ನಾನು ಯತ್ನಾಳ್ ಪರ ಇದ್ದೇನೆ. ಅವರಿಗಾಗಿ ಹೋರಾಟ ನಡೆಸುತ್ತೇನೆ ಎಂದಿದ್ದ ಜಯಮೃತ್ಯುಂಜಯ ಸ್ವಾಮೀಜಿ ಪೀಠಕ್ಕೇ ಈಗ ಕುತ್ತು ಬಂದಿದೆ. ಬೇಕಾದ್ರೆ ಸ್ವಾಮೀಜಿನ ಮನೇಲ್ ಇಟ್ಕೊಳ್ಳೋಕ್ ಹೇಳಿ. ಪಕ್ಷಕ್ಕೆ ಸೀಮಿತವಾಗಿ ಯಾವ ಸ್ವಾಮೀಜಿ ಇದ್ರೂ ಬಿಡೋದಿಲ್ಲ ಎನ್ನುತ್ತಿರುವ ವಿಜಯಾನಂದ ಕಾಶಪ್ಪನವರ್, ಸ್ವಾಮೀಜಿಯೇ ಇರೋದಿಲ್ಲ ಅಂತಿದ್ದಾರೆ. ಅಂದಹಾಗೆ ಕಾಶಪ್ಪನವರ್, ಬಿಜೆಪಿಯವರಲ್ಲ, ವಿಜಯೇಂದ್ರ ಬಣದವರಂತೂ ಅಲ್ಲವೇ ಅಲ್ಲ. ಪಕ್ಕಾ ಬಿಜೆಪಿ ವಿರೋಧಿ ಕಾಂಗ್ರೆಸ್ ಶಾಸಕ. ಇಷ್ಟಕ್ಕೂ ಅವರು ಹೀಗೆ ಹೇಳಿದ್ಯಾಕೆ..? ಜಯಮೃತ್ಯುಂಜ ಸ್ವಾಮಿ ತಪ್ಪುಗಳೇನು ಎಂದು ನೋಡಿದರೆ..
1. ಯತ್ನಾಳ್ ತಾಳಕ್ಕೆ ಕುಣಿಯುತ್ತಿದ್ದಾರೆ ಎಂಬ ಆರೋಪ
ಇತ್ತೀಚೆಗೆ ಕೆಲವು ತಿಂಗಳಿಂದ ಜಯಮೃತ್ಯುಂಜಯ ಸ್ವಾಮೀಜಿ, ಯತ್ನಾಳ್ ಅವರು ಹೇಳಿದಂತೆ ಕೇಳುತ್ತಿದ್ದಾರೆ. ಅವರ ಪರವಾಗಿ ಕೆಲಸ ಮಾಡ್ತಿದ್ಧಾರೆ ಅನ್ನೋ ಆರೋಪಗಳಿವೆ.
2. ಯತ್ನಾಳ್ ಜೊತೆ ಪದೇ ಪದೇ ಭೇಟಿ
ಇನ್ನು ಯತ್ನಾಳ್ ಅವರ ರಾಜಕೀಯ ಹೆಜ್ಜೆಯಲ್ಲಿ ಸಕ್ರಿಯವಾಗಿರೋ ಸ್ವಾಮೀಜಿ, ಯತ್ನಾಳ್ ಅವರನ್ನು ಪದೇ ಪದೇ ಭೇಟಿಯಾಗುತ್ತಿದ್ದಾರೆ. ಇದು ಸಮಾಜದಲ್ಲಿ ತಪ್ಪು ಸಂದೇಶ ನೀಡಿದಂತೆ ಎಂಬ ಆರೋಪಗಳಿವೆ. ಅಲ್ಲದೆ ಕಾಶಪ್ಪನವರ್ ಸೇರಿದಂತೆ ಬೇರೆಯವರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲವಂತೆ.
3.2ಎ ಮೀಸಲಾತಿಗಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ
ಪಂಚಮಸಾಲಿಗಳಿಗೆ 2ಎನಲ್ಲಿ ಮೀಸಲಾತಿ ನೀಡಿ ಎನ್ನುವುದು ಸ್ವಾಮೀಜಿಗಳ ಬೇಡಿಕೆ. ಆದರೆ ಆ ಬೇಡಿಕೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಸ್ವಾಮೀಜಿ ಸರ್ಕಾರದ ವಿರುದ್ಧವೇ ಗುಡುಗುತ್ತಿದ್ದಾರೆ ಎಂಬುದು ಕಾಶಪ್ಪನವರ್ ಸಿಟ್ಟಿಗೆ ಕಾರಣ.
4.ಬಿಜೆಪಿಯಲ್ಲಿರುವ ಯತ್ನಾಳ್ ಬಣದ ಶಾಸಕರ ಪರ ವಕಾಲತ್ತು
ಬಿಜೆಪಿಯೊಳಗಿನ ರಾಜಕೀಯದೊಳಗೆ ಎಂಟ್ರಿ ಕೊಟ್ಟಿರುವ ಜಯಮೃತ್ಯುಂಜಯ ಸ್ವಾಮೀಜಿ, ಬಿಜೆಪಿಯಲ್ಲಿನ ಒಂದು ಗುಂಪಿನ ಶಾಸಕರ ಪರ ವಕಾಲತ್ತು ಮಾಡುತ್ತಿದ್ದಾರೆ ಎಂಬ ಆಕ್ರೋಶವೂ ಪಂಚಮಸಾಲಿಗಳಲ್ಲಿ ಇದೆ.
