ಎಕ್ಕ ಚಿತ್ರ ಸೆಟ್ಟೇರಿದೆ. ಇದು ಯುವರಾಜ್ ಕುಮಾರ್ ನಟನೆಯ 2ನೇ ಸಿನಿಮಾ. ಎಕ್ಕ ಎಂದರೆ ಏನು ಅನ್ನೋದು ಇಸ್ಪೀಟು ಪಂಟರಿಗೆ ಗೊತ್ತಿಲ್ಲದ್ದೇನಲ್ಲ. ಎಕ್ಕ ಚಿತ್ರದ ಮೊದಲ ದೃಶ್ಯಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಕ್ಲಾಪ್ ಮಾಡಿದ್ದು ಚಿತ್ರದ ಬಗ್ಗೆ ಯುವ ಮಾಹಿತಿ ಹಂಚಿಕೊಂಡಿದ್ದಾರೆ.
ಜಾಕಿ ಅನ್ನೋ ಚಿತ್ರದ ಟೈಟಲ್ ಬಂದಿದ್ದು ಚಿಕ್ಕಪ್ಪನ ಚಿತ್ರ ಜಾಕಿಯಿಂದಾನೇ. ಆ ಚಿತ್ರಕ್ಕೆ ಮೊದಲು ಎಕ್ಕ ಅನ್ನೋ ಟೈಟಲ್ ಕೂಡಾ ಪ್ಲಾನ್ ಮಾಡಿದ್ದರು. ಕೊನೆಗೆ ಚಿಕ್ಕಪ್ಪನ ಪಾತ್ರದ ಹೆಸರು ಜಾಕಿಯನ್ನೇ ಟೈಟಲ್ ಆಗಿಟ್ಟರು. ಇನ್ನು ಚಿತ್ರದಲ್ಲಿ ಭೂಗತ ಲೋಕದ ಕಥೆ ಇದೆ. ದೊಡ್ಡಪ್ಪ ಅಭಿನಯದ ಕಡ್ಡಿಪುಡಿ ಫ್ಲೇವರ್ ಇದೆ ಎಂದು ಹೇಳಿಕೊಂಡಿದ್ದಾರೆ ಯುವರಾಜ್ ಕುಮಾರ್. ಅಲ್ಲಿಗೆ ಇದು ಭೂಗತ ಲೋಕದ ಕಥೆ ಎನ್ನುವುದು ಹಾಗೂ ರಿಯಲೆಸ್ಟಿಕ್ ಕಥೆ ಎನ್ನುವುದು ಗೊತ್ತಾದಂತೆ ಆಗಿದೆ.
ಇದೊಂದು ಹೈಡ್ರಾಮಾ ಇರುವ ಆಕ್ಷನ್ ಸಿನಿಮಾ. ಭೂಗತ ಲೋಕದ ಕಥೆ ಎನ್ನುವ ಯುವ, ಇದು ಪಕ್ಕಾ ಲೋಕಲ್ ಕಲ್ಟ್ ಸಿನಿಮಾ ಆಗಲಿದೆ ಎಂದಿದ್ದಾರೆ.
ಚಿತ್ರದ ಮುಹೂರ್ತಕ್ಕೆ ನಾಯಕಿ ಸಂಪದಾ ಹುಲಿವಾನ, ಅತುಲ್ ಕುಲಕರ್ಣಿ, ಶೃತಿ ಕೃಷ್ಣ, ರಾಹುಲ್ ದೇವ್ ಸೇರಿದಂತೆ ಚಿತ್ರದ ಪ್ರಮುಖ ಪಾತ್ರಧಾರಿಗಳು ಭಾಗವಹಿಸಿದ್ದರು. ರೋಹಿತ್ ಪದಕಿ ನಿರ್ದೇಶನದ ಎಕ್ಕ, ಮುಂದಿನ ವರ್ಷದ ಜೂನ್ 6ಕ್ಕೆ ರಿಲೀಸ್ ಆಗಲಿದೆ.
ಸಂಪದಾ ಅವರಂತೂ ʻʻಯುವರಾಜ್ ಕುಮಾರ್ ಜೊತೆ ನಟಿಸಲು ಉತ್ಸುಕಳಾಗಿದ್ದೇನೆ. 2024 ನನಗೆ ನಿಧಾನವಾಗಿರಬಹುದು, ಆದರೆ, ಇದು ಉತ್ತಮ ವರ್ಷವಾಗಿದೆ. ಎರಡು ಉತ್ತಮ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರರಂಗದಲ್ಲಿ ಮುಂದುವರೆಯಲು ನನಗೆ ಬೇಕಾಗಿರುವುದು ಇಷ್ಟೇ. ಎಕ್ಕ ನನ್ನ ನಾಲ್ಕನೇ ಚಿತ್ರವಾಗಿದ್ದು, ಪಾತ್ರಗಳ ಆಯ್ಕೆಯಲ್ಲಿ ಬಹಳ ಯೋಚಿಸಿ, ಆಯ್ಕೆ ಮಾಡುತ್ತೇನೆʼʼ ಎಂದು ಹೇಳಿದ್ದಾರೆ.
