ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಲೆಕ್ಷನ್ ನಡೆಯುತ್ತಂತೆ ಎಂದು ಎಲ್ಲರೂ ಅಂದುಕೊಳ್ತಿರೋವಾಗಲೇ ಎಲೆಕ್ಷನ್ ನಡೆಯೋದೇ ಅನುಮಾನ ಅನ್ನೋ ಮಾತೂ ಕೇಳಿ ಬರೋಕೆ ಕಾರಣವಾಗಿದೆ. ಅಲ್ಲದೆ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ರಾಜ್ಯ ಸರ್ಕಾರದ ಜನಾಂದೋಲನಕ್ಕೆ ಹೊಸದೊಂದು ತಂಡ ರಚಿಸಿದ್ದಾರೆ. ಒಟ್ಟು 14 ತಂಡ ರಚನೆ ಮಾಡಿದ್ದು, ಆ 14 ತಂಡಗಳಲ್ಲಿ ಯಾವ ತಂಡದಲ್ಲೂ ಯತ್ನಾಳ್ ಬಣದ ಸದಸ್ಯರಿಲ್ಲ.
ವಿಜಯೇಂದ್ರರೇ ಅಧ್ಯಕ್ಷ. ಎಲೆಕ್ಷನ್ ನಡೆಯೋದಿಲ್ವಾ..?
ಪಕ್ಷದ ರಾಜ್ಯಾಧ್ಯಕ್ಷರ ನೇಮಕಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ ತಾರಕಕ್ಕೇರಿರುವ ಮಧ್ಯೆ ಇದುವರೆಗೆ ನಡೆದಿರುವ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿರುವ ಬಿಜೆಪಿ ವರಿಷ್ಠರು ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುವ ಸೂಚನೆ ಕೊಟ್ಟಿದ್ದಾರೆ. ಔಪಚಾರಿಕವಾಗಿ ಮಾತ್ರ ಎಲೆಕ್ಷನ್ ನಡೆಯಲಿದೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇರ ಚುನಾವಣೆ ನಡೆಸಿದಲ್ಲಿ ಅದು ಪಕ್ಷದಲ್ಲಿ ಭಾರೀ ಪ್ರಮಾಣದಲ್ಲಿ ಭಿನ್ನಮತ ಹುಟ್ಟು ಹಾಕಲಿದೆ ಎಂಬುದು ಒಂದು ಲೆಕ್ಕಾಚಾರ. ಚುನಾವಣೆಯ ಉಸ್ತುವಾರಿಯಾಗಿ ನೇಮಕಗೊಂಡಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಈಗ ಹೋಗಿರುವುದು ಇದೇ ರಿಪೋರ್ಟ್. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸಿ ಅವರ ಪುತ್ರ ವಿಜಯೇಂದ್ರ ಬದಲು ಬೇರೊಬ್ಬರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದಲ್ಲಿ ಮುಂದೆ ಎದುರಾಗಬಹುದಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳಬಹುದು ಎಂಬ ಆತಂಕ ಬಿಜೆಪಿಯದ್ದು. ಬದಲಾವಣೆ ಮಾಡಬೇಕಾದಲ್ಲಿ ಯಡಿಯೂರಪ್ಪ ಅವರ ಮನವೊಲಿಸಬೇಕು. ಸದ್ಯದ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರು ಬದಲಾವಣೆಗೆ ಒಪ್ಪಿಕೊಳ್ಳುವುದು ಅಸಾಧ್ಯ ಎಂಬ ಎನ್ನಲಾಗಿದೆ.
ವಿಜಯೇಂದ್ರ ಅವರನ್ನೇ ಮುಂದುವರೆಸುವ ಅಂತಿಮ ನಿರ್ಧಾರ ಕೈಗೊಂಡಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ನೇಮಕದಲ್ಲಿ ವರಿಷ್ಠರೇ ಪ್ರಮುಖ ಪಾತ್ರ ವಹಿಸಿ ಯಾವುದೇ ಬಣಕ್ಕೂ ಬೇಸರವಾಗದಂತೆ ಎಚ್ಚರಿಕೆ ವಹಿಸುವ ಬಗ್ಗೆ ಚರ್ಚೆ ನಡೆದಿದೆಯಂತೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇರ ಚುನಾವಣೆ ನಡೆಸಿದಲ್ಲಿ ಅದು ಪಕ್ಷದಲ್ಲಿ ಭಾರೀ ಪ್ರಮಾಣದಲ್ಲಿ ಭಿನ್ನಮತ ಹುಟ್ಟು ಹಾಕಲಿದೆ ಎನ್ನುವುದೇ ಇದಕ್ಕೆ ಕಾರಣ.
ಯತ್ನಾಳ್ ಬಣ ಔಟ್ :
ಎಸ್‌ಸಿಪಿ, ಟಿಎಸ್‌ಪಿ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನಕ್ಕೆ ಬಿಜೆಪಿ ಮುಂದಾಗಿದೆ. ಇದಕ್ಕಾಗಿ 14 ತಂಡಗಳನ್ನು ರಚಿಸಿದೆ. ಆದ್ರೆ, ಬಿಜೆಪಿ ಬಿಡುಗಡೆ ಮಾಡಿರುವ ತಂಡದಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿ ಭಿನ್ನರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಯಾವುದೇ ನಾಯಕರೂ ಇಲ್ಲ.
ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವ ತಂಡ ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಪ್ರವಾಸ ಮಾಡಲಿದೆ. ಈ ತಂಡದಲ್ಲಿ ಶಿವನಗೌಡ ನಾಯಕ್, ದುರ್ಯೋಧನ ಐಹೊಳೆ, ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ರುದ್ರಯ್ಯ ಇರುತ್ತಾರೆ.
ಗೋವಿಂದ ಕಾರಜೋಳ ನೇತೃತ್ವದ ತಂಡಕ್ಕೆ ಬೀದರ್, ಕಲ್ಬುರ್ಗಿ ಪ್ರವಾಸದ ಹೊಣೆ ನೀಡಲಾಗಿದೆ.
ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ನೇತೃತ್ವದ ತಂಡ, ಚಿಕ್ಕೋಡಿ ಹಾಗೂ ಬೆಳಗಾವಿ ಪ್ರವಾಸ ನಡೆಸಲಿದ್ದು, ಈ ತಂಡದಲ್ಲಿ ಶಾಸಕ ಅಶ್ವಥ್ ನಾರಾಯಣ್, ಬಾಲಚಂದ್ರ ಜಾರಕಿಹೊಳಿ ಇರಲಿದ್ದಾರೆ.
ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ತಂಡ ಯಾದಗಿರಿ ಹಾಗೂ ರಾಯಚೂರು ಜಿಲ್ಲಾ ಪ್ರವಾಸ ಮಾಡಲಿದೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ತಂಡ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಪ್ರವಾಸ ಮಾಡಲಿದೆ. ಇಲ್ಲಿಯೂ ಯತ್ನಾಳ್ ಆಗಲೀ, ಅವರ ತಂಡವಾಗಲೀ ಇಲ್ಲ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ತಂಡ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಪ್ರವಾಸ ಮಾಡಲಿದೆ.
ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತಂಡ – ಮಂಡ್ಯ, ಹಾಸನ ಜಿಲ್ಲೆಗಳ ಪ್ರವಾಸ ನಡೆಸಲಿದೆ.
ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಸಿಟಿ ರವಿ ನೇತೃತ್ವದ ತಂಡ ಮೈಸೂರು-ಚಾಮರಾಜನಗರ ಜಿಲ್ಲಾ ಪ್ರವಾಸಕ್ಕೆ ಹೋಗಲಿದೆ.
ಎನ್ ರವಿಕುಮಾರ್, ರಮೇಶ್ ಜಿಗಜಿಣಗಿ ನೇತೃತ್ವದ ತಂಡ – ಉಡುಪಿ, ಮಂಗಳೂರು ಪ್ರವಾಸ ಮಾಡಿದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಂಡ, ಬೆಂಗಳೂರು, ರಾಮನಗರ ಜಿಲ್ಲೆಗಳ ಪ್ರವಾಸ ಮಾಡಲಿದೆ. ಮಾಜಿ ಸಂಸದ ಮುನಿಸ್ವಾಮಿ, ಶಾಸಕ ಅರವಿಂದ್ ಬೆಲ್ಲದ್ ನೇತೃತ್ವದ ತಂಡ, ಚಿತ್ರದುರ್ಗ, ತುಮಕೂರು ಜಿಲ್ಲೆಗೆ ಹೋಗಲಿದೆ. ಆನೇಕಲ್ ನಾರಾಯಣಸ್ವಾಮಿ, ರಾಜೂ ಗೌಡ ನೇತೃತ್ವದ ತಂಡ- ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಪ್ರವಾಸ ಮಾಡಲಿದೆ.
ಈ ತಂಡಗಳಲ್ಲಿ ತಟಸ್ಥ ಬಣದಲ್ಲಿದ್ದವರಿಗೂ ಅವಕಾಶ ಇದೆ. ಆದರೆ ಯತ್ನಾಳ್ ಬಣದಲ್ಲಿರುವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಸಿದ್ದೇಶ್ವರ, ಲಿಂಬಾವಳಿ, ಬಿಪಿ ಹರೀಶ್.. ಯಾರನ್ನೂ ಒಳಗೆ ಬಿಟ್ಟುಕೊಂಡಿಲ್ಲ.