ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಈಗ ತಟಸ್ಥ ಶಾಸಕರು ಶಕ್ತಿ ಮದ್ದು ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರ ನಿಂತಿರುವ ತಟಸ್ಥ ಶಾಸಕರು, ಯತ್ನಾಳ್ ಬಣಕ್ಕೆ ಶಾಕ್ ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಕಲಹದ ಬಳಿಕ ಬಲ ಹೆಚ್ಚಿಸಿಕೊಂಡ ಅಧ್ಯಕ್ಷ ವಿಜಯೇಂದ್ರಗೆ, ವಿಜಯೇಂದ್ರ ಯತ್ನಾಳ್ ಬಣ ಬಡಿದಾಟದಲ್ಲಿ ತಟಸ್ಥವಾಗಿದ್ದ ಶಾಸಕರಿಂದಲೂ ಬೆಂಬಲ ಸಿಕ್ಕಿದೆ. ವಿಜಯೇಂದ್ರ ಪರ ಬಹಿರಂಗ ಹೇಳಿಕೆ ನೀಡಿರುವ ಶಾಸಕರಾದ ಉಮಾನಾಥ್ ಕೊಟ್ಯಾನ್, ಎಸ್ ಆರ್. ವಿಶ್ವನಾಥ್ ಬಹಿರಂಗ ಹೇಳಿಕೆ ನೀಡಿದ್ದಾರೆ.
ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಹೇಳಿಕೆ ನೀಡಿರುವ ಶಾಸಕ ಉಮಾನಾಥ್ ಕೊಟ್ಯಾನ್, ನೇರವಾಗಿ ತಮ್ಮ ಬೆಂಬಲ ವಿಜಯೇಂದ್ರಗೆ ಎಂಬ ಸಂದೇಶ ಕೊಟ್ಟಿದ್ದಾರೆ. ಇನ್ನು ಪಕ್ಷದಿಂದ ಹೋಗುವವರೆಲ್ಲ ಹೋಗಿ ಬಿಡಲಿ, ಹೀಗೇ ಮುಂದುವರೆದರೆ ಕಡ್ಡಿ ಆಡಿಸುತ್ತಿರುವವರ ವಿರುದ್ಧ ಬೆಂಗಳೂರು ಶಾಸಕರೆಲ್ಲ ತಿರುಗಿ ಬೀಳಬೇಕಾದೀತು ಎಂದು ಬಹಿರಂಗ ಹೇಳಿಕೆ ನೀಡಿರುವುದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್.
ಬಹಿರಂಗವಾಗಿಯೇ ಯತ್ನಾಳ್ ಬಣದ ನಾಯಕರಿಗೆ ಟೋಟಲ್ ಕೌಂಟರ್ ಕೊಟ್ಟ ತಟಸ್ಥ ಶಾಸಕರು ವಿಜಯೇಂದ್ರಗೆ ಬೆಂಬಲ ಎಷ್ಟಿದೆ ಎಂಬ ಸಂದೇಶವನ್ನೇನೋ ಕೊಟ್ಟಿದ್ಧಾರೆ. ಈ ಮೂಲಕ ಮಾಜಿ ಸಚಿವರು, ಮಾಜಿ ಶಾಸಕರ ಜೊತೆಯಲ್ಲೀಗ ತಟಸ್ಥ ಶಾಸಕರಿಂದಲೂ ವಿಜಯೇಂದ್ರಗೆ ಬೆಂಬಲ ಸಿಕ್ಕಂತಾಗಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡ ನಾಯಕರು ವಿಜಯೇಂದ್ರ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದರೆ, ವಿಜಯೇಂದ್ರ ಪರವಾಗಿ ರೇಣುಕಾಚಾರ್ಯರಂತಹ ಕೆಲವು ಮಾಜಿ ಸಚಿವರು, ಶಾಸಕರು ಮಾತ್ರ ಬ್ಯಾಟಿಂಗ್ ಮಾಡುತ್ತಿದ್ದರು. ಇದೀಗ ಶಾಸಕರೂ ವಿಜಯೇಂದ್ರ ಪರ ದನಿ ಎತ್ತತೊಡಗಿದ್ದಾರೆ. ಇದರಿಂದ ವಿಜಯೇಂದ್ರ ಬಲ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ.
ಇತ್ತ ಚುನಾವಣೆಗೆ ಸಿದ್ಧ ಎಂದು ಬಹಿರಂಗ ಹೇಳಿಕೆ ನೀಡಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ತಕ್ಷಣಕ್ಕೆ ತೆಗೆದುಕೊಂಡಿರುವ ನಿರ್ಧಾರ ಮಾತ್ರ ಶಾಕಿಂಗ್ ಆಗಿದೆ. ಬಿಜೆಪಿಯಲ್ಲಿ ಆಂತರಿಕ ಚುನಾವಣಾ ವ್ಯವಸ್ಥೆ ಇದ್ದು, ಎಲ್ಲ ವನ್ನೂ ಎದುರಿಸಲು ಸಿದ್ಧನಿದ್ದೇನೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಪರೋಕ್ಷ ಸವಾಲು ಹಾಕಿದ್ದಾರೆ.
ಕೆಲಸ ಇಲ್ಲದವರ ಬಗ್ಗೆ ಮಾತನಾಡಲ್ಲ : ವಿಜಯೇಂದ್ರ
ಯತ್ನಾಳ್ ಇರಲಿ ಅಥವಾ ಯಾರೇ ಆಗಲಿ, ನಾನು ತಲೆಕೆಡಿಸಿಕೊಳ್ಳಲ್ಲ. ನನ್ನ ಕೆಲಸ ಮಾಡಿಕೊಂಡು ಹೋಗುತ್ತೇನೆ. ಕೆಲಸ ಇಲ್ಲದವರ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ನನ್ನನ್ನು ಟಾರ್ಗೆಟ್ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಕೆಲಸ ಮಾಡಲು ಬಂದಿದ್ದೇನೆ, ಕೆಲಸ ಮಾಡಿಕೊಂಡು ಹೋಗುತ್ತೇನೆ ಅಷ್ಟೇ ಎಂದಿದ್ದಾರೆ.
ಶಾಕಿಂಗ್ ನಿರ್ಧಾರ ಏನು..?
ಶಾಕಿಂಗ್ ನಿರ್ಧಾರ ಏನೆಂದರೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು. ರಾಜೀನಾಮೆ ನೀಡಿಯೇ ಚುನಾವಣೆ ಎದುರಿಸುವುದು. ತಮ್ಮ ಜೊತೆಯಲ್ಲೇ ಇದ್ದ, ಯಡಿಯೂರಪ್ಪ ಅವರಿಂದ ಅತೀ ಹೆಚ್ಚು ಉಪಕೃತರಾಗಿರುವ ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಡಿವಿ ಸದಾನಂದ ಗೌಡ ಅವರಂತಹ ನಾಯಕರು ಉಲ್ಟಾ ಹೊಡೆದಿದಕ್ಕೆ ಬೇಸರವಾಗಿರುವ ವಿಜಯೇಂದ್ರ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಎಲೆಕ್ಷನ್ ಫೇಸ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಆದರೆ ಇದ್ಯಾಕೋ ವಿಪರೀತಕ್ಕೆ ಹೋಗುತ್ತಿದೆ ಎಂದು ಅರಿವಾಗಿರುವ ತಿರುಗಿಬಿದ್ದಿರುವ ನಾಯಕರೇ ಈಗ ವಿಜಯೇಂದ್ರ ಅವರನ್ನು ಸಮಾಧಾನ ಪಡಿಸಲು ಮುಂದಾಗಿದ್ದಾರಂತೆ.