ಕನ್ನಡದಲ್ಲಿ ಸ್ಟಾರ್ ಚಿತ್ರಗಳು ಬರುತ್ತಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದವರಿಗೆ ಈಗ ಸ್ಟಾರ್ ವಾರ್ ನೋಡುವ ಸಮಯ ಬರುತ್ತಿದೆ. ಈಗಾಗಲೇ ಕೆಲವು ಸ್ಟಾರ್ ಚಿತ್ರಗಳು ಮುಖಾಮುಖಿಯಾಗುತ್ತಿವೆ. ಈ ನಡುವೆ ಶ್ರೀಮುರಳಿ ಮತ್ತು ಉಪೇಂದ್ರ ವಾರ್ ಕೂಡಾ ನಡೆಯಲಿದೆಯಾ ಅನ್ನೋ ಪ್ರಶ್ನೆ ಎದುರಾಗಿದೆ. ಅಕ್ಟೋಬರ್ 21ಕ್ಕೆ ಬಘೀರ ರಿಲೀಸ್ ಆಗುತ್ತಿದೆ. ಅಂದಹಾಗೆ ಅಕ್ಟೋಬರ್ ತಿಂಗಳಲ್ಲೇ ಉಪೇಂದ್ರರ ಯುಐ ರಿಲೀಸ್ ಆಗೋ ಸಾಧ್ಯತೆಗಳಿವೆ.
ಬಘೀರ. ಸುಮಾರು ವರ್ಷಗಳಿಂದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲೇ ಇದ್ದ ಸಿನಿಮಾ. ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದ್ದು, ಅಕ್ಟೋಬರ್ ೩೧ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ಅದೇ ಅಕ್ಟೋಬರ್ ತಿಂಗಳಲ್ಲಿ ಸಿಗುವ ದೊಡ್ಡ ಸುದೀರ್ಘ ರಜೆ ಇರುವ ಸಮಯ ದೀಪಾವಳಿ. ಉಪೇಂದ್ರ ಅವರು ರಿಲೀಸ್ ಡೇಟ್ ಅನೌನ್ಸ್ ಮಾಡಿಲ್ಲವಾದರೂ, ದೀಪಾವಳಿಗೆ ರಿಲೀಸ್ ಆಗಬಹುದು ಅನ್ನೋದು ಅಭಿಮಾನಿಗಳ ನಿರೀಕ್ಷೆ.
‘ಬಘೀರ’ ಸಿನಿಮಾದಲ್ಲಿ ಶ್ರೀಮುರಳಿಗೆ ಎದುರಾಗಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದಲ್ಲಿ ಪ್ರಕಾಶ್ ರೈ, ಅಚ್ಯುತ್ ಕುಮಾರ್, ರಂಗಾಯಣ ರಘು, ಗರುಡ ರಾಮ್ ಇನ್ನೂ ಮುಂತಾದವರಿದ್ದಾರೆ. ಸಿನಿಮಾದ ಕತೆಯನ್ನು ಪ್ರಶಾಂತ್ ನೀಲ್ ಬರೆದಿದ್ದಾರೆ. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವುದು ಡಾ ಸೂರಿ. ಸಿನಿಮಾದ ಬಿಡುಗಡೆ ದಿನಾಂಕ ಪೋಸ್ಟರ್ನಲ್ಲಿ ಪ್ರಶಾಂತ್ ನೀಲ್ ಹೆಸರನ್ನೇ ಹೈಲೆಟ್ ಮಾಡಲಾಗಿದೆ. ಚಿತ್ರದ ಪ್ರಚಾರ ತಂತ್ರಗಳಲ್ಲಿ ಇದೂ ಒಂದು ಅಂಶ ಇರಬಹುದು.
ಯುಐ ಚಿತ್ರದಲ್ಲಿ ಉಪೇಂದ್ರ, ರೀಷ್ಮಾ ನಾಣಯ್ಯ, ಸನ್ನಿ ಲಿಯೋನ್, ನಿಧಿ ಸುಬ್ಬಯ್ಯ ನಟಿಸಿದ್ದಾರೆ. ಬಘೀರ ಶುರುವಾಗಿದ್ದು ತುಂಬಾ ಹಿಂದೆ. ಯುಐ ಶುರುವಾಗಿದ್ದು ಕಳೆದ ವರ್ಷ.
