ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ರಾಜಕೀಯ ಸಮರಕ್ಕೀಗ ದೇವೇಂದ್ರ ಫಡ್ನವಿಸ್ ಎಂಟ್ರಿ ಕೊಟ್ಟಿದ್ದಾರೆ. ವಿಜಯೇಂದ್ರ ಅವರನ್ನು ಯಾವುದೇ ಕಾರಣಕ್ಕೂ ಆ ಸ್ಥಾನದಲ್ಲಿ ಮುಂದುವರಿಸಬಾರದು ಎಂದು ಪಣತೊಟ್ಟಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣದ ಮುಖಂಡರು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನೆರವು ಪಡೆಯಲು ಮುಂದಾಗಿದ್ದಾರೆ. ಅಂದಹಾಗೆ ಈ ರೂಟ್ ಸೆಟ್ ಮಾಡಿಕೊಟ್ಟಿರುವುದು ರಮೇಶ್ ಜಾರಕಿಹೊಳಿ ಅವರಂತೆ.
ಯತ್ನಾಲ್ ಬಣದಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿರುವ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಮೊದಲಿನಿಂದಲೂ ದೇವೇಂದ್ರ ಫಡ್ನವೀಸ್ ಅವರ ಜತೆ ನಂಟಿದೆ. ಹಿಂದೆ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬರುವ ವೇಳೆ ಫಡ್ನವೀಸ್ ಅವರ ನಂಟು ಕೆಲಸ ಮಾಡಿತ್ತು. ಈಗಲೂ ಅವರ ಮೂಲಕವೇ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರವನ್ನು ಯತ್ನಾಳ್ ಬಣ ಮಾಡುತ್ತಿದೆ ಎನ್ನಲಾಗಿದೆ. ಆದರೆ, ಫಡ್ನವೀಸ್ ಅವರ ಸಂಪರ್ಕ ಈ ವಿಷಯದಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದು ಮಾತ್ರ ಖಚಿತವಿಲ್ಲ. ಒಂದಂತೂ ಸತ್ಯ, ಫಡ್ನವಿಸ್ ಹೈಕಮಾಂಡ್ ಮಟ್ಟದಲ್ಲಿ ಒಳ್ಳೆಯ ಪ್ರಭಾವ ಹೊಂದಿರುವ ನಾಯಕ. ಆ ವಿಷಯದಲ್ಲಂತೂ ಯಾವುದೇ ಅನುಮಾನ ಇಲ್ಲ.
ಯತ್ನಾಳ್ ಮತ್ತು ಜಾರಕಿಹೊಳಿ ಅವರು ಮೊದಲಿನಿಂದಲೂ ವಿಜಯೇಂದ್ರ ವಿರುದ್ಧ ಕಿಡಿ ಕಾರುತ್ತಲೇ ಬಂದಿದ್ದಾರೆ. ಆ ಹೋರಾಟಕ್ಕೆ ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಬಿಪಿ ಹರೀಶ್, ಸಿದ್ದೇಶ್ವರ್ ಮೊದಲಾದ ಈಗ ಇನ್ನೂ ಕೆಲವು ನಾಯಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ಎಲ್ಲರ ಗುರಿ ಈಗ ವಿಜಯೇಂದ್ರ ಅವರನ್ನು ಮತ್ತೊಮ್ಮೆ ರಾಜ್ಯಾಧ್ಯಕ್ಷರನ್ನಾಗಿ ಮಾಡಬಾರದು ಎನ್ನುವುದು. ಪಕ್ಷದ ವರಿಷ್ಠರು ವಿಜಯೇಂದ್ರ ಅವರನ್ನೇ ಮುಂದುವರಿಸುತ್ತಾರೆ ಎಂಬ ನಿರೀಕ್ಷೆ ಇರುವುದರಿಂದ ಯತ್ನಾಳ ಬಣದ ಮುಖಂಡರು ತಮ್ಮ ಪ್ರಯತ್ನವನ್ನು ಮತ್ತಷ್ಟು ಚುರುಕುಗೊಳಿಸಲು ನಿರ್ಧರಿಸಿದ್ದಾರೆ.
ಫಡ್ನವಿಸ್ ಭೇಟಿ ಮಾಡಿ.. ನಂತರ ದೆಹಲಿಗೆ :
ಇನ್ನು ಹೈಕಮಾಂಡ್ ಅಂದರೆ ಅಮಿತ್ ಶಾ ದೆಹಲಿಗೆ ಬಂದಿದ್ದಾಗ ದೆಹಲಿಗೆ ಬನ್ನಿ, ಮಾತನಾಡೋಣ ಎಂದಿದ್ದಾರಂತೆ. ಆದರೆ ಶಾ ಅದಕ್ಕೆ ಸಮಯವನ್ನೇನೂ ಕೊಟ್ಟಿಲ್ಲ. ಮೊದಲು ದೆಹಲಿಗೆ ಹೋಗೋಣ, ಟೈಂ ಸಿಕ್ಕೋದು ಆಮೇಲೆ ನೋಡೋಣ ಎಂದು ಹೊರಟಿರುವ ಯತ್ನಾಳ್ ಪಡೆಗೆ ಫಡ್ನವಿಸ್ ಸಂಪರ್ಕ ದೊಡ್ಡ ಬಲವನ್ನಂತೂ ನೀಡಿದೆ. ಫಡ್ನವಿಸ್ ಮೂಲಕವೇ ಯತ್ನಾಳ್ ಪಡೆ, ಅಮಿತ್ ಶಾ ಅವರನ್ನು ರೀಚ್ ಮಾಡುವ ಪ್ಲಾನ್ ಹಾಕಿಕೊಂಡಿದೆ.
ಈ ಹಿಂದೆಯೂ ಫಡ್ನವಿಸ್ ಮೂಲಕ ಹೈಕಮಾಂಡ್ ಆಕ್ಟಿವ್ ಆಗಿತ್ತಾದರೂ, ಅದಕ್ಕೆ ಕಾರಣ ಖುದ್ದು ಯಡಿಯೂರಪ್ಪನವರೇ ಆಗಿದ್ದರು. ಬಿಜೆಪಿಯಲ್ಲಿ ಸರ್ಕಾರ ರಚನೆಗೆ ತಂತ್ರಗಾರಿಕೆ ಮಾಡುವುದೇ ಬೇರೆ, ರಾಜ್ಯದೊಳಗಿನ ಬಿಜೆಪಿ ನಾಯಕತ್ವ ಬಿಕ್ಕಟ್ಟಿಗೆ ಪರಿಹಾರ ಹುಡುಕುವುದೇ ಬೇರೆ ಎನ್ನುತ್ತಿರುವ ಹೈಕಮಾಂಡ್, ಫಡ್ನವಿಸ್ ಮಾತನ್ನೇನಾದರೂ ಕಿವಿಗೊಟ್ಟು ಕೇಳಿದರೆ ವಿಜಯೇಂದ್ರಗೆ ಕಂಟಕ ಫಿಕ್ಸ್ ಆದಂತೆಯೇ ಲೆಕ್ಕ.