ಸಿಎಂ ಸ್ಥಾನ ಬದಲಾವಣೆಗೆ ಬಂಗಾರಪ್ಪ, ಮೊಯ್ಲಿ ಸೂತ್ರಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿದ್ಯಂತೆ. ಹಂಗಾದ್ರೆ ಪ್ಲಸ್ಸು.. ಹಿಂಗಾದ್ರೆ ಮೈನಸ್ ಅಂತಿರೋ ಹೈಕಮಾಂಡ್ ಬಳಿ ಇರೋ ಬಂಗಾರಪ್ಪ, ಮೊಯ್ಲಿ ಸೂತ್ರ ಏನು..? ಅದು ಜಾರಿಗೆ ಡಿಕೆಶಿ ಸಿಎಂ ಆಗೋದು ಪಕ್ಕಾ ಅಂದ್ರೆ, ಕಾಂಗ್ರೆಸ್ ಹೈಕಮಾಂಡಿಗೇಕೆ ಭಯ..? ಒಂದು ಅಚ್ಚರಿಯ ಹಿಸ್ಟರಿ ಇಲ್ಲಿದೆ.
ಏನಿದು ಬಂಗಾರಪ್ಪ, ಮೊಯ್ಲಿ ಸೂತ್ರ ಅನ್ನೋದನ್ನ ನೋಡೋದಾದ್ರೆ, ಮೊದಲು ಮೊಯ್ಲಿ ಸೂತ್ರ ಅರ್ಥ ಮಾಡ್ಕೊಳ್ಳೋಣ. ಇದು ನಡೆದಿದ್ದು 1990ರಲ್ಲಿ. ಆಗ ಸಿಎಂ ಆಗಿದ್ದ ವೀರೇಂದ್ರ ಪಾಟೀಲ್ ಅವರನ್ನು ಅನಾರೋಗ್ಯದ ಸಮಸ್ಯೆ ಒಡ್ಡಿ, ವೀರೇಂದ್ರ ಪಾಟೀಲ್ ಸ್ಥಾನಕ್ಕೆ ಬಂಗಾರಪ್ಪ ನೇಮಕ ಮಾಡಿದ್ದು ಗೊತ್ತೇ ಇದೆ. ಅಂದು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಲಿಂಗಾಯತರು, ಇವತ್ತಿನವರೆಗೂ ಕಾಂಗ್ರೆಸ್ ಜೊತೆ ನಿಂತಿಲ್ಲ.
ಆಗ ನಡೆದದ್ದೇನೆಂದರೆ ಆಗ ಪಕ್ಷದಲ್ಲಿ ಬಂಗಾರಪ್ಪಗಿಂತ ಕೆ.ಹೆಚ್. ಪಾಟೀಲ್ ಪರ ಒಲವು ಹೆಚ್ಚಿತ್ತು. ಹುಲಕೋಟಿಯ ಹುಲಿ ಎಂದೇ ಖ್ಯಾತರಾಗಿದ್ದ ಕೆಹೆಚ್ ಪಾಟೀಲ್ (ಈಗ ಸಚಿವರಾಗಿರುವ ಹೆಚ್.ಕೆ.ಪಾಟೀಲ್ ಅವರ ತಂದೆ) ಜನಪ್ರಿಯತೆ ತುತ್ತತುದಿಯಲ್ಲಿತ್ತು. ಆಗ ಕೆ ಹೆಚ್ ಪಾಟೀಲರ ಮನವೊಲಿಸಿದ್ದ ರಾಜೀವ್ ಗಾಂಧಿ, ಪಕ್ಷಕ್ಕಾಗಿ ಸಿಎಂ ಸ್ಥಾನಕ್ಕೆ ಹಠ ಮಾಡಬೇಡಿ ಎಂದು ಕೇಳಿಕೊಂಡಿದ್ದರಂತೆ. ಆಗ ರಾಜೀವ್ ಗಾಂಧಿ ಆದೇಶವನ್ನು ಪಾಲಿಸಿದ್ದ ಕೆಹೆಚ್ ಪಾಟೀಲ್ ʻನೀವು ಕೇಳಬಾರದು ಸರ್, ಆದೇಶ ನೀಡಬೇಕುʼ ಎಂದಿದ್ದರಂತೆ. ಆಗ ವೀರೇಂದ್ರ ಪಾಟೀಲ್ ಸ್ಥಾನಕ್ಕೆ ನೇಮಕವಾಗಿದ್ದ ಬಂಗಾರಪ್ಪ ನೇಮಕವಾದರು. ಇದು ಬಂಗಾರಪ್ಪ ಸೂತ್ರ.
