ಮನದ ಕಡಲು. ಈಗ ಥಿಯೇಟರಿನಲ್ಲಿರುವ ಹೊಸ ಸಿನಿಮಾ. ನಿರ್ದೇಶಕರು ಯೋಗರಾಜ್ ಭಟ್ಟರು. ಚಿತ್ರದ ಟ್ರೇಲರ್ ಅದ್ಭುತವಾಗಿತ್ತು. ಹೀಗಾಗಿ ಭಟ್ಟರು ಬದಲಾಗಿರಬಹುದು, ಒಂದೊಳ್ಳೆ ಕಥೆಯನ್ನು ಈ ಬಾರಿ ಡಿಫರೆಂಟ್ ಆಗಿ ಹೇಳಿರಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಸಿನಿಮಾ ನೋಡಿದವರು.. ಭಟ್ಟರು ಬದಲಾಗಿಲ್ಲ, ಸೇಮ್ ಟು ಸೇಮ್.. ಭಟ್ಟರ ಮೇಲೆ ಇನ್ನೂ ನಿರೀಕ್ಷೆ ಇಟ್ಟುಕೊಳ್ಳುವುದು ನಮ್ಮದೇ ತಪ್ಪು ಅಂತಿದ್ದಾರೆ. ಇಷ್ಟಕ್ಕೂ ಹಾಗೆ ಹೇಳುತ್ತಿರುವುದು ಭಟ್ಟರ ಖಂಡತುಂಡ ವಿರೋಧಿಗಳೇನಲ್ಲ. ಅಪ್ಪಟ ಅಭಿಮಾನಿಗಳು. ಇಷ್ಟಕ್ಕೂ ಭಟ್ಟರು ಮಾಡುವ ತಪ್ಪೇನು..?
ಮನದ ಕಡಲು ಚಿತ್ರದ ಕಥೆ ನೋಡಿದಾಗ ಅನ್ನಿಸೋದು ಇಷ್ಟೇ..
ಮನದ ಕಡಲುನಲ್ಲೂ ಮೂರು ವರ್ಷ ಎಂಬಿಬಿಎಸ್ ಓದಿ, ಕೊನೇ ವರ್ಷದಲ್ಲಿ ಏಕಾಏಕಿ ಕಾಲೇಜು ಬಿಟ್ಟು ಊರು ಸುತ್ತುತ್ತಾ.. ಊರೆಲ್ಲಾ ಬೈಕೊಂಡು ಓಡಾಡೋ ಹೀರೋ ಇದ್ದಾನೆ. ಭಟ್ಟರ ಚಿತ್ರಗಳಲ್ಲಿ ಹೀರೋ ಯಾಕೆ ಬೇಜವಾಬ್ದಾರಿತನಕ್ಕೆ ಹುಟ್ಟಿದಂತೆ ಆಡುತ್ತಾನೆ.. ಅರ್ಥವಾಗಲ್ಲ. ಇನ್ನು ಹೀರೋಯಿನ್ನುಗಳೂ ಅಷ್ಟೇ.. ತಿಕ್ಕಲು ತಿರುಗಿದಂತಾಡುವ ನಾಯಕಿಯರು. ಅಷ್ಟಿಷ್ಟು ಚುರುಕಿನ ಸಂಭಾಷಣೆಗಳಿರುತ್ತವೆ. ಆದರೆ.. ಪಾತ್ರಕ್ಕೊಂದು ಗಟ್ಟಿತನ ಇರಲ್ಲ.
ಇನ್ನು ಚಿತ್ರದ ಹೀರೋ, ಹೀರೋಯಿನ್ನು, ಪೋಷಕ ಪಾತ್ರಗಳು.. ಎಲ್ಲರೂ ಭಟ್ಟರಂತೆಯೇ ಮಾತನಾಡುತ್ತವೆ. ತಂದೆ, ತಾಯಿ, ಗೆಳೆಯ.. ಯಾರೇ ಆದರೂ.. ಥೇಟು ಭಟ್ಟರಂತೆಯೇ ಮಾತನಾಡುತ್ತವೆ.
ಭಟ್ಟರ ಚಿತ್ರದ ಕಥೆಗಳಲ್ಲಿ ಬರುವ ಪಾತ್ರಗಳು ಉಡಾಫೆಯನ್ನೇ ವ್ಯಕ್ತಿತ್ವ ಎಂದು ಬದುಕುತ್ತವೆ. ಅಂತಹ ಪಾತ್ರಗಳಿಂದ ವೇದಾಂತ, ಬೋಧನೆ ಹೇಳಿಸುವ ಪ್ರಯತ್ನ ಎಲ್ಲ ಚಿತ್ರಗಳಲ್ಲಿಯೂ ಆಗುತ್ತದೆ. ಆಗುತ್ತಿದೆ. ಭಟ್ಟರು ಬದಲಾಗಿಲ್ಲ.
ಭಟ್ಟರು ಮುಂಗಾರು ಮಳೆ ನಂತರ ಗಾಳಿಪಟ, ಮನಸಾರೆ, ಪಂಚತಂತ್ರ, ಗಾಳಿಪಟ 2, ಪಂಚರಂಗಿ, ಡ್ರಾಮಾ, ದನಕಾಯೋನು, ಮುಗುಳುನಗೆ, ಪರಮಾತ್ಮ, ಗರಡಿ, ಕರಟಕ ದಮನಕ, .. ಹೀಗೆ ಯಾವುದೇ ಸಿನಿಮಾ ನೋಡಿ.. ಪಾತ್ರಗಳ್ಯಾವುದೂ ಅಕ್ಕಪಕ್ಕ ಇರುವಂತೆ ಅನಿಸೋದಿಲ್ಲ. ಭಟ್ಟರ ಆತ್ಮವನ್ನೇ ಆವಾಹನೆ ಮಾಡಿಕೊಂಡಿರುತ್ತವೆ.
