ವಿಜಯೇಂದ್ರ ವಿರುದ್ಧ ರಾಜ್ಯ ಬಿಜೆಪಿಯ ಒಂದು ಬಣವೇ ತಿರುಗಿಬಿದ್ದಿದೆ. ವಿಜಯೇಂದ್ರ ಅವರು ಯಡಿಯೂರಪ್ಪ ಮಗ ಎಂಬ ಕಾರಣಕ್ಕೆ ತಿರುಗಿಬಿದ್ದಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ಸತ್ಯವಾದರೂ, ಈ ಪ್ರಮಾಣದ ಬಂಡಾಯದ ಹಾದಿಯಲ್ಲಿ ವಿಜಯೇಂದ್ರ ಅವರು ಮಾಡಿಕೊಂಡ ಪ್ರಮಾದಗಳೂ ಇವೆ. ಎರಡೂ ಕೈಗಳು ಸೇರಿದರೆ ಚಪ್ಪಾಳೆ ಸದ್ದು ಕೇಳುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಅರವಿಂದ ಲಿಂಬಾವಳಿ, ಜಿಎಂ ಸಿದ್ದೇಶ್ವರ.. ಇತ್ಯಾದಿಗಳ ಸಾಲಿನಲ್ಲೀಗ ಡಾ.ಕೆ.ಸುಧಾಕರ್ ಕೂಡಾ ಸೇರ್ಪಡೆಯಾಗಿದ್ದಾರೆ. ಇನ್ನು ಒಳಗೊಳಗೆ ವಿಜಯೇಂದ್ರ ವಿರುದ್ಧ ಡಿವಿ ಸದಾನಂದ ಗೌಡ, ಸಿಟಿ ರವಿ, ಪ್ರತಾಪ್ ಸಿಂಹ.. ಅಷ್ಟೇ ಏಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿಧಾನಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೂಡಾ ಇರುವುದು ಈಗ ರಹಸ್ಯವೇನಲ್ಲ. ಇದರ ನಡುವೆ 23 ಜಿಲ್ಲಾ ಬಿಜೆಪಿ ಘಟಕಗಳಿಗೆ ಅಧ್ಯಕ್ಷರ ನೇಮಕವಾಗಿದೆ. ಈಗ ಸುಧಾಕರ್ ಕೂಡಾ ತಿರುಗಿಬಿದ್ದಿದ್ದಾರೆ.
ಸುಧಾಕರ್ ಅವರ ಮಾತುಗಳನ್ನು ಕೇಳುತ್ತಿದ್ದರೆ ವಿಜಯೇಂದ್ರ ಎಡವಿರುವುದು ಎಲ್ಲಿ ಎಂಬ ಸೂಚನೆಗಳಂತೂ ಸಿಗುತ್ತವೆ. ‘ವಿಜಯೇಂದ್ರ ಅಡ್ಡದಾರಿ ಮೂಲಕ ರಾಜ್ಯಾಧ್ಯಕ್ಷರಾಗಲು ಆಂತರಿಕ ಪ್ರಜಾಪ್ರಭುತ್ವ ಬಲಿಕೊಟ್ಟು ಜಿಲ್ಲಾಧ್ಯಕ್ಷರ ನೇಮಕ ಕೈಗೊಳ್ಳುತ್ತಿದ್ದಾರೆ. ಹಿರಿಯ ನಾಯಕರನ್ನು ಸಮಾಧಿ ಕಟ್ಟಲು ಹೊರಟಿದ್ದಾರೆ. ವಿಜಯೇಂದ್ರ ಅವರ ಅಹಂಕಾರ, ದರ್ಪ ಮಿತಿ ಮೀರಿದೆ ಏಕಚಕ್ರಾಧಿಪತಿ ಎಂಬಂತೆ ವರ್ತಿಸುತ್ತಿದ್ದಾರೆ. ಪಕ್ಷವೇನು ಅವರ ಸ್ವಂತ ಆಸ್ತಿಯೇ? ಅವರ ಧೋರಣೆ ಹಾಗೂ ಅಹಂಕಾರಕ್ಕೆ ನನ್ನ ಧಿಕ್ಕಾರ’ ಎಂದಿದ್ದಾರೆ ಸುಧಾಕರ್.
ಶೀಘ್ರದಲ್ಲೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿ ವಿಜಯೇಂದ್ರ ಅವರ ವ್ಯವಹಾರ, ರಾಜಕಾರಣ ಎಲ್ಲವನ್ನೂ ಬಿಚ್ಚಿಡುತ್ತೇನೆ. ವರಿಷ್ಠರು ಅವರ ಧೋರಣೆಯನ್ನಾದರೂ ಬದಲಾ ಯಿಸಲಿ, ಅವರನ್ನಾದರೂ ಬದಲಾಯಿಸಲಿ ಎಂದಿರುವ ಸುಧಾಕರ್ ಅವರನ್ನು ಬಿಜೆಪಿಯಲ್ಲಿರುವ ಕೆಲವು ಸಂಘನಿಷ್ಠ ನಾಯಕರು ಒಪ್ಪುವುದಿಲ್ಲ. ಯಡಿಯೂರಪ್ಪ ನಿಷ್ಠರೂ ಅಷ್ಟಕ್ಕಷ್ಟೇ. ಆದರೆ ಇಷ್ಟೆಲ್ಲ ನಾಯಕರ ಬಂಡಾಯದಲ್ಲಿ ವಿಜಯೇಂದ್ರ ತಪ್ಪೇ ಇಲ್ಲವಾ..?
