ಇದು ಅಚ್ಚರಿಯಾದರೂ ಸತ್ಯ. ಸದ್ಯಕ್ಕೆ ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರ್ಕಾರ. ಸಿದ್ದರಾಮಯ್ಯ ಸಿಎಂ. ಡಿಕೆ ಶಿವಕುಮಾರ್ ಡಿಸಿಎಂ ಜೊತೆಗೆ ರಾಜ್ಯಾಧ್ಯಕ್ಷರೂ ಹೌದು. ಹೀಗಿರುವಾಗ ವಾಸ್ತವದಲ್ಲಿ ಸರ್ಕಾರ ಪತನವಾಗುತ್ತದೆ ಎಂಬುದಂತೂ ಮೈಕುಗಳ ಎದುರು ಬಾಯಿ ಬಡಿದುಕೊಂಡು ಸೌಂಡು ಮಾಡಬಹುದೇ ಹೊರತು, ಸಾಧ್ಯವಾಗದ ಮಾತು. ಹೀಗಿರುವಾಗ ಅದ್ಯಾವ ಉದ್ದೇಶಕ್ಕಾಗಿ, ಲಾಭಕ್ಕಾಗಿ ವಿಜಯೇಂದ್ರ ವಿರುದ್ಧ ಈ ರೀತಿಯ ಹೋರಾಟ ನಡೆಯುತ್ತಿದೆ ಎಂದು ಹುಡುಕುತ್ತಾ ಹೋದರೆ ಕಾಣಿಸುವುದು ಸಿಎಂ ಪಟ್ಟದ ಆಸೆ.
ಸರ್ಕಾರ ಇದ್ದಾಗ ಮುಖ್ಯಮಂತ್ರಿ ಕುರ್ಚಿಗಾಗಿ, ಅಧಿಕಾರ ಹಂಚಿಕೆಗಾಗಿ ಮಹತ್ವಾಕಾಂಕ್ಷೆಗಾಗಿ ತಾಕಲಾಟ ನಡೆಯುವುದು ಸಾಮಾನ್ಯ ಹಾಗೂ ಸಹಜ. ಕುರ್ಚಿಯೂ ಇಲ್ಲ, ಅಧಿಕಾರವೂ ಇಲ್ಲ, ಅಧಿಕಾರ ಪಡೆಯಬಹುದಾದ ಅವಕಾಶ ಸಿಕ್ಕುವುದು ಕೂಡಾ ಇನ್ನೂ 3 ವರ್ಷಗಳ ನಂತರ. ಹೀಗಿರುವಾಗ ಈಗಲೇ ಏಕೆ ಎಂದು ನೋಡಿದರೆ.. ಅವರು ಹೋರಾಟ ನಡೆಸುತ್ತಿರುವುದೇ ಮುಂದಿನ 3 ವರ್ಷಗಳ ನಂತರ ಸಿಗುವ ಅವಕಾಶಕ್ಕಾಗಿ..
ಹೌದು, 2028ರವರೆಗೂ ವಿಜಯೇಂದ್ರ ಅಧಿಕಾರದಲ್ಲಿದ್ದರೆ ಆಗ ಚುನಾವಣೆ ನಡೆದು ವಿಜಯೇಂದ್ರ ಅಧ್ಯಕ್ಷರಾಗಿದ್ದರೆ ಅವರೇ ಸಿಎಂ ಆಗಬಹುದು. ಹಾಗೇನಾದರೂ ಆಯಿತೋ.. ಅದಾದ ನಂತರ ಕನಿಷ್ಠ ಎಂದರೂ ಹತ್ತಿಪ್ಪತ್ತು ವರ್ಷ ವಿಜಯೇಂದ್ರರನ್ನು ಮುಟ್ಟೋಕೆ ಸಾಧ್ಯವಿಲ್ಲ ಎನ್ನುವುದೇ ಬಿಜೆಪಿಯಲ್ಲಿರುವ ಯತ್ನಾಳ್ ಬಣದ ನಾಯಕರ ಕಣ್ಣೀರು.
ಹೌದು, ಪಕ್ಷವೊಂದು ಅಧಿಕಾರಕ್ಕೆ ಬಂದಾಗ ಆ ಪಕ್ಷದ ಅಧ್ಯಕ್ಷರಾಗಿದ್ದವರು ಸಿಎಂ ಆಗುವುದು ಸಾಮಾನ್ಯ. ಆದರೆ ಅಧ್ಯಕ್ಷ ಹುದ್ದೆಯನ್ನೂ ಮೀರಿದ ನಾಯಕರಾಗಬೇಕು ಎನ್ನುವ ಅವಕಾಶ ಇದ್ಯಲ್ಲ ಎನ್ನುವ ಮಾತಿಗೆ ಯತ್ನಾಳ್ ಬಣದಲ್ಲಿ ಉತ್ತರ ಇಲ್ಲ. ಅಷ್ಟೇ ಏಕೆ, ಯತ್ನಾಳ್ ಬಣಕ್ಕೆ ಒಳಗಿನಿಂದ ಸಪೋರ್ಟ್ ಕೊಡುತ್ತಿರುವ ಸಿಟಿ ರವಿ, ಪ್ರತಾಪ್ ಸಿಂಹ ಮೊದಲಾದವರದ್ದೂ ಇದೇ ಕಥೆ.
