ಇತ್ತೀಚೆಗಷ್ಟೇ 2019ರ ರಾಜ್ಯ ಪ್ರಶಸ್ತಿ ಘೋಷಿಸಿದ್ದ ರಾಜ್ಯ ಸರ್ಕಾರ, ಆ ಪ್ರಶಸ್ತಿಗಳಲ್ಲಿ ಮುಜುಗರವನ್ನೂ ಅನುಭವಿಸಿತ್ತು. ಕಿಚ್ಚ ಸುದೀಪ್ ತಮಗೆ ದೊರೆತಿದ್ದ ಅತ್ಯುತ್ತಮ ನಟ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಈಗ 2020ರ ಪ್ರಶಸ್ತಿಯಲ್ಲಿಯೂ ರಾಜ್ಯ ಸರ್ಕಾರ ಅಂತದ್ದೇ ಮುಜುಗರ ಎದುರಿಸುತ್ತಿದೆ. ಮುಜುಗರ ಎದುರಿಸುವ ಸನ್ನಿವೇಶ ಎದುರಾಗಿದೆ. ಅದಕ್ಕೆ ಕಾರಣವಾಗಿರುವುದು ತಲೆದಂಡ.
ತಲೆದಂಡ. 2020ರಲ್ಲಿ ತೆರೆ ಕಂಡಿದ್ದ ಸಿನಿಮಾ. ಪ್ರವೀಣ್ ಕೃಪಾಕರ್ ನಿರ್ದೇಶನದ ಚಿತ್ರದಲ್ಲಿ ದಿ.ಸಂಚಾರಿ ವಿಜಯ್ ಪ್ರಧಾನ ಪಾತ್ರದಲ್ಲಿದ್ದರು. ಮಂಡ್ಯ ರಮೇಶ್, ರಮೇಶ್ ಪಂಡಿತ್, ಚೈತ್ರಾ ಆಚಾರ್, ಬಿ ಸುರೇಶ್ ಮೊದಲಾದವರು ನಟಸಿದ್ದರು. ಮರ ಗಿಡಗಳನ್ನು ಪ್ರೀತಿಸುವ ಕುನ್ನಗೌಡನ ಕಥೆ ಇದ್ದ ಚಿತ್ರ. ಬಾಕ್ಸಾಫೀಸ್ ಗೆಲ್ಲಲಿಲ್ಲವಾದರೂ, ಕೆಲವು ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಹೀಗಾಗಿ 2020ರ ರಾಜ್ಯ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೂ ಚಿತ್ರದ ಮೇಲಿದೆ. ಆದರೆ ಆ ನಿರೀಕ್ಷೆಗೇ ಶಾಕ್ ಕಾದಿದೆ.
ಏಕೆಂದರೆ 2020 ಅವಾರ್ಡ್ ಕಮಿಟಿ ಕಾಂಟ್ರವರ್ಸಿಗೆ ಸಿಲುಕಿದೆ. ಕಾರಣ ತಲೆದಂಡ. ಸಹಜವಾಗಿಯೇ 2020ರಲ್ಲಿ ರಿಲೀಸ್ ಆಗಿದ್ದ ತಲೆದಂಡ ಚಿತ್ರವೂ ಪ್ರಶಸ್ತಿ ರೇಸಿನಲ್ಲಿದೆ. ಆದರೆ ತಲೆದಂಡ ಚಿತ್ರದಲ್ಲಿ ಕೆಲಸ ಮಾಡಿದ್ದ ಸಂಪತ್ ಈಗ ಅವಾರ್ಡ್ ಕಮಿಟಿಯಲ್ಲಿದ್ದಾರೆ. ನಿಯಮಗಳ ಪ್ರಕಾರ ಪ್ರಶಸ್ತಿ ರೇಸಿನಲ್ಲಿರುವ ಚಿತ್ರದಲ್ಲಿ ಕೆಲಸ ಮಾಡಿರುವ (ಅದು ಯಾವ ವಿಭಾಗವೇ ಆಗಿರಲಿ) ವ್ಯಕ್ತಿಗಳು ಪ್ರಶಸ್ತಿ ಕಮಿಟಿಯಲ್ಲಿ ಇರುವಂತಿಲ್ಲ. ಆದರೆ 2020ರ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ತಲೆದಂಡಕ್ಕೆ ಕೆಲಸ ಮಾಡಿರುವ ಸಂಪತ್ ಕೂಡಾ ಇದ್ದಾರೆ. ಸಂಪತ್ ತಲೆದಂಡ ಚಿತ್ರದಲ್ಲಿ ಪ್ರೊಡಕ್ಷನ್ ಪ್ಲಾನಿಂಗ್ ಸಪೋರ್ಟ್ ಆಗಿದ್ದರು. ಚಿತ್ರದ ಟೈಟಲ್ ಕಾರ್ಡಿನಲ್ಲಿ ಕೂಡಾ ಸಂಪತ್ ಅವರ ಹೆಸರಿದೆ. ಹೀಗಾಗಿ ಮತ್ತೊಂದು ರಾಜ್ಯ ಸರ್ಕಾರ ಮತ್ತೊಂದು ಮುಜುಗರ ಎದುರಿಸುವುದು ಶತಃಸಿದ್ಧ. ಮುಜುಗರ ತಪ್ಪಿಸಿಕೊಳ್ಳಲು ಸಂಪತ್ ಅವರನ್ನು ಆಯ್ಕೆ ಕಮಿಟಿಯಿಂದ ಹೊರಗಿಡುತ್ತದೆಯೋ.. ಅಥವಾ ತಲೆದಂಡ ಚಿತ್ರವನ್ನೇ ಹೊರಗಿಡುತ್ತದೆಯೋ.. ಎನ್ನುವುದು ಪ್ರಶ್ನೆ.
ಏನೇ ಆಗಲಿ.. ತಲೆದಂಡ ಚಿತ್ರಕ್ಕೆ ಶಾಕ್ ಕಾದಿದೆ ಎನ್ನುತ್ತಾರೆ ಚಿತ್ರರಂಗ ಹಾಗೂ ಕಮಿಟಿಯಲ್ಲಿರುವ ಹಿರಿಯ ಅಧಿಕಾರಿಗಳು. ಅದಕ್ಕೆ ಕಾರಣವೂ ಇದೆ. ಈ ಹಿಂದೆ ಖ್ಯಾತ ನಿರ್ದೇಶಕ ಭಗವಾನ್ ಅವರು ಕಮಿಟಿ ಅಧ್ಯಕ್ಷರಾಗಿದ್ದಾಗ ಅವರು ಒಂದು ಸಿನಿಮಾದಲ್ಲಿ ಕೆಲಸ ಮಾಡಿದ್ದರು ಎಂಬ ಕಾರಣಕ್ಕೆ, ಕಮಿಟಿಯಿಂದಲೇ ಹೊರಬರಬೇಕಾಯ್ತು. ಈಗ ತಲೆದಂಡಕ್ಕೂ ಅದೇ ಗತಿ ಕಾದಿದೆ.
ಅಂದಹಾಗೆ ಪ್ರಶಸ್ತಿ ಆಯ್ಕೆ ಕಮಿಟಿಯಲ್ಲಿ (ಅದು ಆಸ್ಕರ್ ಇರಲಿ, ರಾಷ್ಟ್ರ ಪ್ರಶಸ್ತಿಯೇ ಇರಲಿ. ಫಿಲಂಫೇರ್ ಇರಲಿ) ಸ್ಪರ್ಧೆಯಲ್ಲಿರುವ ಚಿತ್ರಗಳಲ್ಲಿ ಕೆಲಸ ಮಾಡಿದವರು ಇರುವಂತಿಲ್ಲ. ಇರುವುದಿಲ್ಲ. ಇಷ್ಟು ಸಾಮಾನ್ಯ ವಿಷಯವನ್ನು ಸರ್ಕಾರ ಅದು ಹೇಗೆ ಮರೆತಿತು ಎನ್ನುವುದೇ ಅರ್ಥವಾಗದ ಪ್ರಶ್ನೆ.