಿಸಿರುವ ಚಿತ್ರ 45, ರಿಲೀಸ್ ಆಗೋದು ಆಗಸ್ಟ್ 15ಕ್ಕೆ.