ಬಘೀರ ಶುರುವಾಗಿ ರಿಲೀಸ್ ಆಗುವ ಸುದೀರ್ಘ ಕಾಲದ ಮಧ್ಯೆ ತಮಿಳಿನಲ್ಲಿ ಪ್ರಭುದೇವ ಅವರ ಅಭಿನಯದ ಬಘೀರ ಚಿತ್ರ ರಿಲೀಸ್ ಆಗಿ, ಚಿತ್ರ ಪ್ರೇಕ್ಷಕರು ಆ ಚಿತ್ರವನ್ನೂ ಮರೆತಿದ್ದೂ ಆಗಿದೆ. ಆದರೆ ಯುಐ ಹಾಗಲ್ಲ, ಚಿತ್ರ ಶುರುವಾದಾಗಿನಿಂದಲೂ ನಿರಂತರ ಸುದ್ದಿಯಲ್ಲಿದೆ. ಕುತೂಹಲವನ್ನೂ ಹುಟ್ಟಿಸುತ್ತಿದೆ.
ಬಘೀರ ಶುರುವಾಗಿದ್ದು ಕೊರೊನಾಕ್ಕೂ ಮೊದಲು. ಲಾಕ್ ಡೌನ್ ಮತ್ತಿತರ ಕಾರಣಗಳಿಂದಾಗಿ ನಿಧಾನವಾಗಿ ಶುರುವಾದ ಚಿತ್ರಕ್ಕೆ, ಶ್ರೀಮುರಳಿಯವರು ಅಪಘಾತಕ್ಕೀಡಾಗಿದ್ದು ಕೂಡಾ ವಿಳಂಬಕ್ಕೆ ಕಾರಣವಾಯ್ತು. ಡೇಟ್ಸ್ ಹೊಂದಾಣಿಕೆ ಕಷ್ಟವಾಗಿ ಪ್ಲಾನಿಂಗ್ ಎಲ್ಲ ಏರುಪೇರಾಯ್ತು. ಇದೀಗ ಅಕ್ಟೋಬರ್ ೩೧ಕ್ಕೆ ಚಿತ್ರದ ರಿಲೀಸ್ ಘೋಷಣೆ ಮಾಡಲಾಗಿದೆ.
ಬಘೀರ’ ಸಿನಿಮಾದ ಟೀಸರ್ ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಟೋನ್, ಕಲರ್ ಥೀಮ್ ‘ಕೆಜಿಎಫ್’ ಮಾದರಿಯಲ್ಲಿಯೇ ಇದೆ. ಟೀಸರ್ ಬಿಡುಗಡೆ ಮಾಡಿ ೯ ತಿಂಗಳುಗಳ ಬಳಿಕ ಈಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಸಿನಿಮಾ ಕನ್ನಡ ಮಾತ್ರವಲ್ಲದೆ ಕೆಲ ಪರಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿರುವುದು ವಿಶೇಷ. ಅಂದಹಾಗೆ ಬಘೀರ ರಿಲೀಸ್ ಆಗುತ್ತಿರುವ ಸಮಯದಲ್ಲೇ ಉಪೇಂದ್ರ ಅವರ ಯುಐ ರಿಲೀಸ್ ಆಗುವ ಸಾಧ್ಯತೆ ಇದೆ. ಅಕ್ಟೋಬರ್ ೧೧ಕ್ಕೆ ಮಾರ್ಟಿನ್ ರಿಲೀಸ್ ಆಗುತ್ತಿದೆ. ಒಟ್ಟಿನಲ್ಲಿ ಅಕ್ಟೋಬರ್ ನಂತರ ಚಿತ್ರರಂಗದಲ್ಲಿ ಸ್ಟಾರ್ ಸಿನಿಮಾಗಳ ಸುನಾಮಿ ಶುರುವಾಗಲಿದೆ.
ಒಟ್ಟಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಸಿನಿಮಾಗಳ ಪೈಪೋಟಿ ಫಿಕ್ಸ್ ಆಗಿದೆ. ಮೊದಲಿಗೆ ಧ್ರುವ ಸರ್ಜಾ ಬಂದರೆ, ತಿಂಗಳ ಕೊನೆಯಲ್ಲಿ ಶ್ರೀಮುರಳಿ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ಅದು ಮುಗಿಯುತ್ತಿದ್ದಂತೆ ಮುಂದಿನ 15 ದಿನಗಳಲ್ಲಿ ಶಿವಣ್ಣ ಅಭಿನಯದ ಭೈರತಿ ರಣಗಲ್ ರಿಲೀಸ್ ಆಗಲಿದೆ. ಡೇಟ್ ಫಿಕ್ಸ್ ಆಗದೇ ಇರುವುದು ಉಪೇಂದ್ರ ಅವರ ಯುಐ ಮಾತ್ರ.