2019ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿ ಸಂಭ್ರಮಿಸುವ ಸಮಯದಲ್ಲೇ ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿ ನಿರಾಕರಿಸಿ ಸಂಚಲನ ಸೃಷ್ಟಿಸಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಬೇಡ ಬೇಡ ಎಂದರೂ ನೆನಪಾಗುತ್ತಿರುವುದು ವಿಷ್ಣುವರ್ಧನ್ ಅವರಿಗೆ ಆಗಿದ್ದ ಅವಮಾನ. ಆಗ ವಿಷ್ಣುವರ್ಧನ್ ತಮ್ಮದೇ ಶೈಲಿಯಲ್ಲಿ ಪ್ರತಿಭಟನೆ ತೋರಿಸಿದ್ದರು.
ಇನ್ನು ಈಗ ‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಕಿಚ್ಚ ಸುದೀಪ್ ಆಯ್ಕೆಯಾಗಿತ್ತು. ಅತ್ಯುತ್ತಮ ನಟ ಪ್ರಶಸ್ತಿಯನ್ನು ಸುಬ್ಬಯ್ಯ ನಾಯ್ಡು ಅವರ ಹೆಸರಿನಲ್ಲಿ ಸರ್ಕಾರ ನೀಡುತ್ತಿತ್ತು. ಈಗ ಆ ಪ್ರಶಸ್ತಿ ತಮಗೆ ಬೇಡ ಎಂದಿದ್ದಾರೆ ಪೈಲ್ವಾನ್ ಸುದೀಪ್. ಸೌಮ್ಯವಾಗಿಯೇ ತಿರಸ್ಕರಿಸಿದ್ದಾರೆ. ಆದರೆ ವಿಷ್ಣುವರ್ಧನ್ ಅವರಿಗೆ ಆಗಿದ್ದಂತಹ ಅವಮಾನವೇನೂ ಸುದೀಪ್ ಅವರಿಗೆ ಆಗಿಲ್ಲ. ಇದು ಸುದೀಪ್ ಅವರ ಪರ್ಸನಲ್ ಆಯ್ಕೆ.
ಸುದೀಪ್ ಅವರು ʻʻನನ್ನನ್ನು ಆಯ್ಕೆ ಮಾಡಿದ ತೀರ್ಪುಗಾರರಿಗೆ ಧನ್ಯವಾದಗಳು. ನಾನು ಪ್ರಶಸ್ತಿಗಳನ್ನು ಪಡೆಯೋದು ಬಿಟ್ಟು ತುಂಬಾ ವರ್ಷಗಳಾಗಿದೆ. ನನಗಿಂತ ಉತ್ತಮ ಕಲಾವಿದರು ತುಂಬಾ ಜನ ಇದ್ದಾರೆ. ಅವರಿಗೆ ಈ ಪ್ರಶಸ್ತಿ ಸಿಕ್ಕರೆ ಅದೇ ನನಗೆ ತುಂಬಾ ಖುಷಿಯ ವಿಚಾರ. ಈ ಪ್ರಶಸ್ತಿಯನ್ನು ವಿನಮ್ರವಾಗಿ ತಿರಸ್ಕಾರ ಮಾಡಿದ್ದೇನೆʼʼ ಎಂದು ತಿಳಿಸಿದ್ದಾರೆ.
ತಮ್ಮನ್ನು ಆಯ್ಕೆ ಮಾಡಿದವರಿಗೆ ಅತ್ಯಂತ ಗೌರವಪೂರ್ವಕವಾಗಿಯೇ ಅಭಿನಂದನೆ ಸಲ್ಲಿಸಿರುವ ಸುದೀಪ್, ತಾವು ಹಲವು ವರ್ಷಗಳಿಂದ ಯಾವುದೇ ಪ್ರಶಸ್ತಿ, ಪುರಸ್ಕಾರ ಸ್ವೀಕರಿಸುತ್ತಿಲ್ಲ ಎಂದಿದ್ದಾರೆ. ನನಗಿಂತಲೂ ಅರ್ಹರಿದ್ದಾರೆ. ಅವರಿಗೆ ಪ್ರಶಸ್ತಿ ಕೊಡಿ ಎಂದು ಹೇಳಿರುವ ಸುದೀಪ್, ವೈಯಕ್ತಿಕ ಕಾರಣ ಹೇಳಿದ್ದಾರೆ. ಆ ವೈಯಕ್ತಿಕ ಕಾರಣ ಏನೆಂದು ಹೇಳಿಲ್ಲ, ಅಷ್ಟೆ.
