ವಿಶ್ವವಿದ್ಯಾಲಯ ಹಂತದಲ್ಲಿ ಮತ್ತೊಮ್ಮೆ ವಿವಾದಾತ್ಮಕ ಪಠ್ಯ ವಿವಾದ ಸುದ್ದಿಯಾಗಿದೆ. ಕರ್ನಾಟಕ ವಿವಿಯ ಪದವಿ ಪುಸ್ತಕ ಬೆಳಗು-1 ರಲ್ಲಿ ವಿವಾದಾತ್ಮಕ ಲೇಖನ ಮುದ್ರಣವಾಗಿದೆ. ಇದು ಬೆಳಕಿಗೆ ಬಂದಿರೋದು ಪರೀಕ್ಷೆಯ ವೇಳೆ. ಪಠ್ಯದಲ್ಲಿ ಭಾರತಮಾತೆ, ಅಲ್ಪಸಂಖ್ಯಾತ ಮುಸ್ಲಿಂ, ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಪಠ್ಯಗಳಿವೆ. ಪುಸ್ತಕದ 4ನೇ ಅಧ್ಯಾಯದಲ್ಲಿ ʻರಾಷ್ಟ್ರೀಯತೆ ಆಚರಣೆ ಸುತ್ತʼ ಎಂಬ ಲೇಖನವಿದೆ.
ಈ ಲೇಖನದಲ್ಲಿ ʻಭಾರತಾಂಬೆಯ ಕಲ್ಪನೆʼ ಲೇಖನದಲ್ಲಿ ಭಾರತಾಂಬೆಯ ಬಗ್ಗೆ ವಿವಾದಾತ್ಮಕ ಬರಹಗಳಿವೆ. ಭಾರತಮಾತೆಯ ಕಲ್ಪನೆಯ ಚಿತ್ರ ಹಿಂದೂ ಮಾತೆಯ ಚಿತ್ರ, ಒಂದು ವರ್ಗದ ಕಲ್ಪನೆ ಎಂಬ ಉಲ್ಲೇಖವಿದ್ದು, ಬರೆಯಲಾಗಿದೆ. ಅಲ್ಲದೆ ಭಾರತ್ ಮಾತಾಕೀ ಜೈ ಎಂಬ ಘೋಷಣೆ ಇನ್ನೊಬ್ಬರ ಸೋಲನ್ನು ನೆನಪಿಸುತ್ತದೆ ಎಂದು ಬರೆಯಲಾಗಿದ್ದು, ಅದನ್ನು ಕೂಡಾ ತೀರ್ಪಿನ ಮಾದರಿಯಲ್ಲಿ ಬರೆಯಲಾಗಿದೆ. ಇನ್ನು ಭುವನೇಶ್ವರಿ ಮಾತೆ ಕೋಮುವಾದಿಗಳ ಮಾತೆ ಎಂಬ ಅಭಿಪ್ರಾಯವೂ ಈ ಲೇಖನದಲ್ಲಿದೆ. ಮುಸ್ಲಿಮರಿಗೆ ಮೆಕ್ಕಾ ಇರುವಂತೆ ಹಿಂದೂಗಳಿಗೂ ಒಂದು ಪವಿತ್ರ ಕ್ಷೇತ್ರ ಆಯೋಧ್ಯಾ ಇರಲಿ ಎಂದು ಕೆಲ ಪರಿವಾರದವರು ಒತ್ತಾಯಿಸುತ್ತಾ ಬಂದಿದ್ದಾರೆ ಎಂದು ಪಠ್ಯದಲ್ಲಿ ಮುದ್ರಿತವಾಗಿದೆ.
ಇನ್ನು ಭಾರತದಲ್ಲಿ ಮುಸ್ಲಿಮರು ಪರಕೀಯ ಪ್ರಜ್ಞೆಯಿಂದ ಬಳಲುತ್ತಿದ್ದಾರೆ, ಅಭದ್ರತೆಯಲ್ಲೇ ಬದುಕುತ್ತಿದ್ದಾರೆ. ಅವರು ಬೇರೆ ಧರ್ಮಗಳನ್ನು ಸಾಯಿಸುತ್ತಾರೆ ಎಂಬ ಅರ್ಥದ ಲೇಖನವಿದೆ. ಹಿಂದೂ ಧರ್ಮವನ್ನು ʻಕಲ್ಪಿತ ಧರ್ಮʼ ಎಂದು ಬಣ್ಣಿಸಲಾಗಿದೆ.
