ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಚಾರದಲ್ಲಿ ಬಿಜೆಪಿಯಲ್ಲಷ್ಟೇ ಅಲ್ಲ, ಸಮುದಾಯದಲ್ಲೂ ಭಿನ್ನಮತ ಭುಗಿಲೆದ್ದಿದೆ. ಯತ್ನಾಳ್ ಅವರ ಉಚ್ಚಾಟನೆ ಸರಿ ಇಲ್ಲ, ಅವರನ್ನು ಪುನಃ ಬಿಜೆಪಿಗೆ ವಾಪಸ್ ಕರೆದುಕೊಳ್ಳಬೇಕು ಎಂದು ಠರಾವು ಹೊಡೆಸಿದ್ದ ಜಯಮೃತ್ಯುಂಜಯ ಸ್ವಾಮೀಜಿ ಅವರ ವಿರುದ್ಧವೇ ಪಂಚಮಸಾಲಿ ಮುಖಂಡರು ತಿರುಗಿಬಿದ್ದಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿಗಳಿಗೆಂದೇ ಮೀಸಲಾಗಿರುವ ಕೂಡಲಸಂಗಮ ಮಠದ ಮಠಾಧಿಪತಿಗಳು ಎನ್ನುವುದು ವಿಶೇಷ.
ಹುಬ್ಬಳ್ಳಿಯಲ್ಲಿ ಖಾಸಗಿ ಹೋಟೆಲ್‌ನಲ್ಲಿ “ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್ ” ಹಾಗೂ ಸಮಾಜದ ಮುಖಂಡರು ಸಭೆ ನಡೆಸಿ, ತಮ್ಮ ಸಮುದಾಯದ ಸ್ವಾಮೀಜಿಗಳ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಹುಬ್ಬಳ್ಳಿ -ಧಾರವಾಡ, ಗದಗ, ಕೊಪ್ಪಳ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಪಂಚಮಸಾಲಿ ಸಮಾಜದ ಮುಖಂಡರು ಭಾಗಿಯಾಗಿ ʻʻ ನಮ್ಮ ಸಮಾಜ ಯಾವುದೇ ವ್ಯಕ್ತಿಯ ಕೇಂದ್ರೀತವಾಗಬಾರದು. ಶ್ರೀಗಳನ್ನು ಸಮಾಜದ ಸಂಘಟನೆ, ಆರ್ಥಿಕ, ಶೈಕ್ಷಣಿಕವಾಗಿ ಗುರುತಿಸಿ ಅವರ ಜೀವನ ಮೆಲಕ್ಕೆ ಎತ್ತುವುದಕ್ಕಾಗಿ ನೇಮಕ ಮಾಡಲಾಗಿದೆಯೇ ಹೊರತು, ಯಾವುದೇ ವ್ಯಕ್ತಿ ಅಥವಾ ಪಕ್ಷದ ಪರ ಹೇಳಿಕೆ ನೀಡುವುದಕ್ಕೆ ಅಲ್ಲʼʼ ಎಂದು ಹೇಳಿದೆ.
ನೀಲಕಂಠ ಅಸೂಟಿ, ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ
ಸಂಘಟನೆಯ ಉದ್ದೇಶ ಸಮಾಜದ ಬಾಂಧವರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಗಟ್ಟಿಗೊಳಿಸುವುದು. ಇದಕ್ಕಾಗಿಯೇ 2008ರಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬಸವಜಯ ಮೃತ್ಯುಂಜಯ ಶ್ರೀಗಳನ್ನು ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಆದರೆ, ಇತ್ತೀಚೆಗೆ ಪೀಠದ ಸ್ವಾಮೀಜಿಗಳು ಗುರಿಯನ್ನೇ ಮರೆತು ಬೇರೆ ಮಾರ್ಗದೆಡೆಗೆ ಸಾಗುತ್ತಿದೆ. ಶ್ರೀಗಳಾದವರು ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ವ್ಯಕ್ತಿ ಅಥವಾ ಪಕ್ಷದ ಪರವಾಗಿ ಶ್ರೀಗಳು ಹೇಳಿಕೆ ನೀಡುತ್ತಿರುವುದು ಸಮಾಜ ಬಾಂಧವರಿಗೆ ನೋವುಂಟು ಮಾಡಿದೆ. ಯಾವುದೇ ಪಕ್ಷ, ವ್ಯಕ್ತಿಯ ಪರವಾಗಿ ಹೇಳಿಕೆ ನೀಡಬಾರದು.