ವಿಜಯೇಂದ್ರ ಮಾಡಿರುವ ತಪ್ಪುಗಳೇನು..?
ಪಕ್ಷದ ಯಾವುದೋ ನಿರ್ಧಾರದ ಬಗ್ಗೆ ಅಸಮಾಧಾನ ಇದ್ದವರನ್ನು ಮಾತನಾಡಿಸದೇ ಇರುವುದು. ಆಕ್ಷೇಪ, ಟೀಕೆಗಳನ್ನು ಕಿವಿಗೆ ಹಾಕಿಕೊಳ್ಳದೇ ಇರುವುದು. ತಾನು ಹೇಳಿದ್ದೇ ಸರಿ ಎಂಬಂತೆ ವರ್ತಿಸುವುದು. ಒಮ್ಮೆ ನಿರ್ಧಾರ ತೆಗೆದುಕೊಂಡ ಮೇಲೆ, ವಿರೋಧಗಳು ಕಣ್ಣಿಗೆ ಕಂಡರೂ ಬದಲಿಸದೇ ಇರುವುದು. ಸಿಟ್ಟುಗೊಂಡ ನಾಯಕರನ್ನು ಸಮಾಧಾನಿಸುವ ಕನಿಷ್ಠ ಪ್ರಯತ್ನವನ್ನೂ ಮಾಡದೇ ಇರುವುದು. ಬೇರೆ ನಾಯಕರು ಮಾತುಕತೆಗೆ ವ್ಯವಸ್ಥೆ ಮಾಡಿದರೂ ಪ್ರತಿಕ್ರಿಯಿಸದೇ ಇರುವುದು. ಫೋನ್ ಮಾಡಿದರೆ ಫೋನ್ ತೆಗೆಯದೇ ಇರುವುದು. ಕೆಜೆಪಿಯಲ್ಲಿದ್ದವರನ್ನೇ ಬಿಜೆಪಿಯಲ್ಲಿ ಅನಿವಾರ್ಯ ಎಂಬಂತೆ ಬಿಂಬಿಸುವ ಪ್ರಯತ್ನ ಇದಿಷ್ಟೂ ವಿಜಯೇಂದ್ರ ಮಾಡಿರುವ ತಪ್ಪುಗಳು.
ಈ ಹಾದಿಯಲ್ಲಿ ರಮೇಶ್ ಜಾರಕಿಹೊಳಿ ಜೊತೆ ಸಂಧಾನಕ್ಕೆ ಬಿಜೆಪಿಯ ನಾಯಕರೊಬ್ಬರು ಮುಂದಾದಾಗ ವಿಜಯೇಂದ್ರ ಅದನ್ನು ಬೇಕೆಂದೇ ತಪ್ಪಿಸಿಕೊಂಡರು. ರಮೇಶ್, ಯತ್ನಾಳ್ ಬಣಕ್ಕೆ ಹೋಗಿ ಕುಳಿತರು. ಇದರಿಂದ ಯತ್ನಾಳ್ ಬಣ ಗಟ್ಟಿಯಾಯಿತಷ್ಟೇ. ಇನ್ನು ಕುಮಾರ್ ಬಂಗಾರಪ್ಪ, ವಿಜಯೇಂದ್ರ ಅವರದ್ದೇ ಜಿಲ್ಲೆಯವರು. ಸಮಾಧಾನಿಸುವ ಅವಕಾಶ ಕೈಚೆಲ್ಲಿದರು. ಇನ್ನು ಯತ್ನಾಳ್ ಅವರನ್ನು ಕೂಡಾ ಯಡಿಯೂರಪ್ಪ ಮೂಲಕ ಮಾತನಾಡಿಸುವ ಪ್ರಯತ್ನಗಳು ನಡೆದವು. ಆದರೆ ಯಡಿಯೂರಪ್ಪ ಅವರನ್ನು ಆ ಸಮಯದಲ್ಲಿ ವಿಜಯೇಂದ್ರ ಅವರೇ ಕಟ್ಟಿಹಾಕಿದರು. ಇನ್ನು ಪಕ್ಷದಲ್ಲಿ ಟಿಕೆಟ್ ಸಿಗದಾಗ ಪುಟಿದೇಳುವ ಅಸಮಾಧಾನಗಳನ್ನು ಆಗಲೇ ಸರಿಪಡಿಸುವ ಪ್ರಯತ್ನ ಮಾಡಬೇಕು. ಆದರೆ ವಿಜಯೇಂದ್ರ ಆ ವಿಷಯದಲ್ಲಿ ತುಂಬಾ ಲೇಟ್ ಮಾಡಿದರು… ಈಗಲೂ ಕೂಡಾ ಕೆಲವು ಅಸಮಾಧಾನಿತ ನಾಯಕರನ್ನು ಮಾತನಾಡಿಸುವ ಗೋಜಿಗೇ ಹೋಗಿಲ್ಲ. ಹೀಗೆ ವಿಜಯೇಂದ್ರ ಮಾಡಿರುವ ತಪ್ಪುಗಳು ಎದ್ದು ಕಾಣುತ್ತಿವೆ.
ಒಟ್ಟಿನಲ್ಲಿ ಸರಿಯೋ.. ತಪ್ಪೋ.. ವಿಜಯೇಂದ್ರ ವಿರುದ್ಧ ಬಿಜೆಪಿಯಲ್ಲಿ ದೊಡ್ಡದೊಂದು ಪಡೆಯೇ ಸಿದ್ಧವಾಗಿ ನಿಂತಿದೆ.