ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆಗೆ ವಿಜಯೇಂದ್ರ ಸಮರ್ಥರಿದ್ದಾರೆ. ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಉತ್ತಮ ಎಂಬ ಕಾರಣಕ್ಕೇ ಅವರನ್ನು ಆಯ್ಕೆ ಮಾಡಲಾಗಿದೆ ಇಂಥಾದ್ದೊಂದು ಸಂದೇಶ ನೀಡಿರುವುದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್.
ಬೆಂಗಳೂರಿನಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಇಂಥಾದ್ದೊಂದು ಖಡಕ್ ಸಂದೇಶ ನೀಡಿರುವ ರಾಧಾ ಮೋಹನ್ ದಾಸ್ ಯಾವ ಸಮಯಕ್ಕೆ ಯಾವ ನಾಯಕರು ಉತ್ತಮವೋ ಅವರು ಇರುತ್ತಾರೆ. ಪ್ರಸ್ತುತ ವಿಜಯೇಂದ್ರ ಸೂಕ್ತ ಎನಿಸಿದೆ. ವರಿಷ್ಠರಿಗೆ ಈ ಸಂದರ್ಭದಲ್ಲಿ ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದು ಉತ್ತಮ ಎಂದು ಅನಿಸಿದ್ದ ಕಾರಣಕ್ಕೇ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಲ್ಲದೆ ರಾಜ್ಯದಲ್ಲಿ ಬಿ.ವೈ. ವಿಜಯೇಂದ್ರ ಮತ್ತು ಬಸನಗೌಡ ಯತ್ನಾಳ್ ಎಂಬ ತಂಡಗಳು ಇಲ್ಲ. ಆದರೆ, ಪಕ್ಷದೊಳಗಿನ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈಗಾಗಲೇ ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದರು. ನಮ್ಮದು ಶಿಸ್ತಿನ ಪಕ್ಷ. ಕರ್ನಾಟಕದಲ್ಲಿ 71 ಲಕ್ಷ ಕಾರ್ಯಕರ್ತರು ಇದ್ದಾರೆ. ಎಲ್ಲರ ವ್ಯಕ್ತಿತ್ವ ಬೇರೆ ಇರುತ್ತದೆ. ಯಾರ ವ್ಯಕ್ತಿತ್ವ ಸರಿ ಎಂಬುದಕ್ಕೆ ಕಾಲವೇ ಸರಿಯಾದ ಉತ್ತರ ನೀಡಲಿದೆ ಎಂದು ಕೂಡಾ ಹೇಳಿದ್ದಾರೆ. ಆದರೆ ಅದನ್ನು ಎಂದಿನಂತೆ ಯತ್ನಾಳ್ & ಟೀಂ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದೇ ರಾಧಾ ಮೋಹನ್ ದಾಸ್ ಅವರ ಮಾತಿನ ತೂಕದ ವಿಶೇಷ.
ಇನ್ನು ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ‘ಬಿಜೆಪಿ ಚಿಹ್ನೆಯಲ್ಲಿ ಗೆದ್ದಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರು ಕಳೆದ ಹಲವು ತಿಂಗಳಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಜೊತೆ ಅಧಿಕೃತವಾಗಿ ಗುರುತಿಸಿಕೊಂಡಿದ್ದಾರೆ. ಈ ಇಬ್ಬರು ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ಕೋರ್ ಕಮಿಟಿ ಸರ್ವಾನುಮತದಿಂದ ಕೋರಿದೆ. ಈ ವಿಚಾರವನ್ನು ರಾಷ್ಟ್ರೀಯ ಅಧ್ಯಕ್ಷರ ಮತ್ತು ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.
ಸಭೆಯಲ್ಲಿ ಇತ್ತೀಚಿನ ಉಪಚುನಾವಣೆ ಸೋಲಿನ ಪರಾಮರ್ಶೆ ಮಾಡಲಾಗಿದೆ. ಶಿಗ್ಗಾಂವಿ ಮತ್ತು ಸಂಡೂರಿನ ಸೋಲಿಗೆ ಕಾರಣ ತಿಳಿಯಲು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಮಾಜಿ ಸಚಿವ ಎನ್,ಮಹೇಶ್ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಈ ತಂಡ ಎರಡೂ ಕ್ಷೇತ್ರಗಳಿಗೆ ತೆರಳಿ ಸೋಲಿನ ಬಗ್ಗೆ ಮಾಹಿತಿ ಕಲೆಹಾಕಲಿದೆ ಎಂದರು.
ಇನ್ನು ಯತ್ನಾಳ್ ಬಂಡಾಯದ ವಿಷಯಕ್ಕೆ ಮಾತನಾಡಿರುವ ವಿಜಯೇಂದ್ರ ಅವರು ಈಗಾಗಲೇ ಕೇಂದ್ರದ ಶಿಸ್ತು ಸಮಿತಿ ಎದುರು ಹಾಜರಾಗಿ ಬಂದಿದ್ದಾರೆ. ಈಗ ಬಾಲ್ ವರಿಷ್ಠರ ಅಂಗಳದಲ್ಲಿದೆ. ಯಾರೂ ಶಿಸ್ತು ಮೀರುವಂತಿಲ್ಲ. ಈ ಹಿಂದಿನ ಘಟನೆಗಳಿಂದ ಪಕ್ಷದ ಕಾರ್ಯಕರ್ತರಿಗೆ ಬೇಸರವಾಗಿದೆ. ಪಕದ ಬೆಳವಣಿಗೆ ದೃಷ್ಟಿಯಿಂದಲೂ ಇದು ಒಳ್ಳೆಯದಲ್ಲ. ಯಾರೇ ಆದರೂ ಪಕ್ಷದ ಚೌಕಟ್ಟಿನಲ್ಲಿ ಚರ್ಚಿಸ ಬೇಕು. ಹಾದಿ-ಬೀದಿಯಲ್ಲಿ ಮಾತನಾಡುವವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ ಎಂದಷ್ಟೇ ಉತ್ತರಿಸಿದ್ದಾರೆ.
ಒಟ್ಟಿನಲ್ಲಿ ಕೋರ್ ಕಮಿಟಿ ಮೀಟಿಂಗ್ ಕೂಡಾ ಯಾವುದೇ ತೀರ್ಮಾನ ತೆಗೆದುಕೊಳ್ಳದೆ, ರಾಜ್ಯ ಬಿಜೆಪಿ ವಿಷಯದಲ್ಲಿ ತಾನೆಷ್ಟು ನಿಷ್ಕ್ರಿಯ ಎನ್ನುವುದನ್ನು ಮತ್ತೆ ಸಾಬೀತು ಮಾಡಿದೆ, ಅಷ್ಟೆ.