100 ಕ್ಷೇತ್ರ ನಮಗೆ ಕೊಡಿಸಿ. ಗೆಲ್ಲಿಸ್ತೇವೆ. ಒಟ್ಟಿನಲ್ಲಿ ವಿಜಯೇಂದ್ರ ಸಿಎಂ ಆಗಬಾರದು, ಅಷ್ಟೆ. ಇಂಥಾದ್ದೊಂದು ಬೇಡಿಕೆ ಇಟ್ಟುಕೊಂಡು ಯತ್ನಾಳ್ ಪಡೆ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕುಮಾರಸ್ವಾಮಿ ಅವರ ಬಳಿ ಹೋಗಿದೆ. ಅಚ್ಚರಿಯೇ ಎನಿಸಿದರೂ ಇದು ನಡೆದಿರುವುದು ಸತ್ಯ ಎನ್ನುತ್ತಿವೆ ದೆಹಲಿ ಮೂಲಗಳು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇಬ್ಬರನ್ನೂ ಅಡ್ಜಸ್ಟ್ʻಮೆಂಟ್ ಗಿರಾಕಿಗಳು ಎಂದು ಟೀಕೆ ಮಾಡುವ ಯತ್ನಾಳ್ ಪಡೆಯ ನಾಯಕರು, ಬಿಜೆಪಿಯೊಳಗಿನ ಪ್ರಾಬ್ಲಂ ಇತ್ಯರ್ಥಕ್ಕೆ ಜೆಡಿಎಸ್ ನಾಯಕರ ಬಳಿ ಹೋಗಿರುವುದು ಅಚ್ಚರಿ ಹುಟ್ಟಿಸಿದೆ.
100 ಕ್ಷೇತ್ರಗಳ ಹೊಣೆ ಕೇಳುವುದಕ್ಕೆ ಪ್ಲಾನ್ ಮಾಡಿರುವ ಯತ್ನಾಳ್ ಬಣ, ಹೈಕಮಾಂಡ್ ಜೊತೆ ಮಾತುಕತೆಗೆ ಕುಮಾರಸ್ವಾಮಿ ಬೆಂಬಲ ಕೇಳಿದೆ. ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಣ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೂರು ಕ್ಷೇತ್ರಗಳ ಸಂಪೂರ್ಣ ಜವಾಬ್ದಾರಿ ತಮಗೆ ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಡಲು ಚಿಂತನೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನೆರವಾಗುತ್ತೇವೆ ಎಂಬ ಭರವಸೆ ನೀಡುವ ಉದ್ದೇಶ ಒಂದು ಕಡೆಯಾದರೆ, ವಿಜಯೇಂದ್ರ ಮುಖ್ಯಮಂತ್ರಿ ಗಾದಿಗೆ ಬರದಂತೆ ತಡೆಯ ಬೇಕೆಂಬುದು ಇದರ ಹಿಂದಿನ 2ನೇ ಉದ್ದೇಶವೆನ್ನಲಾಗಿದೆ.
ನೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ತಮಗೆ ಬಿಡಬೇಕು. ಜತೆಗೆ ಆ ಕ್ಷೇತ್ರಗಳ ಖರ್ಚು ವೆಚ್ಚವನ್ನೂ ತಾವೇ ಭರಿಸುತ್ತೇವೆ ಎನ್ನುತ್ತಿರುವ ಯತ್ನಾಳ್ ಪಡೆ, ಅದಕ್ಕಾಗಿ ಹೈಕಮಾಂಡ್ ಜೊತೆ ಮಾತುಕತೆಗೆ ನೆರವು ನೀಡಿ ಎಂದು ಕುಮಾರಸ್ವಾಮಿ ಬಳಿ ಕೇಳಿಕೊಂಡಿದ್ದಾರಂತೆ. ನಾಲ್ಕು ದಿನಗಳ ಭೇಟಿಗಾಗಿ ದೆಹಲಿಗೆ ತೆರಳಿದ್ದ ಯತ್ನಾಳ ಬಣದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತಿತರರು ಗುರುವಾರ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಡೆಸಿದ ಉಪಾಹಾರ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿದೆ. ಇದಕ್ಕೆ ತಾತ್ವಿಕವಾಗಿ ಒಪ್ಪಿ ಕೊಂಡಿರುವ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಘಟಕದ ಪ್ರಭಾವಿ ನಾಯಕ ಅಮಿತ್ ಶಾರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
ಚುನಾವಣೆ ಯಾವುದೇ ಸಮಯದಲ್ಲಿ ಎದುರಾದರೂ ತಾವು ಹೇಳಿದ ನೂರು ಕ್ಷೇತ್ರಗಳ ಜವಾಬ್ದಾರಿ ನಮಗೆ ನೀಡಿದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನೆರವಾಗುತ್ತೇವೆ. ಆ ಬಗ್ಗೆ ಅನುಮಾನ ಬೇಡ. ಯಾವುದೇ ಕಾರಣಕ್ಕೂ ವಿಜಯೇಂದ್ರ ಮುಖ್ಯಮಂತ್ರಿಯಾಗಲು ಅವಕಾಶ ನೀಡುವುದು ಬೇಡ. ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯಲ್ಲಿ ಶಾಸಕರ ಸಂಖ್ಯಾ ಬಲವೇ ಪ್ರಮುಖ ಪಾತ್ರ ವಹಿಸುವುದರಿಂದ ಆ ಸಂಖ್ಯಾ ಬಲವನ್ನು ನಾವು ತಂದು ಕೊಡುತ್ತೇವೆ. ನಾವು ಹೇಳಿದ ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಸೂಚಿಸಿದವರಿಗೇ ಟಿಕೆಟ್ ನೀಡಬೇಕು. ಅವರ ಖರ್ಚು-ವೆಚ್ಚದ ಹೊಣೆಯನ್ನು ನಾವೇ ಹೊರುತ್ತೇವೆ. ಗೆಲ್ಲಿಸಿಕೊಂಡೂ ಬರುತ್ತೇವೆ. ಈ ಬಗ್ಗೆ ವರಿಷ್ಠರಲ್ಲಿ ಪ್ರಸ್ತಾಪಿಸಿ ಎಂದು ಜಾರಕಿಹೊಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಅಚ್ಚರಿ ಎಂದರೆ ಇದೇ ಯತ್ನಾಳ್ ಪಡೆಯ ನಾಯಕರು ಬಹಿರಂಗವಾಗಿ ಯಡಿಯೂರಪ್ಪ, ವಿಜಯೇಂದ್ರ, ಆರ್. ಅಶೋಕ್ ಅವರನ್ನು ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಎಂದು ಟೀಕೆ ಮಾಡುತ್ತಾರೆ. ಹೀಗೆ ಟೀಕೆ ಮಾಡುವ ನಾಯಕರು, ಬಿಜೆಪಿಯೊಳಗಿನ ಸಮಸ್ಯೆ ಇತ್ಯರ್ಥಕ್ಕೆ ಜೆಡಿಎಸ್ ನಾಯಕರ ಮೊರೆ ಹೋಗಿದ್ದೇಕೆ ಎಂದು ಪ್ರಶ್ನೆ ಮಾಡುವಂತಾಗಿದೆ. ಅಷ್ಟೇ ಅಲ್ಲ, ವಿಜಯೇಂದ್ರ ಬಳಿ ದುಡ್ಡಿದೆ. ಭ್ರಷ್ಟ ಎಂದು ಓಪನ್ ಆಗಿ ಹೇಳಿಕೆ ಕೊಡುವ ಯತ್ನಾಳ್ ಪಡೆ, 100 ಕ್ಷೇತ್ರಗಳ ಖರ್ಚು ವೆಚ್ಚವನ್ನು ಯಾವ ಹಣದಲ್ಲಿ ನಿಭಾಯಿಸುತ್ತಾರೆ ಎಂದು ವಿಜಯೇಂದ್ರ ಬಣದವರು ಪ್ರಶ್ನಿಸುತ್ತಿದ್ದಾರೆ.