ಎರಡನೇ ಕಥೆ ಮೊಯ್ಲಿ ಸೂತ್ರ. ಬಂಗಾರಪ್ಪ ಸಿಎಂ ಆದ ಎರಡೇ ವರ್ಷದಲ್ಲಿ ತಿಕ್ಕಾಟ ಶುರುವಾಯ್ತು. 1992ರಲ್ಲಿ ಬಂಗಾರಪ್ಪ ಪದಚ್ಯುತರಾದಾಗ ಮತ್ತೆ ಬಿಕ್ಕಟ್ಟು ಎದುರಾಯ್ತು. ಆಗ ಎಸ್ ಎಂ ಕೃಷ್ಣ ಪರ ಪಕ್ಷದಲ್ಲಿ ಹೆಚ್ಚು ಒಲವು ಕಂಡಿತ್ತು. ಸ್ಥಳೀಯ ಶಾಸಕರೆಲ್ಲ ಕೃಷ್ಣ ಪರವಾಗಿದ್ದರು. ಆಗ ಪಿವಿ ನರಸಿಂಹರಾವ್ ಪ್ರಧಾನಮಂತ್ರಿಯಾಗಿದ್ದರು. ಪಿವಿ ನರಸಿಂಹರಾವ್ ಬಳಿ ಮೊಯ್ಲಿ ಬಣ ವಕಾಲತ್ತು ವಹಿಸಿತ್ತು. ಕೇರಳದ ಕರುಣಾಕರನ್, ತಮಿಳುನಾಡಿನ ಎಂ ಚಂದ್ರಶೇಖರ್ ವಕಾಲತ್ತು ಮಾಡಿ, ಆಗ ದೇವಮಾನವ ಎಂದೇ ಹೆಸರಾಗಿದ್ದ ಚಂದ್ರಸ್ವಾಮಿ (ಚಂದ್ರಸ್ವಾಮಿಯವರ ಬಗ್ಗೆ ನರಸಿಂಹರಾಯರಿಗೆ ವಿಶೇಷ ಪ್ರೀತಿ, ಗೌರವ ಆದರಗಳಿದ್ದವು) ಅವರಿಂದ ಹೇಳಿಸಿದರು. ನಂತರ ನರಸಿಂಹರಾವ್ ಎಸ್ ಎಂ ಕೃಷ್ಣ ಅವರನ್ನು ಮನವೊಲಿಸಿದ್ದರು ಬಂಗಾರಪ್ಪ ಜಾಗಕ್ಕೆ ಸಿಎಂ ಆಗಿ ವೀರಪ್ಪ ಮೊಯ್ಲ ಬಂದಿದ್ದರು. ಇದು ಕಥೆ.
ಆದರೆ ಕಾಂಗ್ರೆಸ್ಸಿಗೆ ಕಾಡುತ್ತಿರುವ ಭಯ ಏನೆಂದರೆ, 1980ರಲ್ಲಿ ಜನಪ್ರಿಯ ಸಿಎಂ ದೇವರಾಜ ಅರಸು ಅವರನ್ನು ಕೆಳಗಿಳಿಸಿತ್ತು. ನಂತರ 1983ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಕರ್ನಾಟಕದಲ್ಲಿ ಅದೇ ಮೊದಲ ಬಾರಿಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು.
ಅದಾದ ಮೇಲೆ 1992ರಲ್ಲಿ ಬಂಗಾರಪ್ಪ ಅಧಿಕಾರ ಕಳೆದುಕೊಂಡಾಗ ಹೀನಾಯ ಸೋಲು ಎದುರಿಸಿತ್ತು. 1994ರಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿತ್ತು. ವೀರೇಂದ್ರ ಪಾಟೀಲ್ ಮತ್ತು ಬಂಗಾರಪ್ಪ ಪದಚ್ಯುತಿ ತಿರುಗುಬಾಣವಾಗಿತ್ತು. ಅಂದರೆ ಜನಪ್ರಿಯ ನಾಯಕರನ್ನು ಸೈಡಿಗೆ ತಳ್ಳಿದಾಗಲೆಲ್ಲ ಕಾಂಗ್ರೆಸ್ ಸೋಲು ಎದುರಿಸಿದೆ.
ಅಲ್ಲದೆ ಅದಕ್ಕಿಂತಲೂ ಎರಡೂ ಪ್ರಕರಣಗಳಲ್ಲಿ ಸಿಎಂ ಬದಲಾವಣೆ ವೇಳೆ ಕಾಂಗ್ರೆಸ್ ಸಂಧಾನ ಸೂತ್ರದ ಮೊರೆ ಹೋಗಿತ್ತು. ಕಾಂಗ್ರೆಸ್ ಹೈಕಮಾಂಡ್ ಅಷ್ಟು ಪವರ್ ಫುಲ್ ಆಗಿತ್ತು. ಇನ್ನು ಒಪ್ಪಿಗೆ ಕೊಟ್ಟವರು ನಿಷ್ಠಾವಂತರೂ ಇದ್ದರು.
ಆದರೆ ಈಗ ಇರುವುದು ಸಿದ್ದರಾಮಯ್ಯ. ಸಂಧಾನ ಸೂತ್ರಕ್ಕೆ ಒಪ್ಪುತ್ತಾರಾ..? ಕಾಂಗ್ರೆಸ್ಸಿನಲ್ಲಿ ತಮಗೆ ಸಿಗಬೇಕಿದ್ದ ಸ್ಥಾನಮಾನಗಳನ್ನು ಹಠ ಹಿಡಿದೇ ಪಡೆದುಕೊಂಡವರು ಸಿದ್ದರಾಮಯ್ಯ.
ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿರುವುದೇ ಇದು. ಏಕೆಂದರೆ ಕರ್ನಾಟಕದಲ್ಲಿ 130ರಿಂದ 150 ಕ್ಷೇತ್ರಗಳಲ್ಲಿ ಕುರುಬ ಮತದಾರರಿದ್ದಾರೆ. 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅವರೇ ಪ್ರಧಾನ. 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಿರ್ಣಾಯಕರು. ಜೊತೆಗೆ ಸಿದ್ದರಾಮಯ್ಯ ಕಾರಣದಿಂದ ಅಹಿಂದ ಜೊತೆಯಲ್ಲಿದೆ ಎಂಬ ಮೆಸೇಜ್ ಹೈಕಮಾಂಡ್ ಎದುರು ಇದೆ. ಹೀಗಿರುವಾಗ ಕಾಂಗ್ರೆಸ್ ಹೈಕಮಾಂಡ್ ರಿಸ್ಕ್ ತೆಗೆದುಕೊಳ್ಳುತ್ತಾ..? ವೇಯ್ಟ್ & ಸೀ ಅಷ್ಟೇ ಪರಿಹಾರ.