ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹ ಲಕ್ಷ್ಮಿ Gruhalakshmi ಯೋಜನೆಯಡಿ ಅರ್ಜಿ ಸಲ್ಲಿಸಿದವರಲ್ಲಿ ಕೆಲವರಿಗೆ ಒಂದು ಬಾರಿ ಹಣ ಬಂದಿದ್ದರೆ ಇನ್ನು ಕೆಲವರಿಗೆ ಇದುವರೆಗೆ ಹಣವೇ ಬಂದಿಲ್ಲ. ಅರ್ಜಿ ಸಲ್ಲಿಸಲು ಹೋದರೆ ಹತ್ತಾರು ದಾಖಲೆ ಕೇಳುತ್ತಾರೆ, ಅದು ಸರಿ ಇಲ್ಲ, ಇದನ್ನು ಬದಲಾಯಿಸಿಕೊಂಡು ಬನ್ನಿ ಎನ್ನುತ್ತಾರೆ ಹೀಗೆ ಮಹಿಳೆಯರು ಆರೋಪಿಸುತ್ತಿದ್ದರು. ಕಳೆದ ಮೂರು ತಿಂಗಳುಗಳಿಂದ ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ರಾಜ್ಯದ 1.2 ಕೋಟಿ ಗೃಹಿಣಿಯರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆದರೆ ಯೋಜನೆ ಅನುಷ್ಠಾನಗೊಂಡು ಮೂರು ತಿಂಗಳು ಕಳೆದರೂ ಕೂಡ ಶೇಕಡಾ 30ರಷ್ಟು ಕೂಡ ಅರ್ಹ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಮಾಸಿಕ 2,000 ರೂಪಾಯಿ ಹಣ ಜಮಾ ಆಗುತ್ತಿಲ್ಲ. ಅರ್ಹ ಮಹಿಳೆಯರಿಗೆ ಹಣ ಏಕೆ ಜಮಾ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಲೇ ಇದೆ. ಇವುಗಳಿಗೆಲ್ಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ Lakshmi hebbalkar ಉತ್ತರ ಕೊಟ್ಟಿದ್ದಾರೆ.
ದೀಪಾವಳಿಗೂ ಮೊದಲೇ ಎಲ್ಲ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಿದ್ದೇವೆ. 100% ಗ್ಯಾರಂಟಿ ಎಂದಿದ್ದಾರೆ ಸಚಿವೆ ಲಕ್ಷ್ಮೀ ಹೆಬ್ಭಾಳ್ಕರ್.
ದೀಪಾವಳಿ ಹಬ್ಬದೊಳಗೆ Deepavali Gruhalakshmi ಗೃಹಲಕ್ಷ್ಮಿಯೋಜನೆಯಡಿ ನೋಂದಣಿಯಾಗಿರುವ ಎಲ್ಲ ಮಹಿಳೆಯರಿಗೆ ಹಣ ಸಿಗುವಂತಾಗುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ . ಪ್ರತಿಯೊಬ್ಬ ಅರ್ಹ ಮಹಿಳೆಗೆ ಹಬ್ಬದೊಳಗೆ ಹಣ ತಲುಪಲೇಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಾಕೀತು ಮಾಡಿರುವುದರಿಂದ ತಮ್ಮ ಮೇಲೆ ದೊಡ್ಡ ಜವಾಬ್ದಾರಿ ಇದೆ. ಈಗಾಗಲೇ ರಿಜಿಸ್ಟರ್ ಆಗಿರುವ ಮಹಿಳೆಯರಿಗೆ ಹಣ ಬಂದಿಲ್ಲದಿದ್ದರೆ ಅವರಿಗೆ ಬಾಕಿ ಸಮೇತ ಹಣ ನೀಡುತ್ತೇವೆ. 3 ತಿಂಗಳ ಬಾಕಿಯನ್ನೂ ಒಮ್ಮೆಗೆ ಕೊಡುತ್ತೇವೆ ಎಂದಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್.
ಅಗಸ್ಟ್ 30 ನೇ ತಾರೀಖು ಗೃಹಲಕ್ಷ್ಮಿ ಯೋಜನೆಯನ್ನು ಲಾಂಚ್ ಮಾಡಿದ್ದೇವೆ. ಹಲವರಿಗೆ ತಲುಪಿದೆ, ಆದ್ರೆ ಕೆಲವು ಗೊಂದಲ ಸೃಷ್ಟಿಯಾಗಿದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್, ಅಗಸ್ಟ್ ನಲ್ಲಿ 1.08 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್-1.12 ಕೋಟಿ, ಅಕ್ಟೋಬರ್ 1.16 ಕೋಟಿ ನೋಂದಣಿಯಾಗಿದೆ. ಅಗಸ್ಟ್ ತಿಂಗಳಲ್ಲಿ 2169 ಕೋಟಿ ರೂ ಹಾಕಲಾಗಿದೆ. 97% ಕುಟುಂಬಕ್ಕೆ ಡಿಬಿಟಿ ಮೂಲಕ ಹಣ ಹೋಗಿದೆ. 5 ಲಕ್ಷ ಜನರಿಗೆ ದುಡ್ಡು ಹೋಗಿಲ್ಲ. ಸೆಪ್ಟೆಂಬರ್ ರಲ್ಲಿ 2288 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ ಲಕ್ಷ್ಮೀ ಹೆಬ್ಬಾಳ್ಕರ್.
ಒಟ್ಟು 82% ಜನರಿಗೆ ಹಣ ಹೋಗಿತ್ತು. ಆದ್ರೆ 12 ಲಕ್ಷ ಜನರ ದುಡ್ಡು ಹೋಗಿಲ್ಲ, ಬ್ಯಾಂಕ್ ಅಕೌಂಟ್ ನಲ್ಲಿದೆ ಎಂದ ಹೆಬ್ಬಾಳ್ಕರ್, ಅಕ್ಟೋಬರ್ ನಲ್ಲಿ 2400 ಕೋಟಿ ಹಣ ಬಿಡುಗಡೆಯಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ 7.90 ಲಕ್ಷ ಅರ್ಜಿ ವಿಲೇವಾರಿಗೆ ಬಾಕಿಯಿದೆ. ಈ ತಿಂಗಳು ಎಲ್ಲರ ಅಕೌಂಟ್ ಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಇದೀಗ ಒಂದು ದಿನಕ್ಕೆ ಮೂರು ಜಿಲ್ಲೆಯ ಸಿಡಿಪಿ ಸಭೆಯಾಗ್ತಿದೆ. ಬೆಂಗಳೂರಿನಲ್ಲೇ ಕುಳಿತು ಸಮಸ್ಯೆಯನ್ನು ಬಗೆ ಹರಿಸಲಾಗ್ತಿದೆ. ದೀಪಾವಳಿಗೆ ಎಲ್ಲರ ಖಾತೆಗೆ ಹಣ ಹೋಗಬೇಕು ಅಂತ ಸಿಎಂ ಹೇಳಿದ್ದಾರೆ. 15 ದಿನದ ಒಳಗಾಗಿ ಎಲ್ಲರ ಖಾತೆಗೆ ಹಣ ಬರಲಿದೆ ಎಂದು ಹೇಳಿದರು. ಗೃಹಲಕ್ಷ್ಮೀ ಹಣ ಬಂದಿಲ್ಲದೇ ಇದ್ದಲ್ಲಿ ಸಹಾಯವಾಣಿಗೆ ಕರೆ ಮಾಡಿ ದೂರು ನೀಡುವಂತೆಯೂ ಸೂಚಿಸಿದ್ದಾರೆ.