ಸಿದ್ದರಾಮಯ್ಯ ಎರಡು ಬಾರಿ ಸಿಎಂ ಆದವರು. ಆದರೆ ಒಮ್ಮೆಯೂ ಕೆಪಿಸಿಸಿ ಅಧ್ಯಕ್ಷರಾದವರಲ್ಲ. ಯಡಿಯೂರಪ್ಪ ಸಿಎಂ ಆದಾಗ ಅವರ ಕೈಲಿ ಅಧ್ಯಕ್ಷ ಪಟ್ಟ ಇರಲಿಲ್ಲ ಎಂದರೆ, ಅದು ಅವರ ಕಾಲದ ಮಾತಾಯಿತು, ವಿಜಯೇಂದ್ರ ಅವರು ಯಡಿಯೂರಪ್ಪನವರ ಮಗನೇ ಹೊರತು, ಯಡಿಯೂರಪ್ಪ ಅಲ್ಲ ಎನ್ನುವ ವಾದ ಮುಂದಿಡುತ್ತಾರೆ.
ದೆಹಲಿಯಲ್ಲಿರುವ ನಾಯಕರು ವಿಜಯೇಂದ್ರರನ್ನೂ ಬಿಟ್ಟು ಕೊಡುತ್ತಿಲ್ಲ. ಯತ್ನಾಳರನ್ನೂ ಹೊರಗೆ ಹಾಕುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ದಿಲ್ಲಿಯಲ್ಲಿ ಕುಳಿತ ಬಿಜೆಪಿಯ ಮದ್ದು ಅರೆಯುವ ನಾಯಕರಿಗೆ ಸಮಯ ಇಲ್ಲವೋ, ಮನಸ್ಸು ಇಲ್ಲವೋ ಅಥವಾ ಕರ್ನಾಟಕ ಬಿಜೆಪಿಯನ್ನು ಏನು ಮಾಡಿದರೂ ರಿಪೇರಿ ಮಾಡಲು ಆಗುವುದಿಲ್ಲ ಅನ್ನುವ ಉದಾಸೀನವೋ ಅರ್ಥವಾಗದ ಸ್ಥಿತಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಅದರೆ ಅದರಲ್ಲಿಯೂ ಅರ್ಧ ಸತ್ಯ ಮಾತ್ರವೇ ಇದೆ.
ಏನೆಂದರೆ ಅಧಿಕಾರದಲ್ಲಿ ಇಲ್ಲದೇ ಇರುವಾಗ ಪಕ್ಷದ ಖರ್ಚು ವೆಚ್ಚ ನಿಭಾಯಿಸಿ ಹೋರಾಟ ರೂಪಿಸಲು ಒಬ್ಬ ಬಲಿಷ್ಠ ನಾಯಕ ಬೇಕು. ಆತ ನಾಯಕನಾಗಿರುವುದಷ್ಟೇ ಅಲ್ಲ, ಸಂಪನ್ಮೂಲ ಒದಗಿಸುವ ಶಕ್ತಿಯೂ ಇರಬೇಕು. ಆ ಲೆಕ್ಕಕ್ಕೆ ನೋಡಿದರೆ ರಾಜ್ಯ ಬಿಜೆಪಿಯಲ್ಲಿ ಸಂಪನ್ಮೂಲ ಹೊಂದಿರುವ ನಾಯಕರಿಗೆ ಕೊರತೆ ಏನೂ ಇಲ್ಲ. ಆದರೆ ಯಾವೊಬ್ಬ ನಾಯಕರಿಗೂ ಪಕ್ಷಕ್ಕೆ ಖರ್ಚು ಮಾಡುವ ಉತ್ಸಾಹ ಇಲ್ಲ. ಹೀಗಾಗಿಯೇ ವಿಜಯೇಂದ್ರ ಅವರೇ ಇರಲಿ ಎನ್ನುತ್ತಿದೆ. ಆದರೆ ಅಧಿಕಾರ ಬರುವ ಹೊತ್ತಿಗೆ ನಮಗೂ ಒಂದು ಚಾನ್ಸ್ ಇರಲಿ ಎಂದು ಹೊಂಚು ಹಾಕಿಯೇ ಈ ಹೋರಾಟ ನಡೆಯುತ್ತಿದೆ. ಯತ್ನಾಳ್ ಕೇವಲ ಆ ಹೋರಾಟದಲ್ಲಿ ಮುಂದೆ ಕಾಣಿಸುತ್ತಿರುವ ಮುಖ ಅಷ್ಟೇ.