ಮೋಹನ ಲಿಂಬಿಕಾಯಿ, ವಿಪ ಮಾಜಿ ಸದಸ್ಯರು
ಬಸವ ಜಯ ಮೃತ್ಯುಂಜಯ ಶ್ರೀಗಳು ಈಚೆಗೆ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪರವಾಗಿ ಹೋರಾಟ ನಡೆಸುವಂತೆ ಸಮಾಜ ಬಾಂಧವರಿಗೆ ಕರೆ ನೀಡಿದ್ದಾರೆ. ಶ್ರೀಗಳನ್ನು ಸಮಾಜದ ಸಂಘಟನೆ, ಆರ್ಥಿಕ, ಶೈಕ್ಷಣಿಕವಾಗಿ ಗುರುತಿಸಿ ಮೇಲೆತ್ತುವುದಕ್ಕಾಗಿ ನೇಮಕ ಮಾಡಲಾಗಿದೆ. ಶ್ರೀಗಳು ವ್ಯಕ್ತಿ, ಪಕ್ಷದ ಪರವಾಗಿ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸ್ವಾಮೀಜಿ, ವ್ಯಕ್ತಿ ಅಥವಾ ರಾಜಕೀಯ ಪಕ್ಷದ ಸ್ವತ್ತಾಗಬಾರದು. ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಬಾರದು ಎಂಬುದು ನಮ್ಮೆಲ್ಲರ ಉದ್ದೇಶ.
ಇದಾದ ನಂತರ ಸಭೆಯಲ್ಲಿ ಕೂಡಲಸಂಗಮ ಪೀಠವು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಈ ಕುರಿತು ಸಭೆ ಕರೆದು ಸ್ವಾಮೀಜಿಗಳಿಗೆ ಮನವರಿಕೆ ಕೊಡುವುದು ಹಾಗೂ ಸ್ವಾಮೀಜಿಗಳು ಒಪ್ಪದೇ ಹೋದಲ್ಲಿ ಎಲ್ಲ ಪಕ್ಷಗಳಲ್ಲಿರುವ ಸಮಾಜದ ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಮುಖಂಡರ ನೇತೃತ್ವದಲ್ಲಿ ಸಭೆ ಕರೆದು ಮುಂದಿನ ನಿರ್ಣಯ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಗಿದೆ.
ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ, ಎಲ್.ಎಂ.ಪಾಟೀಲ, ರಾಜಶೇಖರ ಮೆಣಸಿನಕಾಯಿ, ಸೋಮಣ್ಣ ಬೇವಿನಮರದ, ನಂದಕುಮಾರ ಪಾಟೀಲ, ಕಲ್ಲಪ್ಪ ಯಲಿವಾಳ, ಜಿ.ಜಿ. ದ್ಯಾಮನಗೌಡ್ರ, ಎಂ.ಎಸ್. ಮಲ್ಲಾಪುರ ಸೇರಿದಂತೆ ಹಲವರಿದ್ದರು.
ಯತ್ನಾಳ್ ಹಿಂದುತ್ವದ ಅಜೆಂಡಾಗೆ ಆರ್ ಎಸ್ ಎಸ್ ಬೆಂಬಲ ಸಿಕ್ಕಿಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ಅವರಂತಹವೇ ಬಹಿರಂಗವಾಗಿ ವಿರೋಧಿಸಿದ್ದಾರೆ. ಇತ್ತ ಲಿಂಗಾಯತರಲ್ಲಿ ಅದರಲ್ಲೂ ವಿಶೇಷವಾಗಿ ಪಂಚಮಸಾಲಿಗಳಲ್ಲಿ ಯತ್ನಾಳ್ ಪರ ನಿಂತಿದ್ದ ಏಕೈಕ ಸ್ವಾಮೀಜಿಯ ವಿರುದ್ಧವೇ ಅದೇ ಸಮುದಾಯದ ಮುಖಂಡರು ತಿರುಗಿಬಿದ್ದಿದ್ದಾರೆ. ಯತ್ನಾಳ್ ಅವರ ಹೊಸ ಪಕ್ಷ ಸ್ಥಾಪನೆಯ ಯತ್ನಕ್ಕೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತಿದೆ.