ಕರ್ನಾಟಕ ಬಾಕ್ಸಾಫೀಸಿನಲ್ಲಿ ಶಿವ-ಗಣ ಆರ್ಭಟ ಜೋರಾಗಿದೆ. ಶಿವ ಅಂದ್ರೆ ಶಿವಣ್ಣ. ಭೈರತಿ ರಣಗಲ್. ಗಣ ಎಂದರೆ, ಅದೇ ಭೈರತಿ ರಣಗಲ್ ಚಿತ್ರದ ಪ್ರೀಕ್ವೆಲ್ ʻಮಫ್ತಿʼ ಬಂದಿತ್ತಲ್ಲ, ಆ ಚಿತ್ರದ ಗಣ ಅರ್ಥಾತ್ ಶ್ರೀಮುರಳಿ. ಮಾಮ ಶಿವಣ್ಣನ ಚಿತ್ರ ರಿಲೀಸಿಗೂ ಎರಡು ವಾರ ಮೊದಲೇ ರಿಲೀಸ್ ಆಗಿದ್ದ ಬಘೀರ, ಬಾಕ್ಸಾಫೀಸಿನಲ್ಲಿ ಡೀಸೆಂಟ್ ಗಳಿಕೆ ಕಾಯ್ದುಕೊಂಡಿದೆ. ಮೌತ್ ಪಬ್ಲಿಸಿಟಿ ಮೂಲಕವೇ ಚಿತ್ರಮಂದಿರಕ್ಕೆ ಜನ ಬರುತ್ತಿದ್ದಾರೆ. ಒಂದು ಮೂಲದ ಪ್ರಕಾರ ಚಿತ್ರದ ಒಟ್ಟಾರೆ ಕಲೆಕ್ಷನ್ 25 ಕೋಟಿ ದಾಟಿದೆ.
ಇನ್ನು ಕರ್ನಾಟಕದಲ್ಲಿ ಭೈರತಿ ರಣಗಲ್ ಆರ್ಭಟ ಜೋರಾಗುತ್ತಿದೆ. ಬಘೀರ ಹಿಟ್ ಆದ ಬೆನ್ನಲ್ಲೇ ಬಂದ ಭೈರತಿ ರಣಗಲ್ ಚಿತ್ರವನ್ನು ಅಭಿಮಾನಿಗಳೆಲ್ಲ ಕಣ್ತುಂಬಿಕೊಳ್ಳುತ್ತಿದ್ದಾರೆ. ಮೊದಲ ದಿನ 47 ಸಾವಿರಕ್ಕೂ ಹೆಚ್ಚು ಟಿಕೆಟ್ ಸೇಲ್ ಆಗಿದ್ದರೆ, 2ನೇ ದಿನ ಶನಿವಾರ ಸರಿಸುಮಾರು 60 ಸಾವಿರ ಟಿಕೆಟ್ ಸೇಲ್ ಆಗಿವೆ. ಶಿವಣ್ಣ-ನರ್ತನ್ ಜೋಡಿ ಪ್ರೇಕ್ಷಕರಿಗೆ ಅಕ್ಷರಶಃ ಮೋಡಿ ಮಾಡಿದೆ. ಕಲೆಕ್ಷನ್ ಎಷ್ಟು ಎಂಬ ಲೆಕ್ಕ ನೋಡಿದರೆ ಟಿಕೆಟ್ ಸೇಲ್ಸ್ ಲೆಕ್ಕಾಚಾರದ ಮೇಲೆ ಸುಮಾರು 10 ಕೋಟಿ ದಾಟಿದೆ ಎನ್ನಲಾಗುತ್ತಿದೆ. ಅಧಿಕೃತ ಲೆಕ್ಕ ಸಿಕ್ಕಿಲ್ಲ.
ಇನ್ನು ಹೊಂಬಾಳೆ ಬ್ಯಾನರ್‌ನಲ್ಲಿ ನಿರ್ಮಾಣವಾದ ಶ್ರೀಮುರಳಿ-ಡಾ.ಸೂರಿ-ಪ್ರಶಾಂತ್ ನೀಲ್ ಕಾಂಬಿನೇಷನ್ನಿನ ಬಘೀರ ಚಿತ್ರದ ಗಳಿಕೆಯೂ ಉತ್ತಮವಾಗಿಯೇ ಇದೆ. ಯಶಸ್ವಿ 3ನೇ ವಾರಕ್ಕೆ ಎಂಟ್ರಿ ಕೊಟ್ಟಿರುವ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಲೆಕ್ಕ ಸಿಗುತ್ತಿಲ್ಲ. ಎರಡೂ ಚಿತ್ರಗಳಲ್ಲಿ ರುಕ್ಮಿಣಿ ವಸಂತ್ ನಾಯಕಿ ಎನ್ನುವುದು ವಿಶೇಷ. ಅಷ್ಟೇ ಅಲ್ಲ, ಭೈರತಿ ರಣಗಲ್ ಮತ್ತು ಬಘೀರ, ಎರಡೂ ಚಿತ್ರಗಳಲ್ಲಿ ರುಕ್ಮಿಣಿ ಡಾಕ್ಟರ್ ಪಾತ್ರ ಮಾಡಿದ್ದಾರೆ.
ಕರ್ನಾಟಕದಲ್ಲಿ ಎರಡೂ ಕನ್ನಡ ಚಿತ್ರಗಳ ಆರ್ಭಟದ ನಡುವೆ ಢಮ್ ಎಂದಿರುವುದು ತಮಿಳಿನ ಕಂಗುವಾ. ಭೈರತಿ ರಣಗಲ್ ಬಿಡುಗಡೆಗೆ ಒಂದು ದಿನ ಮೊದಲೇ ರಿಲೀಸ್ ಆದ ಕಂಗುವ ಚಿತ್ರಕ್ಕೆ ಮೊದಲ ದಿನ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಆದರೆ 2ನೇ ದಿನವೇ ಚಿತ್ರ ಢಂ ಎಂದಿದೆ. ಕರ್ನಾಟಕದಲ್ಲಿ ಎಂದಿನಂತೆ ಟಿಕೆಟ್ ರೇಟ್ ಹೆಚ್ಚು ಇದ್ದ ಕಾರಣ ಗಳಿಕೆ ಹೆಚ್ಚಾಗಿದೆ. ಆದರೆ ದೇಶಾದ್ಯಂತ ಸಿನಿಮಾ ಕಲೆಕ್ಷನ್ 30 ಕೋಟಿ ಆಸುಪಾಸು ಇದೆ. 350 ಕೋಟಿ ಬಜೆಟ್ಟಿನ ಸಿನಿಮಾ ಬೆಂಗಳೂರಿನಲ್ಲಿ ಸೋಲುತ್ತಿರುವಂತೆಯೇ ಚಿತ್ರ ಅಟ್ಟರ್ ಫ್ಲಾಪ್ ಎಂದು ಬಾಕ್ಸಾಫೀಸ್ ಪಂಡಿತರು ಹೇಳುತ್ತಿದ್ದಾರೆ.
ತಮಿಳಿನಲ್ಲಿ ‘ಅಮರನ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ‘ಕಂಗುವ’ ಬದಲಿಗೆ ‘ಅಮರನ್’ ಚಿತ್ರ ಪ್ರದರ್ಶನ ಆರಂಭಿಸಲಾಗಿದೆ. ಕರ್ನಾಟಕದಲ್ಲಿ ‘ಭೈರತಿ ರಣಗಲ್’ ಸಿನಿಮಾ ಬಿಡುಗಡೆಯಾಗಿದ್ದು, ಕಂಗುವ ಶೋಗಳಲ್ಲಿ ಭೈರತಿ ಮತ್ತು ಬಘೀರ ರೀಪ್ಲೇಸ್ ಆಗುತ್ತಿವೆ.
ಈ ಹಿಂದೆಯೂ ವಿಜಯ್ ಚಿತ್ರದ ಎದುರು ಶಿವಣ್ಣ ಅಭಿನಯದ ಘೋಸ್ಟ್ ರಿಲೀಸ್ ಆಗಿತ್ತು. ಓಪನಿಂಗ್ ಭರ್ಜರಿಯಾಗಿದ್ದರೂ, ಚಿತ್ರದ ಟೋಟಲ್ ಕಂಟೆಂಟ್ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಚಿತ್ರ ಒಂದು ಲೆವೆಲ್ಲಿಗೆ ಹಿಟ್ ಆಗಿತ್ತು. ಆದರೆ ಕರ್ನಾಟಕದಲ್ಲಿ ಘೋಸ್ಟ್ ಎದುರು ವಿಜಯ್ ಅಭಿನಯದ ಸಿನಿಮಾ ಪಲ್ಟಿ ಹೊಡೆದಿತ್ತು. ಈಗ ಸೂರ್ಯ ಸರದಿ. ಕಂಗುವ ಢಮ್‌ಢಮಾರ್ ಎಂದಿದೆ.