ಇತ್ತೀಚೆಗೆ ಸುದೀಪ್ ಅವರಿಗೆ ಗೌರವ ಡಾಕ್ಟರೇಟ್ ಕೊಡಲು ಯುನಿವರ್ಸಿಟಿ ಮುಂದೆ ಬಂದಿತ್ತು. ಆಗಲೂ ಕೂಡಾ ಗೌರವ ಡಾಕ್ಟರೇಟ್ ನಿರಾಕರಿಸಿದ್ದ ಸುದೀಪ್, ಈಗ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ನಿರಾಕರಿಸಿದ್ದಾರೆ. ಹಾಗೆ ನೋಡಿದರೆ ವಿಷ್ಣುವರ್ಧನ್ ಅವರಿಗೆ ಹಿಂದೊಮ್ಮೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು. ಆದರೆ ಆಗ ಅದನ್ನು ಬೇರೆ ಇನ್ನೊಬ್ಬ ನಟನ ಜೊತೆ ಹಂಚಿಕೊಳ್ಳಲಾಗಿತ್ತು. ಅಂದರೆ ಇಬ್ಬರಿಗೆ ಪ್ರಶಸ್ತಿ ನೀಡಲಾಗಿತ್ತು. ಆ ಘಟನೆ ಜರುಗಿದ್ದು 1998-99ರ ರಾಜ್ಯ ಪ್ರಶಸ್ತಿ ನಡೆದಾಗ. ಆ ವರ್ಷ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಮಂಡಳಿ ಅತ್ಯುತ್ತಮ ನಟ ಎಂದು ಇಬ್ಬರನ್ನು ಆಯ್ಕೆ ಮಾಡಿತ್ತು.
ಹೂಮಳೆ ಚಿತ್ರದ ಅಭಿನಯಕ್ಕಾಗಿ ರಮೇಶ್ ಅರವಿಂದ್ ಹಾಗೂ ವೀರಪ್ಪ ನಾಯ್ಕ ಚಿತ್ರಕ್ಕೆ ವಿಷ್ಣುವರ್ಧನ್ ಇಬ್ಬರನ್ನೂ ಅತ್ಯುತ್ತಮ ನಟ ಎಂದು ಪ್ರಶಸ್ತಿ ಕೊಟ್ಟಿತ್ತು. ಆಗ ಈಗಿನಂತಲ್ಲ. ರಾಜ್ಯ ಪ್ರಶಸ್ತಿ ವಿತರಣೆಯನ್ನೂ ಕುತೂಹಲವಾಗಿಟ್ಟು, ವೇದಿಕೆಯ ಮೇಲೇ ಘೋಷಿಸಲಾಗುತ್ತಿತ್ತು. ವೇದಿಕೆ ಮೇಲೆ ಏಕಾಏಕಿ ಘೋಷಿಸಿದ್ಧಾಗ ಬಿಡುವಂತೆಯೂ ಇಲ್ಲ. ಸ್ವೀಕರಿಸುವಂತೆಯೂ ಇಲ್ಲ. ಇಕ್ಕಟ್ಟಿಗೆ ಸಿಲುಕಿದ್ದ ವಿಷ್ಣುವರ್ಧನ್, ಕೊಟ್ಟ ಪ್ರಶಸ್ತಿಯನ್ನು ಸ್ವೀಕರಿಸಿ ಅದನ್ನು ಕುರ್ಚಿ ಮೇಲೆಯೇ ಬಿಟ್ಟು ಹೋಗಿದ್ದರು.
ಆನಂತರ ವಿವಾದಕ್ಕೆ ಪ್ರತಿಕ್ರಿಯಿಸಿದ್ದ ವಿಷ್ಣವರ್ಧನ್ ರಮೇಶ್ ಅವರಿಗೆ ಪ್ರಶಸ್ತಿ ಬಂದಿದ್ದಕ್ಕೆ ಬೇಸರ ಏನಿಲ್ಲ. ಆದರೆ ಯಾರಾದರೂ ಸರಿ, ಒಬ್ಬರಿಗೆ ಕೊಡಿ. ಇಬ್ಬರು ನಟರಿಗೆ ಒಂದೇ ಪ್ರಶಸ್ತಿ ಕೊಡುವುದು ನಟನಿಗೂ ಅವಮಾನ, ಪ್ರಶಸ್ತಿಗೂ ಅವಮಾನ ಎಂದಿದ್ದರು ವಿಷ್ಣುವರ್ಧನ್. ಈಗ ಪ್ರಶಸ್ತಿಯನ್ನೇ ಬೇಡ ಎನ್ನುವ ಮೂಲಕ ಸುದೀಪ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಹಿಂದೆಯೂ ಒಮ್ಮೆ ರಾಜ್ಯ ಪ್ರಶಸ್ತಿ ಪಡೆದಿರುವ ಸುದೀಪ್ 2002-03ರಲ್ಲಿ ನಂದಿ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.