ಬೆಲ್ ಸ್ಟಾರ್ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮೊದಲ ಬಾರಿಗೆ ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ. ಏ.17ರಂದು ವಿಜಯಪುರದಲ್ಲಿ ಬಿಜೆಪಿಯ ಜನಾಕ್ರೋಶ ಯಾತ್ರೆ ನಡೆಯಲಿದೆ. ಆದರೆ, ಶಾಸಕ ಬಸನಗೌಡ ಪಾಟೀಲ ಇಲ್ಲದೆ ಈ ಯಾತ್ರೆ ನಡೆಯುತ್ತಿರುವುದು ವಿಶೇಷ.
ಯತ್ನಾಳ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಪದೇ ಪದೇ ಹೇಳಿಕೆ ನೀಡಿ ನೀಡಿ ಪಕ್ಷದಿಂದಲೇ ಉಚ್ಛಾಟನೆಯಾಗಿದ್ದಾರೆ. ಉಚ್ಚಾಟನೆ ವಿರೋಧಿಸಿ ಹಾಗೂ ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ಅವರ ಬೆಂಬಲಿಗರು, ಪಂಚಮಸಾಲಿ ಸಮಾಜದವರು ಹೋರಾಟದ ಹಾದಿಯನ್ನೂ ತುಳಿದಿದ್ದಾರೆ. ಈ ನಡುವೆಯೇ ವಿಜಯೇಂದ್ರ, ವಿಜಯಪುರಕ್ಕೆ ಎಂಟ್ರಿ ಕೊಟ್ಟಿರೋದು ವಿಶೇಷ.
ಏನೇನು ಬದಲಾಗಿದೆ..?
ವಿಜಯಪುರದಲ್ಲಿ ಇಷ್ಟುದಿನ ಯತ್ನಾಳ ಬೆಂಬಲಿಗ ಆರ್.ಎಸ್.ಪಾಟೀಲ ಕೂಚಬಾಳ ಸಾರಥಿಯಾಗಿದ್ದರು. ಈಗ ವಿಜಯೇಂದ್ರ ಬಣದ ಗುರುಲಿಂಗಪ್ಪ ಅಂಗಡಿ ಜಿಲ್ಲಾಧ್ಯಕ್ಷರಾಗಿದ್ದಾರೆ. ಹೀಗಾಗಿ ಯತ್ನಾಳರ ವಿರುದ್ಧ ಸೇಡು ತೀರಿಸಿಕೊಳ್ಳಲು ವಿಜಯೇಂದ್ರ ಮತ್ತು ಅವರ ತಂಡ ಹವಣಿಸುತ್ತಿದೆ. ಹೋರಾಟಕ್ಕೆ ಯತ್ನಾಳ್ ಅವರ ವಿರುದ್ಧ ಅಡ್ಜಸ್ಟ್‌ಮೆಂಟ್ ಆರೋಪ ಆಡಿದ್ದ ವಿಜುಗೌಡ ಪಾಟೀಲರೂ ಸಾಥ್ ಕೊಟ್ಟಿದ್ದಾರೆ. . ಯತ್ನಾಳರ ಕಡುವೈರಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹಾಗೂ ಅವರ ಬೆಂಬಲಿಗರು, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಉಚ್ಚಾಟನೆಗೊಂಡು ಮತ್ತೆ ಬಿಜೆಪಿ ಸೇರಿದ 2ನೇ ಹಂತದ ನಾಯಕರು ಯತ್ನಾಳ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದಾರೆ.
ಇನ್ನು ವಿಜಯೇಂದ್ರ ಅವರು ಅತ್ತ ತಮ್ಮ ವಿರುದ್ಧದ ಪ್ರತಿಭಟನೆ ಕುರಿತು, ಒಳಗೊಳಗೇ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಬಹಿರಂಗವಾಗಿ ಮಾತನಾಡುತ್ತಿಲ್ಲ. ಆದರೆ, ಸೌಮ್ಯವಾಗಿಯೇ ರಿಯಾಕ್ಟ್ ಮಾಡ್ತಿದ್ಧಾರೆ. ರಮೇಶ್ ಜಾರಕಿಹೊಳಿ ಕುರಿತಂತೆ ಮಾತನಾಡಿರುವ ವಿಜಯೇಂದ್ರ ಷ್ಟವಾದ ಉತ್ತರವಿಲ್ಲ. ಅವರು ಭಾಗವಹಿಸುವ ನಿರೀಕ್ಷೆ ಇದೆ, ನಿನ್ನೆಯೇ ಫೋನ್ ಕರೆ ಮಾಡಿ ತಿಳಿಸಿದ್ದೆ, ಆದರೆ ಬ್ಯೂಸಿಯಿದ್ದ ಕಾರಣ ಅವರು ನಿನ್ನೆಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ಅಂದರೆ ವಿಜಯೇಂದ್ರ ಅವರ ಕಡೆಯಿಂದ ʻಸಂಧಾನ ಪ್ರಕ್ರಿಯೆʼ ಪ್ರಯತ್ನಗಳು ಶುರುವಾಗಿವೆ.
ಯತ್ನಾಳ್ ಬೆಂಬಲಿಗರ ನಡೆ
ಯತ್ನಾಳರ ಬೆಂಬಲಿಗರು, ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಪೋಸ್ಟ್ ಮಾಡಿ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಜಯಪುರ, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಜರುಗಿದೆ. ಆದರೆ ಯತ್ನಾಳ್ ಪರ ಬೆಂಬಲಿಗರ ಪ್ರತಿಭಟನೆ, ಹೋರಾಟ ಎಲ್ಲವೂ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದ್ದು, ನೆಲಮಟ್ಟದಲ್ಲಿ ಕಾಣಿಸುತ್ತಿಲ್ಲ. ಅಲ್ಲದೆ ಯತ್ನಾಳ್ ಉಚ್ಛಾಟನೆ ನಂತರ, ಯತ್ನಾಳ್ ಜೊತೆಗಿದ್ದ ಯಾವೊಬ್ಬ ಶಾಸಕರೂ ಯತ್ನಾಳ್ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿಕೊಳ್ಳೋಕೆ ಹಿಂದೇಟು ಹಾಕುತ್ತಿದ್ದಾರೆ. ಯತ್ನಾಳ ಪರ ಹೋರಾಟ ಅವರು ನಿರೀಕ್ಷಿಸಿದ ಮಟ್ಟದಲ್ಲಿ ಆಗುತ್ತಿಲ್ಲ. ಇನ್ನು ಒಳಗೊಳಗೇ ವಿಜಯೇಂದ್ರ ವಿರುದ್ಧ ಕತ್ತಿ ಮಸೆಯುತ್ತಿರುವ ಬಿಜೆಪಿ ನಾಯಕರಿಗೆ ಅಮಿತ್ ಶಾ ತಣ್ಣೀರು ಎರಚಿದ್ದಾರೆ. ಆರ್ ಎಸ್ ಎಸ್ ನಾಯಕರೂ ಕೂಡಾ ಯತ್ನಾಳ್ ಜೊತೆಯಲ್ಲಿ ನಿಂತಿಲ್ಲ. ಹೀಗಾಗಿ ವಿಜಯಪುರದಲ್ಲಿ ನಡೆಯುವ ಜನಾಕ್ರೋಶ ಗೆದ್ದರೆ, ಯಶಸ್ವಿಯಾದರೆ.. ಯತ್ನಾಳ್ ಕೋಟೆಯಲ್ಲಿಯೇ ಗೆದ್ದಂತಾಗಲಿದೆ.