”ಬಡವರು ಐದು ಅಡಿ ಜಾಗ ಒತ್ತುವರಿ ಮಾಡಿದರೆ ಸಾಕು ಓಡೋಡಿ ಬಂದು ಬುಲ್ಡೋಜರ್ ತೆಗೆದುಕೊಂಡು ಹೋಗಿ ಮನೆ ಒಡೆದು ಹಾಕುತ್ತೀರಿ. ಭಿಕ್ಷುಕರನ್ನೂ ಬಿಡುವುದಿಲ್ಲ. ಆದರೆ, ಪ್ರಭಾವಿಗಳು ಒತ್ತುವರಿ ಮಾಡಿದರೆ ಸುಮ್ಮನಾಗುತ್ತೀರಿ ಏಕೆ?’ ಹೈಕೋರ್ಟ್ ಕೇಳಿರುವ ಇದೊಂದು ಪ್ರಶ್ನೆ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಮನೆಯ ಕಾಂಪೌಂಡ್ ಮತ್ತು ಶೆಡ್ ನೆಲಸಮವಾಗುವುದಕ್ಕೆ ಕಾರಣವಾಗುತ್ತಾ.. ಎಂಬ ಪ್ರಶ್ನೆ ಉದ್ಭವವಾಗುವಂತೆ ಮಾಡಿದೆ.
ಏಕೆಂದರೆ ಹೈಕೋರ್ಟ್ ʻʻಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮತ್ತವರ ಕುಟುಂಬ ಸದಸ್ಯರು ಮಾಡಿದ್ದಾರೆನ್ನಲಾದ ಜಮೀನು ಒತ್ತುವರಿ ಸತ್ಯವಾಗಿದ್ದರೆ ವಾಪಸು ಪಡೆಯಿರಿ. ಇಲ್ಲವಾದರೆ ಬಿಟ್ಟುಬಿಡಿʼʼ ಎಂದೂ ಹೇಳಿದೆ.
ಹೈಕೋರ್ಟ್ ಚಾಟಿಯ ಬಳಿಕ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಇತರರು ಮಾಡಿಕೊಂಡಿರುವ ಸರ್ಕಾರಿ ಭೂಮಿ ಒತ್ತುವರಿ ಸರ್ವೆ ಕಾರ್ಯ ವೇಗ ಪಡೆದುಕೊಂಡಿದೆ. ಈ ವೇಳೆ ಕುಮಾರಸ್ವಾಮಿ ಒತ್ತುವರಿ ಮಾಡಿಕೊಂಡಿರುವ 5 ಎಕರೆ 25 ಗುಂಟೆ ಜಾಗವೂ ಸೇರಿ ಹಲವು ಸರ್ವೆ ನಂಬರ್‌ಗಳಲ್ಲಿ ಒತ್ತುವರಿ ಗುರುತಿಸಿ ಕಬ್ಬಿಣದ ಸರಳನ್ನು ನೆಟ್ಟು ಕೆಂಪು ಬಟ್ಟೆ ಕಟ್ಟಿ ಗುರುತು ಮಾಡಲಾಗಿದೆ. ಇದೇ ವೇಳೆ ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಕುಮಾರಸ್ವಾಮಿ ಅವರ ತೋಟದ ಮನೆಯ ಕಾಂಪೌಂಡ್, ಶೆಡ್‌ಗಳು ಒತ್ತುವರಿ ಜಾಗದಲ್ಲಿವೆ. ಜತೆಗೆ ಒತ್ತುವರಿ ಜಾಗದಲ್ಲಿ ಅಡಕೆ ತೆಂಗು ಬೆಳೆಯಲಾಗಿದೆ. ಇದೀಗ ಕಾಂಪೌಂಡ್, ಶೆಡ್‌ಗೆ ನೆಲಸಮ ಭೀತಿ ಎದುರಾಗಿದೆ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು, ಇತರೆ ಒತ್ತುವರಿದಾರರಿಗೆ ನೋಟಿಸ್ ಜಾರಿಯಾಗಲಿದೆ. ಅವರೆಲ್ಲರೂ 7 ದಿನದೊಳಗೆ ಉತ್ತರ ನೀಡದಿದ್ದರೆ ಅವುಗಳು ನೆಲಸಮವಾಗಲಿವೆ.
ಕುಮಾರಸ್ವಾಮಿ ಒತ್ತುವರಿ ಮಾಡಿಕೊಂಡಿದ್ದಾರಾ..?
ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳ ತಂಡ ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 7, 8, 9, 16/2 ಹಾಗೂ 79ರಲ್ಲಿ ಆಗಿರುವ ಒಟ್ಟು 11 ಎಕರೆ 23 ಗುಂಟೆ ಒತ್ತುವರಿ ಜಾಗವನ್ನು ಗುರುತಿಸಿದೆ. ಸರ್ವೆ ನಂಬರ್ 8 ಮತ್ತು 9ರ ಜಮೀನಿನಲ್ಲಿ ಕುಮಾರಸ್ವಾಮಿ ಅವರ ಮನೆ ಇದೆ. ಆ ಮನೆಯ ಪ್ರದೇಶದಲ್ಲಿರುವ ಕಾಂಪೌಂಡ್ ಮತ್ತು ಶೆಡ್ ಎರಡೂ ಕೂಡಾ ಒತ್ತುವರಿ ಆಗಿವೆ ಎಂದು ಸರ್ವೆಯಲ್ಲಿ ಅಧಿಕಾರಿಗಳು ಮಾರ್ಕ್ ಮಾಡಿದ್ದಾರೆ. . ಉಳಿದ ಜಾಗದಲ್ಲಿ ಅಡಕೆ ಮತ್ತು ತೆಂಗು ಬೆಳೆಯಲಾಗಿದೆ. ಸರ್ವೆ ನಂಬರ್ 7ರ 7/8ನೇ ಬ್ಲಾಕ್‌ನಲ್ಲಿ 7 ಗುಂಟೆ ಜಾಗ ಒತ್ತುವರಿ ಮಾಡಿರುವ ಸಯ್ಯದ್ ನೂರ್ ಅಹಮದ್ ಎಂಬುವವರು ಶೆಡ್ ನಿರ್ಮಿಸಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿಸಿ ತಮ್ಮಣ್ಣ ಮತ್ತಿತರರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎನ್ನುವುದು ಆರೋಪ. ಒಟ್ಟಾರೆಯಾಗಿ 110 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದ್ದು, ನಕಲಿ ಭೂಮಂಜೂರಾತಿ ನೀಡಿ ಖರೀದಿ ಮಾಡಲಾಗಿದೆ. ಸಮಸ್ಯೆ ಏನೆಂದರೆ ಇದನ್ನು ಪರಿಶೀಲನೆ ನಡೆಸಲು ಕೆಲವು ದಾಖಲೆಗಳೇ ಸಿಕ್ಕಿಲ್ಲ. ನಾಪತ್ತೆಯಾಗಿವೆ. ಕೇತಗಾನಹಳ್ಳಿ ಸರ್ವೆ ನಂ. 7, 8, 9, 10, 16, 17 ಮತ್ತು 79ರಲ್ಲಿ ಒತ್ತುವರಿಯಾಗಿರುವ ಜಮೀನು ತೆರವಿನ ಬಗ್ಗೆ 10 ದಿನಗಳಲ್ಲಿ ಸಂಪೂರ್ಣ ವರದಿ ಕೊಡಿ. ಅರ್ಧಂಬರ್ಧ ಕೊಡಬೇಡಿ ಎಂದು ಹೈಕೋರ್ಟ್ ಹೇಳಿದೆ.
ಕುಮಾರಸ್ವಾಮಿ ಹೇಳಿದ್ದೇನು..?
ನಾನು ನನ್ನ ಜೀವನದಲ್ಲಿ ಯಾವುದೇ ಅಕ್ರಮ ಎಸಗಿಲ್ಲ. 40 ವರ್ಷಗಳ ಹಿಂದೆ ತೆಗೆದುಕೊಂಡಿರೋ ಭೂಮಿ ಇದು. ತೆರವಿನ ವಿರುದ್ಧ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ನಡೆಸುವ. ನಾನು ಅಕ್ರಮಗಳಿಗೆ ಎಡೆ ಮಾಡಿಕೊಟ್ಟಿಲ್ಲ. ರಾಜ್ಯ ಸರ್ಕಾರದಿಂದ ದಬ್ಬಾಳಿಕೆ ಕಾರ್ಯ ನಡೀತಾ ಇದೆ. ಒತ್ತುವರಿ ತೆರವಿನ ಕುರಿತು ನನಗೆ ಯಾವುದೇ ನೊಟೀಸ್ ಕೊಟ್ಟಿಲ್ಲ. 15 ದಿನಕ್ಕೂ ಮುನ್ನವೇ ನೋಟಿಸ್ ಕೊಡಬೇಕೆಂದು ಕಾನೂನಿನಲ್ಲಿ ಇದೆ. ಇಲ್ಲಿಯವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ ಕುಮಾರಸ್ವಾಮಿ.