5. ಯತ್ನಾಳ್ ಪರ ಬಹಿರಂಗವಾಗಿ ಧ್ವನಿ
ಇದು ಈ ಎಲ್ಲ ಆಕ್ರೋಶಗಳೂ ಒಟ್ಟಿಗೇ ಸೇರಿ ಆಸ್ಪೋಟಕ್ಕೆ ಕಾರಣವಾಗಿದೆ, ಅಷ್ಟೇ. ಸಮುದಾಯ ಬಿಟ್ಟು, ರಾಜಕೀಯ ವಿಚಾರಕ್ಕೆ ಸುದ್ದಿಯಾಗುವುದು ಕಾಶಪ್ಪನವರ್ ಅವರಿಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಕೂಡಲ ಸಂಗಮ ಎಂದರೆ ನೆನಪಾಗುವುದು ಕಾಯಕಯೋಗಿ ಬಸವಣ್ಣ. ಆ ಪುಣ್ಯಕ್ಷೇತ್ರದಲ್ಲೇ ಇರುವ ಕೂಡಲಸಂಗಮ ಪೀಠ ಸ್ಥಾಪಿಸಿದ್ದು 2008. ಬಸವ ಜಯಮೃತ್ಯುಂಜಯ ಸ್ವಾಮೀಜಿಗಳೇ ಮೊದಲ ಸ್ವಾಮೀಜಿ. ಅವರೇ ಈಗ ಪೀಠತ್ಯಾಗ ಮಾಡುವ ಹಂತಕ್ಕೆ ಬಂದಿದ್ದಾರೆ.
ಕಾಶಪ್ಪನವರ್ ಮತ್ತು ಪಂಚಮಸಾಲಿ ಟ್ರಸ್ಟ್ ಸದಸ್ಯರ ವಾದ ಇಷ್ಟೇ. ಯತ್ನಾಳ್ ಪರ ಸಮುದಾಯದ ಹೋರಾಟ ಅಗತ್ಯ ಇಲ್ಲ. ಸಮುದಾಯ ಒಂದು ಪಕ್ಷ ಅಥವಾ ವ್ಯಕ್ತಿಯ ಪರ ಇರುವುದಿಲ್ಲ. ಇರಲೂಬಾರದು. ಸ್ವಾಮೀಜಿಗಳು ಕೂಡಾ ರಾಜಕೀಯ ಮಾಡಬಾರದು. ಟ್ರಸ್ಟ್ ಹೋರಾಟಗಳು ಸಮುದಾಯ ಕೇಂದ್ರಿತವಾಗಿರಬೇಕು. ಸ್ವಾಮೀಜಿಗಳು ರಾಜಕಾರಣಿಗಳ ಜೊತೆ ಗುರುತಿಸಿಕೊಳ್ಳಬಾರದು. ಎಲ್ಲಕ್ಕಿಂತ ಹೆಚ್ಚಾಗಿ ಇದು ಬಿಜೆಪಿಯೊಳಗಿನ ಆಂತರಿಕ ವಿಷಯ. ವೈಯಕ್ತಿಕ ಹೋರಾಟ. ಅದನ್ನು ಪಂಚಮಸಾಲಿ ಹೋರಾಟ ಎಂದು ಬಿಂಬಿಸೋದು ಯಾಕೆ.. ಎನ್ನುವುದು ಅವರ ಪ್ರಶ್ನೆ. ಅದು ನೇರವಾಗಿ ಯಡಿಯೂರಪ್ಪ, ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಪರ್ಸನಲ್ ಹೋರಾಟ. ಇನ್ನು ಯತ್ನಾಳ್ ನಾಲಗೆ, ಸಂಸ್ಕೃತಿ ಎರಡೂ ಸರಿ ಇಲ್ಲ. ಅಂತಹ ವ್ಯಕ್ತಿಯ ಪರವಾಗಿ ಹೋದರೆ, ಸಮುದಾಯಕ್ಕೂ ಮರ್ಯಾದೆ ಬರುವುದಿಲ್ಲ ಎನ್ನುವ ವಾದ ಕಾಶಪ್ಪನವರ್ ಅವರದ್ದು.
ಮೇ 13ರಂದು ಯತ್ನಾಳ್ ಪರ ಸ್ವಾಮೀಜಿ ಸಮಾವೇಶ ನಡೆಸುತ್ತೇವೆ ಎಂದು ಸ್ವಾಮೀಜಿ ಘೋಷಿಸಿ ಆಗಿದೆ. ಬಿಟ್ಟರು ಎಂದುಕೊಳ್ಳಿ.. ಅಲ್ಲಿಗೆ ಜೂನ್ ತಿಂಗಳಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಪೀಠಕ್ಕೆ ಕುತ್ತು ಬರುವುದಂತೂ ಸತ್ಯ.