ಮ್ಯಾಕ್ಸ್. ಸಿನಿಮಾ ಶುರುವಾಗಿ, ಚಿತ್ರೀಕರಣ ಕಂಪ್ಲೀಟ್ ಆಗಿ, ಪೋಸ್ಟ್ ಪ್ರೊಡಕ್ಷನ್ ಕೂಡಾ ಆಗಿ ಹೋಗಿದೆ. ಆದರೆ ಸಿನಿಮಾ ರಿಲೀಸ್ ಆಗ್ತಿಲ್ಲ. ಯಾವಾಗ ಅನ್ನೋದಕ್ಕೆ ಉತ್ತರ ಇಲ್ಲ. ಸ್ವತಃ ಸುದೀಪ್ ಅವರಿಗೂ ಉತ್ತರ ಗೊತ್ತಿಲ್ಲ. ಹಾಗಾದ್ರೆ ಚಿತ್ರಕ್ಕೆ ಫೈನಾನ್ಷಿಯಲ್ ಪ್ರಾಬ್ಲಮ್ಮಾ ಅಂದ್ರೆ.. ಅದೂ ಅಲ್ಲ. ಸಿನಿಮಾ ನಿರ್ಮಾಪಕರು ಮತ್ತು ನಾಯಕ ನಟರ ಮಧ್ಯೆ ಏನೋ ಸಮಸ್ಯೆ ಆಗಿದೆ ಎಂಬಂತೆ ಕಾಣುತ್ತಿದೆ. ಕಿಚ್ಚ ಸುದೀಪ್ ಅವರಂತಹ ಸ್ಟಾರ್ ಹೀರೋ ಇದ್ದೂ ಕೂಡಾ, ಸಿನಿಮಾ ರಿಲೀಸ್ ಆಗ್ತಿಲ್ಲ ಅಂದ್ರೆ, ಬೇರೇನೋ ಸಮಸ್ಯೆ ಇದೆ ಎಂದೇ ಅರ್ಥ.
ವಿಕ್ರಾಂತ್ ರೋಣ ರಿಲೀಸ್ ಆಗಿದ್ದು 2022ನೇ ಜುಲೈಗೆ. ಎರಡೂವರೆ ವರ್ಷವೇ ಆಗಿ ಹೋಗಿದೆ. ಕಿಚ್ಚ ಸುದೀಪ್ ಹೊಸ ಸಿನಿಮಾ ಇಲ್ಲ. ಕೇವಲ ಘೋಷಣೆಗಳಷ್ಟೇ ಬರುತ್ತಿವೆ. ಆದರೆ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಕಿಚ್ಚ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದ ಕೆಲಸಗಳು ಮುಗಿದು ತುಂಬಾ ಸಮಯ ಕಳೆದಿದೆ. ಶೀಘ್ರವೇ ಹೊಸ ಘೋಷಣೆ ಮಾಡುತ್ತೇವೆ ಎಂದು ನಿರ್ಮಾಪಕರು ಈ ಮೊದಲೇ ಹೇಳಿದ್ದರು. ಆದರೆ, ನಿರ್ಮಾಪಕರ ಕಡೆಯಿಂದಾಗಲೀ, ಕಿಚ್ಚ ಸುದೀಪ್ ಕಡೆಯಿಂದಾಗಲೀ.. ಯಾವುದೇ ಅಪ್ʻಡೇಟ್ ಬರುತ್ತಿಲ್ಲ. ಇದೀಗ ಸುದೀಪ್ ಅವರಿಗೂ ಈ ಬಗ್ಗೆ ಮಾಹಿತಿ ಇಲ್ಲ ಎಂಬುದು ಅಚ್ಚರಿ ಹುಟ್ಟಿಸಿದೆ.
ಬಿಗ್ ಬಾಸ್ ಶೋನಲ್ಲಿ ಮಾತನಾಡುತ್ತಿದ್ದ ವೇಳೆ ಅನುಷಾ ರೈ ಅವರು ಬಿಗ್ ಬಾಸ್ನಿಂದ ಎಲಿಮಿನೇಟ್ ಮಾಡಲಾಯ್ತು. ಆಗ ಅನುಷಾ ರೈ ತಮ್ಮ ಸಹೋದರ ಗೋಪಿ ಅವರನ್ನು ಸುದೀಪ್ ಅವರಿಗೆ ಪರಿಚಯಿಸಿದರು. ‘ಅವರು ನಿಮ್ಮ ದೊಡ್ಡ ಅಭಿಮಾನಿ’ ಎಂದು ಸಹೋದರನ ಬಗ್ಗೆ ಹೇಳಿದರು. ಇದನ್ನು ಕೇಳಿ ಸುದೀಪ್ಗೆ ಖುಷಿ ಆಯಿತು. ಗೋಪಿ ಬಳಿ ವೇದಿಕೆಗೆ ಬರುವಂತೆ ಸುದೀಪ್ ಕೋರಿದರು. ಗೋಪಿ ಅವರು ಖುಷಿ ಖುಷಿಯಿಂದ ಬಿಗ್ ಬಾಸ್ ವೇದಿಕೆ ಏರಿದರು. ‘ನಿಮ್ಮ ಸಿನಿಮಾಗಳನ್ನು ಮಿಸ್ ಮಾಡದೇ ನೋಡ್ತೀನಿ’ ಎಂದರು. ಇದರಿಂದ ಖುಷಿಯಾದ ಸುದೀಪ್, ‘ಮುಂದಿನ ಸಿನಿಮಾಗಳನ್ನು ನೋಡೋಕೆ ಮರೆಬೇಡಿ’ ಎಂದರು. ‘ನಾನು ನಿಮ್ಮ ಮ್ಯಾಕ್ಸ್ ಚಿತ್ರಕ್ಕೆ ಕಾಯುತ್ತಿದ್ದೇನೆ’ ಎಂದು ಗೋಪಿ ಹೇಳಿದರು.