ಯುವ ರಾಜ್ ಕುಮಾರ್ ನಟಿಸುತ್ತಿರುವ 2ನೇ ಸಿನಿಮಾ ಎಕ್ಕ. ರೋಹಿತ್ ಪದಕಿ ನಿರ್ದೇಶನದ ಚಿತ್ರದ ಚಿತ್ರೀಕರಣ ಶುರುವಾಗಿದೆ. ನಾಯಕಿಯನ್ನು ಅಳೆದೂ ತೂಗಿ ಆಯ್ಕೆ ಮಾಡಲಾಗಿದೆ.
ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಅತ್ಯಂತ ಮಹತ್ವವಿದೆ. ನಾಯಕಿಯನ್ನು ಆಯ್ಕೆ ಮಾಡುವಾಗ ನಮ್ಮ ಕಥೆ, ಪಾತ್ರಕ್ಕೆ ಆಕೆ ಹೊಂದಿಕೆಯಾಗುತ್ತಾರೆಯೇ ಎಂಬುದನ್ನು ನೋಡಿ ಆಯ್ಕೆ ಮಾಡಿದ್ದೇವೆ. ಸಂಪದಾ ಹುಲಿವಾನ ಎಕ್ಕ ಚಿತ್ರದ ನಾಯಕಿ ಪಾತ್ರಕ್ಕೆ ಪರ್ಫೆಕ್ಟ್ ಮ್ಯಾಚ್ ಎಂದು ಹೇಳಿದ್ದಾರೆ ರೋಹಿತ್ ಪದಕಿ. ಆದರೆ ಚಿತ್ರದ ಪಾತ್ರ ಎಂಥದ್ದು ಎನ್ನುವ ಗುಟ್ಟು ಮಾತ್ರ ಬಿಟ್ಟುಕೊಡಲ್ಲ.
ಸಂಪದಾ ಹುಲಿವಾನ ಅವರು ಕಿರುತೆರೆಯಲ್ಲಿ ಖ್ಯಾತರಾಗಿದ್ದವರು. ಮಿಥುನ ಧಾರಾವಾಹಿ ಅವರಿಗೆ ಭಾರೀ ಹೆಸರು ತಂದುಕೊಟ್ಟಿತ್ತು. ನಿಖಿಲ್ ಕುಮಾರಸ್ವಾಮಿ ಅಭಿನಯಿಸಿದ್ದ ರೈಡರ್ ಚಿತ್ರದಲ್ಲಿ 2ನೇ ನಾಯಕಿಯಾಗಿ ನಟಿಸಿದ್ದರು. ಇನ್ನು ಅನೀಶ್ ತೇಜೇಶ್ವರ್ ಎದುರು ಬೆಂಕಿ ಚಿತ್ರದಲ್ಲಿ ನಟಿಸಿದ್ದ ಸಂಪದಾ ಹುಲಿವಾನ, ಗ್ಲಾಮರ್ ಜೊತೆಗೆ ಅಭಿನಯದ ತಾಕತ್ತೂ ಇರುವ ಅದ್ಭುತ ಪ್ರತಿಭೆ. ಕನ್ನಡದಲ್ಲಷ್ಟೇ ಅಲ್ಲದೆ ಕೆಲವು ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.
ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲಮ್ಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸುತ್ತಿರುವ ಎಕ್ಕ ಚಿತ್ರ ಎಕ್ಕ. ಅಶ್ವಿನಿ ಪುನೀತ್, ಜಯಣ್ಣ-ಭೋಗೇಂದ್ರ, ಕಾರ್ತಿಕ್ ಗೌಡ-ಯೋಗಿ ಬಿ ರಾಜ್ ಚಿತ್ರದ ನಿರ್ಮಾಪಕರು. ರತ್ನನ ಪ್ರಪಂಚ, ಉತ್ತರಕಾಂಡ ಚಿತ್ರದ ಡೈರೆಕ್ಟರ್ ರೋಹಿತ್ ಪದಕಿ ಎಕ್ಕ ಚಿತ್ರವನ್ನ ಡೈರೆಕ್ಷನ್ ಮಾಡುತ್ತಿದ್ದು, ವಿಕ್ರಮ್ ಹತ್ವಾರ್ ಹಾಗೂ ರೋಹಿತ್ ಪದಕಿ ಜೊತೆಗೂಡಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ, ದೀಪು ಎಸ್ ಕುಮಾರ್ ಅವರ ಸಂಕಲನ. ಸತ್ಯ ಹೆಗಡೆ ಛಾಯಾಗ್ರಹಣ ಇರಲಿದೆ.
ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ.