ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಇದಕ್ಕೆ ಕಾರಣ ಬಿಜೆಪಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬಣಗಳಾಗಿರುವುದು. ರಾಜ್ಯ ಬಿಜೆಪಿಯಲ್ಲಿ ಒಳಜಗಳ ಹೊಸದೇನಲ್ಲ. ಅವು ಎಂದಿಂಗೂ ಅಂತ್ಯವಾಗುವುದಿಲ್ಲ. ಬಹುಶಃ ರಾಜ್ಯದಲ್ಲಿ ಬಿಜೆಪಿ ಅಂತ್ಯವಾದಾಗ ಆ ಒಳಜಗಳಗಳೂ ಕೊನೆಯಾಗಬಹುದು ಎನ್ನವುದು ಪಕ್ಷ ನಿಷ್ಠರ ಮಾತು. ಕರ್ನಾಟಕ ಬಿಜೆಪಿ ಕೋರ್ ಕಮಿಟಿ ಸಮಿತಿ ಸಭೆಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಪಕ್ಷದ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪ್ರಮುಖವಾಗಿ, ಶ್ರೀರಾಮುಲು ಬಗ್ಗೆ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಆಡಿದ ಮಾತು, ಸಾಕಷ್ಟು ಹಿರಿಯ ಬಿಜೆಪಿ ನಾಯಕರಿಗೆ ಪಥ್ಯವಾಗುತ್ತಿಲ್ಲ.
ವಿಶೇಷ ಅಂದ್ರೆ ಮಾಧ್ಯಮಗಳಲ್ಲಿ ಹಾಗೂ ಸಭೆಯಲ್ಲಿಯೂ ವಿಜಯೇಂದ್ರ ಅವರನ್ನು ಸಮರ್ಥನೆ ಮಾಡಿಕೊಂಡಿದ್ದ ಡಿವಿ ಸದಾನಂದ ಗೌಡ, ಕೋರ್ ಕಮಿಟಿ ಸಭೆಯಲ್ಲಿ ಉಲ್ಟಾ ಹೊಡೆದಿರುವುದು. ವಿಜಯೇಂದ್ರ ಅವರನ್ನು ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿರುವುದು. ಅಧಿಕೃತ ಅಧ್ಯಕ್ಷರು ಈಗಿನ ಚುನಾವಣೆಯ ಪ್ರಕ್ರಿಯೆಯ ನಂತರ ಆಗಬೇಕಾಗುತ್ತದೆ. ತಮ್ಮ ಹುದ್ದೆಯನ್ನು ನಿರ್ವಹಣೆ ಮಾಡುವಂತಹ ಸಂದರ್ಭಗಳಲ್ಲಿ, ಅತೃಪ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ಅವರು ಯಶಸ್ವಿಯಾಗಿಲ್ಲ ಎಂದಿರುವ ಸದಾನಂದ ಗೌಡ ʻವಿಜಯೇಂದ್ರ ಅಧ್ಯಕ್ಷರೇ ಅಲ್ಲʼ ಎಂಬಂತೆ ಮಾತನಾಡಿದ್ದಾರೆ.
ಇನ್ನು ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಸಿಟಿ ರವಿ ಸೇರಿದಂತೆ ಕೆಲವು ನಾಯಕರು ವಿಜಯೇಂದ್ರ ವಿರುದ್ಧ ಸ್ವಲ್ಪಸ್ವಲ್ಪವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಿನ್ನಮತೀಯರನ್ನು ಕರೆದು ಮಾತನಾಡಿಸುವುದಕ್ಕೆ ಅವಕಾಶ ಇದ್ದರೂ, ಕೆಲವು ಹಿರಿಯ ನಾಯಕರು ಮಾತುಕತೆಗೆ ವೇದಿಕೆ ಸಿದ್ಧಪಡಿಸಿದರೂ ವಿಜಯೇಂದ್ರ ಬಳಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ. ವಿಶೇಷವಾಗಿ ರಮೇಶ್ ಜಾರಕಿಹೊಳಿ ವಿಷಯ ಪ್ರಸ್ತಾಪಿಸಿರುವ ನಾಯಕರು ʻರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದರೆ, ಯತ್ನಾಳ್ ಬಣ ಇಷ್ಟು ಸ್ಟ್ರಾಂಗ್ ಆಗುತ್ತಿರಲಿಲ್ಲ. ವಿಜಯೇಂದ್ರ ಮಾತನಾಡುವ ಪ್ರಯತ್ನವನ್ನೇ ಮಾಡಲಲಿಲ್ಲʼ ಎಂದಿದ್ದಾರೆ.
ಇನ್ನು ಸದಾನಂದ ಗೌಡ ಆಂತರಿಕವಾಗಿ ಇಷ್ಟು ದೊಡ್ಡ ಕಚ್ಚಾಟಗಳಿವೆ. ಆಂತರಿಕ ಕಚ್ಚಾಟದಲ್ಲಿ ತೊಡಗಿರುವವರು ಸಂಘಟನಾ ಪರ್ವದಲ್ಲಿ ಭಾಗವಹಿಸಿಲ್ಲ. ವ್ಯಕ್ತಿಯ ಬದಲಾವಣೆ ಚರ್ಚೆಯ ದಿಕ್ಕನ್ನೇ ಬದಲಾವಣೆ ಮಾಡಲ್ಲ. ವ್ಯಕ್ತಿಗಳಿಗೆ ಮೋಟಿವೇಷನ್ ಮಾಡಬೇಕು ಎಂದದ್ದಲ್ಲದೇ ಸಹಮತ ಇರದಿದ್ದರೆ ಪಕ್ಷದಲ್ಲಿ ಚುನಾವಣೆ ನಡೆಯುತ್ತೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣೆ ಬೇಡ ಅಂದರೆ ಅವಿರೋಧ ಆಯ್ಕೆ ಆಗುತ್ತೆ’ ಎನ್ನುವ ಮೂಲಕ ಅತೃಪ್ತರ ಮನವೊಲಿಕೆ ಆಗದಿದ್ದರೆ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತದೆ ಎಂದು ಹೇಳಿದ್ದಾರೆ.
ಇನ್ನು ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳೆಂದರೆ.. ಬಿಜೆಪಿಯಲ್ಲಿ ಬಿಜೆಪಿ ನಿಷ್ಠ ಬಣ, ವಿಜಯೇಂದ್ರ ಬಣ ಹಾಗೂ ವಿಜಯೇಂದ್ರ ವಿರೋಧಿ ಬಣದ ವಿಷಯ. ಇದೆಲ್ಲದರ ಮಧ್ಯೆ ಪಕ್ಷದಲ್ಲಿರುವ ಶಾಸಕರು, ಪದಾಧಿಕಾರಿಗಳು ವಿಜಯೇಂದ್ರ ಪರ ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಡಿವಿ ಸದಾನಂದ ಗೌಡ ಇದ್ದಕ್ಕಿದ್ದಂತೆ ಉಲ್ಟಾ ಹೊಡೆದು ಡಾ.ಸಿಎನ್ ಅಶ್ವತ್ಥ್ ನಾರಾಯಣ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವಲ್ಲಿ ಒಲವು ತೋರಿಸಿದ್ದಾರೆ. ಸುನಿಲ್ ಕುಮಾರ್ ರಾಜ್ಯಾಧ್ಯಕ್ಷ ಹಾಗೂ ಯತ್ನಾಳ್ ಶಾಸಕಾಂಗ ಪಕ್ಷದ ನಾಯಕನಾಗಬೇಕು ಎಂಬ ವಾದವೂ ಕೇಳಿಬಂದಿದೆ. ವಿಧಾನಪರಿಷತ್‌ನಲ್ಲಿ ದಲಿತ ಸಮುದಾಯದವರಿಗೆ ವಿಪಕ್ಷ ನಾಯಕ ಸ್ಥಾನ ನೀಡಿದ್ದೇವೆ. ವಿಧಾನಸಭೆಯಲ್ಲಿ ಒಕ್ಕಲಿಗರನ್ನು ವಿಪಕ್ಷ ನಾಯಕ ಮಾಡಿದ್ದೇವೆ. ಸಂಘಟನೆಯಲ್ಲಿ ವೀರಶೈವ- ಲಿಂಗಾಯತ ಸಮುದಾಯವನ್ನೇ ಮುಂದುವರಿಸುವುದು ಸೂಕ್ತ ಎಂದು ವಿಜಯೇಂದ್ರ ಪರ ಬ್ಯಾಟಿಂಗ್ ಆಗಿದೆ.