‘ನಾನೂ ಕಾಯ್ತಾ ಇದ್ದೇನೆ. ಅದ್ಯಾವ್ ಪುಣ್ಯಾತ್ಮರು ಯಾವಾಗ ದೊಡ್ಮನಸ್ಸು ಮಾಡ್ತಾರೋ ಗೊತ್ತಿಲ್ಲ’ ಎಂದು ಸುದೀಪ್ ಹೇಳಿದರು. ‘ಮ್ಯಾಕ್ಸ್’ ನಿರ್ಮಾಪಕರು ಹಾಗೂ ಸುದೀಪ್ ಮಧ್ಯೆ ವೈಮನಸ್ಸು ಮೂಡಿದೆ ಎಂಬ ಮಾತಿದೆ. ಆದರೆ, ಇದನ್ನು ಸುದೀಪ್ ಅಲ್ಲಗಳೆದಿದ್ದರು. ಈಗ ಅವರು ಹೇಳಿರುವ ಮಾತು ಚರ್ಚೆ ಹುಟ್ಟುಹಾಕಿದೆ.
ಕನ್ನಡದಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳು ಬರುವುದೇ ಎರಡು ಮೂರು ವರ್ಷಕ್ಕೊಮ್ಮೆ. ಕೆಲವು ನಟರಿಗಂತೂ ಸಿನಿಮಾ ಬಗ್ಗೆ ಯೋಚನೆ ಮಾಡೋಕೆ ಒಂದು ವರ್ಷ, ಓಕೆ ಮಾಡೋಕೆ ಒಂದು ವರ್ಷ, ಶೂಟಿಂಗ್ ಮಾಡೋಕೆ ಎರಡು ವರ್ಷ.. ಹೀಗೆ ವರ್ಷಾನುಗಟ್ಟಲೆ ತಗೊಳ್ತಾರೆ. ಹೀಗಿರುವಾಗ ಸುದೀಪ್ ಅವರಂತಹ ದೊಡ್ಡ ನಟ ಕೂಡಾ ತಮ್ಮ ಚಿತ್ರದ ರಿಲೀಸ್ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಇಲ್ಲ ಎಂದರೆ, ಸುದೀಪ್ ಮತ್ತು ನಿರ್ಮಾಪಕರ ಮಧ್ಯೆ ಎಲ್ಲವೂ ಸರಿ ಇಲ್ಲ ಎಂದೇ ಅರ್ಥ. ಮ್ಯಾಕ್ಸ್ ಈ ವರ್ಷ ಬರೋದಿಲ್ಲ ಅನ್ನೋದಂತೂ ಕನ್ಫರ್ಮ್.
ಅದರೆ ವಿಜಯ್ ಕಾರ್ತಿಕೇಯನ್ ನಿರ್ದೇಶನ ಇರುವ, ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಾಣ ಸಂಸ್ಥೆಯ ಬ್ಯಾಕಪ್ ಇರುವ ವರಲಕ್ಷ್ಮಿ, ಶರತ್ ಕುಮಾರ್, ಸುಕೃತಾ ವಾಗ್ಲೆ, ಸುನಿಲ್, ಪ್ರಮೋದ್, ಸಂಯುಕ್ತಾ ಹೊರನಾಡು ಅವರಂತಹ ಘಟಾನುಘಟಿಗಳೇ ಇರುವ ಚಿತ್ರವೊಂದು ರಿಲೀಸ್ ಆಗುವುದಕ್ಕೆ ಇರುವ ಸಮಸ್ಯೆ ಏನು..? ಬಿಸಿನೆಸ್ ಆಗಿಲ್ವಾ..? ಸುದೀಪ್ ಅವರೇ ಉತ್ತರ ಕೊಡಬೇಕು.