ಹೀಗಾಗಿ ಪಠ್ಯ ಪುಸ್ತಕ ವಾಪಸ್ ತೆಗೆದುಕೊಳ್ಳುವಂತೆ ವಕೀಲ ಅರುಣ್ ಜೋಶಿ ಅವರಿಂದ ಆಗ್ರಹ ಕೇಳಿಬಂದಿದೆ.
ಕರ್ನಾಟಕ ವಿಶ್ವವಿದ್ಯಾಲಯದ 2024-25 ಸಾಲಿನ ಕನ್ನಡ ಸ್ನಾತಕ ಪದವಿ ಬಿಎ ಪ್ರಥಮ ಸೆಮಿಸ್ಟರ್ ಪಠ್ಯಪುಸ್ತಕ ಬೆಳಗು – 1ರಲ್ಲಿ ಪ್ರಕಟವಾಗಿದ್ದ ನಾಲ್ಕನೇ ಅಧ್ಯಾಯದ “ರಾಷ್ಟ್ರೀಯತೆಯ ಆಚರಣೆಯ ಸುತ್ತ” ಕುರಿತು ರಾಮಲಿಂಗಪ್ಪ 6 ಬೇಗೂರ ಅವರು ಬರೆದ ಲೇಖನದಲ್ಲಿ, ಕೆಲವು ಆಕ್ಷೇಪನಾರ್ಹ ಅಂಶಗಳನ್ನು ಒಳಗೊಂಡಿವೆ. ರಾಷ್ಟ್ರ ಚಿಂತನೆಯ ಮಹತ್ವ ಹೇಳುವ ಎನ್ಇಪಿ ಪದ್ಧತಿ ಅನ್ವಯ ಮುದ್ರಣಗೊಂಡಿರುವ, ಅನೇಕ ವಿಷಯ ತಜ್ಞರು ಪರಿಷ್ಕರಿಸಿರುವ ಮಹತ್ವದ ಪಠ್ಯ ಪುಸ್ತಕವೇ ಈಗ ವಿವಾದಕ್ಕೆ ಗುರಿಯಾಗಿದೆ. ಪಠ್ಯದ ವಿರುದ್ಧ ಹಿಂದೂ ಪರ ಸಂಘಟನೆಗಳು, ಎಬಿವಿಪಿ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಕ್ರೋಶದ ಬೆನ್ನಲ್ಲೇ ತಾಂತ್ರಿಕ ಕಾರಣ ನೆಪ ನೀಡಿ ಪರೀಕ್ಷೆಯನ್ನೇ ಮುಂದೂಡಿದ ಧಾರವಾಡ ವಿವಿ, ವಿವಾದಿತ ಪಠ್ಯವನ್ನು ಕೈಬಿಟ್ಟು, ಪರೀಕ್ಷೆ ನಡೆಸುತ್ತಿದ್ದೇವೆ ಎಂದಿರುವ ಕರ್ನಾಟಕ ವಿವಿ ಕುಲಪತಿ ಪ್ರೊ.ಜಯಶ್ರೀ ಎಂದು ಹೇಳಿದ್ದಾರೆ. ಸಮಿತಿಯವರು ವರದಿಯನ್ನು ಕೂಡ ಕೊಟ್ಟಿದ್ದಾರೆ. ಈಗಾಗಲೇ ನಾವು ಆ ಪಾಠವನ್ನು ಕೈಬಿಟ್ಟಿದ್ದೇವೆ. ಆ ಪಾಠ ಕೈಬಿಟ್ಟು ಪರೀಕ್ಷೆ ಮುಂದುವರೆಸಿದ್ದೇವೆ. ಪುಸ್ತಕ ಸಮಿತಿ ಮೇಲೆ ಕ್ರಮ ಕೈಗೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನಾವು ಸಿಂಡಿಕೇಟ್ ಸದಸ್ಯರ ಸಭೆ ಮಾಡುತ್ತೇವೆ. ಅದರಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.