ರಾಜ್ಯ ಸರ್ಕಾರದಲ್ಲಿ ಸಹಕಾರಿ ಖಾತೆ ಸಚಿವರಾಗಿರುವ ಕೆಎನ್ ರಾಜಣ್ಣ ಅವರೇನೋ ಇದ್ದಕ್ಕಿದ್ದಂತೆ 48 ಶಾಸಕರ ಸಿಡಿ, ಪಕ್ಷದ ನಾಯಕರಿಂದಲೇ ಹನಿ ಟ್ರ್ಯಾಪ್ ಗ್ಯಾಂಗ್ ಆಕ್ಟಿವ್ ಆಗಿದೆ. ನನಗೂ ಹನಿ ಟ್ರ್ಯಾಪ್ ಮಾಡಿದ್ದಾರೆ. ಸಂಕಷ್ಟಕ್ಕೊಳಗಾದವರು ಕಾಂಗ್ರೆಸ್ಸಿನಲ್ಲೂ ಇದ್ದಾರೆ.. ಬಿಜೆಪಿಯಲ್ಲೂ ಇದ್ದಾರೆ. ಜೆಡಿಎಸ್ಸಿನಲ್ಲೂ ಇದ್ದಾರೆ ಎಂದೆಲ್ಲ ಹೇಳಿದ್ದರು. ಈಗ ನೋಡಿದರೆ.. ತಮ್ಮ ವಿರುದ್ಧದ ಹನಿಟ್ರ್ಯಾಪ್ ಪ್ರಯತ್ನದ ಬಗ್ಗೆ ಪೊಲೀಸ್ ದೂರು ನೀಡಿ ಉನ್ನತ ಮಟ್ಟದ ತನಿಖೆ ಆಗ್ರಹಿಸಿದ್ದ ಕೆ.ಎನ್.ರಾಜಣ್ಣ ನಿಲುವು ಬದಲಿಸಿದ್ದಾರೆ. ಪೊಲೀಸರಿಗೆ ದೂರು ನೀಡುವ ಬದಲು ಗೃಹ ಸಚಿವರಿಗೆ ಮನವಿ ಪತ್ರವನ್ನಷ್ಟೇ ಸಲ್ಲಿಸಿದ್ದಾರೆ.
ಈಗ ಬಕರಾ ಆದವರು ಯಾರು..?
ಬಸನಗೌಡ ಪಾಟೀಲ ಯತ್ನಾಳ್ : ವಿಧಾನಸಭೆಯಲ್ಲಿ ಈ ಪ್ರಶ್ನೆ ಎತ್ತಿ, 48 ಸಿಡಿ ಇವೆ ಎಂದು ರಾಜಣ್ಣನವರಿಂದ ಹೇಳಿಸಿದ್ದೇ ಯತ್ನಾಳ್. ಅವರು ಈಗ ಬಕರಾ ನಂ.1 ಎನ್ನಬಹುದು.
ಅದಾದ ನಂತರ ಮೊದಲ ದಿನ ಒಂದಿಷ್ಟು ಸೈಲೆಂಟ್ ಆಗಿದ್ದ ಬಿಜೆಪಿಯವರು, 2ನೇ ದಿನ ರೊಚ್ಚಿಗೆದ್ದರು. ಅದಕ್ಕೆ ಸುನಿಲ್ ಕುಮಾರ್, ಯತ್ನಾಳ್ ಬಣದವರು ವಿವಾದದಲ್ಲಿ ಮಾಡಬೇಕಿದ್ದ ಕೆಲಸ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದೂ ಕಾರಣವಾಗಿತ್ತು ಎನ್ನಿ. ಆಗ 18 ಶಾಸಕರು ಸಸ್ಪೆಂಡ್ ಆದವರು. ಹಾಗೆ ಸಸ್ಪೆಂಡ್ ಆದ 18 ಶಾಸಕರು ಬಕರಾ ನಂ.2 ಎನ್ನೋಣವೇ..
ರಾಜ್ಯ ಕಾಂಗ್ರೆಸ್ಸಿನಲ್ಲಿ ಏನಾಗ್ತಾ ಇದೆ.. ಇದು ಒಳ್ಳೆಯದಲ್ಲ ಎಂದು ಹೇಳಿಕೆ ಕೊಟ್ಟು ಸಿಡಿ ಬೆಂಕಿಗೆ ತುಪ್ಪ ಸುರಿದ ಕಾಂಗ್ರೆಸ್ಸಿನ ರಾಜಕಾರಣಿಗಳಲ್ಲಿ ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಮೊದಲಾದವರೂ ಇದ್ದಾರ. ಇವರನ್ನು ಬಕರಾ ನಂ.3 ಎನ್ನಬಹುದಾದರೂ.. ಹಾಗೆ ಹೇಳುವುದಕ್ಕಾಗಲ್ಲ.
ಅದಾದ ಮೇಲೆ.. ಮೀಡಿಯಾಗಳಲ್ಲಿ ಹನಿ ಟ್ರ್ಯಾಪ್ ಮಾಡಿದ್ದ ಲೇಡಿ.. ಆಕೆಯ ಬಣ್ಣ.. ಮಾಡೆಲ್.. ವೃತ್ತಿ.. ಎಲ್ಲವೂ ಕಥೆಗಳಾಗಿ ಬಂದವು. ಈಗ ಮೀಡಿಯಾಗಳು ಹೇಳಿದ್ದ ಆ ಎಲ್ಲ ಕಥೆಗಳೂ ಸುಳ್ಳಾ.. ಡೌಟೇ ಇಲ್ಲ.. ರಾಜ್ಯದ ಎಲ್ಲ ದಿನಪತ್ರಿಕೆ, ಟಿವಿ ನ್ಯೂಸ್ ಚಾನೆಲ್ಲುಗಳು ಬಕರಾಗಳೇ ಆಗಿಬಿಟ್ಟವು.
ಇನ್ನು ತಣ್ಣಗೆ ಇದ್ದು, ಮಾಧ್ಯಮಗಳನ್ನು ಬಿಸಿ ಮಾಡಿಸಿದವರೆಂದರೆ.. ಅದು ಡಿಕೆ ಶಿವಕುಮಾರ್. ನಿಜ ಹೇಳಬೇಕೆಂದರೆ ಇವರು ಬಕರಾ ಆಗಲಿಲ್ಲ. ಡಿಕೆ ಅವರಿಗೆ ಮೊದಲೇ ಗೊತ್ತಿತ್ತೇನೋ.. ಎನ್ನುವಂತೆ ಕಂಪ್ಲೇಂಟ್ ಕೊಡಲಿ ಬಿಡ್ರಿ ಅಂದು ಸುಮ್ಮನೆ ಕುಳಿತುಬಿಟ್ಟರು. ಹೈಕಮಾಂಡ್ ಟೆನ್ಷನ್ ಆಯ್ತಂತೆ ಅನ್ನೋದು ಮಾಧ್ಯಮಗಳಲ್ಲಿ ಚರ್ಚೆಯಾಯಿತಷ್ಟೇ.
ಈಗ ಕೆಎನ್ ರಾಜಣ್ಣ ಕ್ಷಮೆ ಕೇಳ್ತಿದ್ದಾರೆ. ಅಯ್ಯಯ್ಯೋ.. ತಪ್ಪಾಗಿ ಹೋಯ್ತು.. ಅನ್ನೋ ಅರ್ಥದಲ್ಲಿ ಮಾತನಾಡ್ತಿದ್ದಾರೆ. ದುರಂತ ಅಂದ್ರೆ ಕೆಎನ್ ರಾಜಣ್ಣ ಅವರ ಈ ಹೇಳಿಕೆ ಹೊರಬಿದ್ದಿದ್ದು ವಿಧಾನಸಭೆಯಲ್ಲಿ. ಅಲ್ಲಿ ಹೇಳುವುದೆಲ್ಲ ದಾಖಲೆಯಾಗುತ್ತದೆ. ಫೈಲ್ ಆಗುತ್ತದೆ. ಒಂದೊಂದು ದಿನಕ್ಕೂ ಲಕ್ಷ ಲಕ್ಷ ಖರ್ಚಾಗುತ್ತದೆ. ಹೀಗಾಗಿ.. ಕೆಎನ್ ರಾಜಣ್ಣ ಬಕರಾ ಮಾಡಿದ್ದು ಒಬ್ಬಿಬ್ಬರನ್ನಲ್ಲ.. ರಾಜ್ಯದ ಕೋಟ್ಯಂತರ ಜನತೆಯನ್ನ. ಏಕೆಂದರೆ ಇಷ್ಟು ಸುಳ್ಳು ಹೇಳೋದಕ್ಕೆ ಅವರು ಬಳಸಿಕೊಂಡಿದ್ದು ಜನರ ತೆರಿಗೆ ದುಡ್ಡು ಖರ್ಚು ಮಾಡಿದ ವಿಧಾನಸಭೆಯ ಕಲಾಪವನ್ನ. ಅನುಮಾನವೇ ಇಲ್ಲ.. ಈ ಬಾರಿ ಅಂತಿಮವಾಗಿ ಬಕರಾ ಆದವರು ಕರ್ನಾಟಕದ ಜನ. ಬಕರಾ ಆಗುವುದು ಕನ್ನಡಿಗರಿಗೆ ಹೊಸದೇನಲ್ಲ.
ಅಂದಹಾಗೆ ಕೆಎನ್ ರಾಜಣ್ಣನವರ ಸಿಡಿ ಹೇಳಿಕೆ ಉದ್ದೇಶ ಈಡೇರಿದೆಯಂತೆ.
ಸಚಿವ ಸ್ಥಾನದಲ್ಲಿದ್ದು ಸದನದಲ್ಲಿ ಇಂಥ ಗಂಭೀರ ಆರೋಪ ಮಾಡಿ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಅಸ್ತ್ರ ನೀಡಿದ ರಾಜಣ್ಣ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೆಂಡಾಮಂಡಲಗೊಂಡು ಈ ಪ್ರಕರಣದ ಸಾರಗುಂದಿಸುವಂತೆ ಸ್ಪಷ್ಟ ತಾಕೀತು ಮಾಡಿದ್ಯಂತೆ.
ಆದರೆ ಅಷ್ಟು ಹೊತ್ತಿಗೆ ಇಡೀ ಹನಿಟ್ರ್ಯಾಪ್ ಆರೋಪ ಎಂಬ ಬ್ರಹ್ಮಾಸ್ತ್ರ ಯಾರ ವಿರುದ್ಧ ಪ್ರಯೋಗಿಸಲಾಗಿತ್ತೋ ಅವರಿಗೆ ನಾಟಿದೆ ಎಂಬುದು ಗೊತ್ತಾಗಿದ್ಯಂತೆ. ಇನ್ನೂ ಪ್ರಕರಣ ಮುಂದುವರೆಸಿದರೆ ತಮಗೆ ಬೂಮ್ ರಾಂಗ್ ಆಗಬಹುದು ಅನ್ನೋ ಅನುಮಾನ ಇದ್ಯಂತೆ. ಇದೆಲ್ಲ ಕಾರಣಗಳಿಗಾಗಿ ಕೆಎನ್ ರಾಜಣ್ಣ ಉಲ್ಟಾ ಹೊಡೆದಿದ್ದಾರೆ ಎನ್ನುವುದು ಸದ್ಯದ ಮಾಹಿತಿ.