ಒಂದು ಸುಂದರ ಊರು, ಆ ಊರಿಗೆ ನಾಯಕಿಯನ್ನು ಹುಡುಕಿಕೊಂಡು ಹೋಗುವ ನಾಯಕ, ಅಲ್ಲಿ ಪೋಲಿ ಪೋಲಿಯಾಗಿ ಮಾತನಾಡುವ ನಾಯಕಿ, ಅವರಿಗೆ ತಕ್ಕಂತೆ ಇರುವ ಒಂದಿಷ್ಟು ಪೋಷಕ ಪಾತ್ರಗಳು, ಕೊನೆಯಲ್ಲಿ ಒಂದೈದು ನಿಮಿಷದ ಗಂಭೀರತೆ, ಕ್ಲೈಮಾಕ್ಸಿನಲ್ಲೊಂದು ಮೆಸೇಜು, ಆಮೇಲೆ ಮತ್ತದೇ ತುಂಟ ಭಾಷೆ..
ಮುಂಗಾರು ಮಳೆ ಮಾಡಿದಾಗ ಅದು ಹೊಸತು. ಗಾಳಿಪಟದಲ್ಲಿ ಅದು ತೇಲಿಕೊಂಡು ಹೋಯಿತು. ಆದರೆ ಅದಾದ ಮೇಲೆ ಭಟ್ಟರ ಚಿತ್ರಗಳು ಗೆದ್ದಿಲ್ಲ. ಸೋತೂ ಇಲ್ಲ ಎನ್ನುವುದು ಬೇರೆ ಮಾತು.
ಇನ್ನು ಭಟ್ಟರ ಹಾಡುಗಳಲ್ಲಿ ಒಂದಿಷ್ಟು ವೆರೈಟಿ ಇರುತ್ತದೆ. ಆ ವೆರೈಟಿಯೂ ಅಷ್ಟೇ.. ಈಗ ಹಾಡು ಕೇಳಿದರೆ ಸಾಕು, ಇದು ಭಟ್ಟರದ್ದೇ ಎಂದು ಹೇಳಿಬಿಡಬಹುದು.
ಇನ್ನು ಗಳು ಪ್ರೇಮ. ಮನದ ಕಡಲಿನಲ್ಲಿ ಆಗಿರುವುದು ಕೂಡಾ ಆದೆ. ಸಮುದ್ರಗಳು, ಅಲೆಗಳು, ಅರ್ಧಕ್ಕೆ ಬಿಟ್ಟ ಎಂಬಿಬಿಎಸ್ ಕೋರ್ಸ್‌ಗಳು, ಧನ್ವಂತರಿ ಚಿಕಿತ್ಸೆಗಳು, ಕಾಯಿಲೆ-ಕಸಾಲೆಗಳು, ಬುಡಕಟ್ಟು ಜನಗಳು, ಇಬ್ಬರು ಹುಡುಗಿಯರುಗಳು, ಒಬ್ಬ ಹುಡುಗನ ಎಳೆ ಪ್ರೇಮದಾಟಗಳು, ನಗು ತರಿಸುವ ಪೋಲಿ ಮಾತುಗಳು, ಟ್ವಿಸ್ಟ್ & ಟರ್ನ್‌ಗಳು, ಬೆಟ್ಟಗಳು, ಮಳೆಗಳು, ಕಡಲುಗಳು, ಬೋಧನೆಗಳು, ಪ್ರೀತಿ ಮಾತುಗಳು, ವೇದಾಂತಗಳು.. ಎಲ್ಲವೂ ಚಿತ್ರದಲ್ಲಿವೆ. ಸಿನಿಮಾ ನೋಡುತ್ತಿರುವಷ್ಟು ನಗು ನಗಿಸುತ್ತಲೇ ʻಮನದ ಕಡಲುʼ ಕೊನೆಯಲ್ಲಿ ಒಂದಿಷ್ಟು ಸೀರಿಯಸ್ ಆಗುತ್ತದೆ.
ಭಟ್ಟರು ಕಥೆ ಹೇಳಲು ಶುರುವಾದ ಕ್ಷಣದಿಂದ.. ಆವರಿಸಿಕೊಳ್ಳಲು ಸೋಲುತ್ತಾರೆ. ಏನೋ ಹೊಸದು ಹೇಳುತ್ತಿದ್ದಾರೆ ಎನ್ನಿಸುವಾಗಲೇ.. ಮತ್ತದೇ ಹಳೇ ಟ್ರ್ಯಾಕಿಗೆ ಮರಳುತ್ತಾರೆ. ತೆ ಸಂಭಾಷಣೆ ಒಪ್ಪಿಸುವ ರೀತಿ, ಎಮೋಷನಲ್, ತರಲೆ ಎಲ್ಲದರಲ್ಲೂ ಭಟ್ಟರು ಕಾಣಿಸುತ್ತಾರೆ.
ಒಟ್ಟಿನಲ್ಲಿ ಭಟ್ಟರು ಬದಲಾಗಿಲ್ಲ. ಆದರೆ.. ಯೋಗರಾಜ್ ಭಟ್ಟರನ್ನು ಪ್ರೀತಿಸುತ್ತಿದ್ದ, ಅಭಿಮಾನಿಸುತ್ತಿದ್ದ ಪ್ರೇಕ್ಷಕರು ಬದಲಾಗಿದ್ಧಾರೆ. ಅದು ಭಟ್ಟರಿಗೆ ಅರ್ಥವಾಗಿಲ್ಲ. ಹೊಸ ಹುಡುಗರು ಭಟ್ಟರ ಫಿಲಾಸಫಿಯನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.