ವಕ್ಫ್ ಆಸ್ತಿ ವಿವಾದ ಕುರಿತಂತೆ ಮೊದಲ ಹಂತದ ಹೋರಾಟ ಮುಗಿಸಿರುವ ಯತ್ನಾಳ ಬಣದ ನಾಯಕರು ಈ ತಿಂಗಳ 27ರ ಬಳಿಕ ಎರಡನೇ ಹಂತದ ಹೋರಾಟ ಆರಂಭಿಸಲು ಮುಂದಾಗಿದ್ದಾರೆ. ಬಹುತೇಕ ಬಳ್ಳಾರಿ ಅಥವಾ ವಿಜಯನಗರ ಜಿಲ್ಲೆಗಳಿಂದ ಈ ಹೋರಾಟ ಆರಂಭಿಸುವ ಸೂಚನೆ ಇದೆ. ಪೂರಕವಾಗಿ ಆ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿ ವಿವಾದ ಸಂಬಂಧ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಿಜಯೇಂದ್ರ ನಾಯಕತ್ವದ ವಿರುದ್ಧದ ಹೋರಾಟವನ್ನು ಕೈಬಿಡದೇ ಇರಲು ತೀರ್ಮಾನಿಸಲಾಗಿದೆ.
ಯತ್ನಾಳ್ ಬಣದ ನಾಯಕರು ಕೇವಲ ಪತ್ರಿಕಾ ಹೇಳಿಕೆಗಳಿಗೆ ಸೀಮಿತವಾಗದೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮಟ್ಟದವರೆಗೆ ಕೊಂಡೊಯ್ಯಲು ಬಯಸಿದ್ದಾರಂತೆ. ಬೆಳಗಾವಿ ವಿಧಾನಮಂಡಲದ ಅಧಿವೇಶನ ಹಿನ್ನೆಲೆಯಲ್ಲಿ ಯತ್ನಾಳ್ ಬಣದ ಎಲ್ಲ ನಾಯಕರೂ ಬ್ಯುಸಿ ಇದ್ದರು. ಇದೀಗ ಈ ತಿಂಗಳ ಅಂತ್ಯದವರೆಗೆ ಪಕ್ಷದ ಸಂಘಟನಾ ಪರ್ವದ ಯಶಸ್ವಿಗೊಳಿಸುವಲ್ಲಿ ಬ್ಯುಸಿಯಾಗುತ್ತಿದ್ಧಾರೆ. ಹೊಸ ವರ್ಷದಲ್ಲಿ ರಾಜ್ಯ ಪ್ರವಾಸ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ರಾಜ್ಯ ಪ್ರವಾಸಕ್ಕೂ ಮತ್ತು ಎರಡನೇ ಹಂತದ ವಕ್ಫ್ ಆಸ್ತಿ ವಿವಾದ ಕುರಿತ ಹೋರಾಟಕ್ಕೂ ಸಂಬಂಧ ಇಲ್ಲ. ಈಗಿರುವ ಹಿರಿಯ ನಾಯಕರ ನೇತೃತ್ವದಲ್ಲಿಯೇ ಬೇರೆ ಬೇರೆ ತಂಡ ಮಾಡಿಕೊಂಡು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುವುದು, ವಿಜಯೇಂದ್ರ ಅವರಿಂದ ಕಡೆಗಣಿಸಲ್ಪಟ್ಟ, ನಿರ್ಲಕ್ಷ್ಯಕ್ಕೊಳಗಾದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸುವುದು ಹಾಗೂ ಅವರೆಲ್ಲರನ್ನೂ ಒಂದುಗೂಡಿಸಿ ಹೈಕಮಾಂಡ್ ಹಂತದವರೆಗೆ ಕೊಂಡೊಯ್ಯುವುದು ಯತ್ನಾಳ್ ಬಣದ ಪ್ಲಾನ್.
ಹಾಗಾದರೆ ಇದನ್ನು ಕಂಟ್ರೋಲ್ ಮಾಡಲು ವಿಜಯೇಂದ್ರ ಬಣ ಏನನ್ನೂ ಮಾಡುತ್ತಿಲ್ಲವಾ..? ಹಾಗೇನಿಲ್ಲ. ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಮಧ್ಯೆಯೇ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ದೆಹಲಿಗೆ ಹೋಗಿ ಬಂದಿದ್ದರು. ಅಲ್ಲಿ, ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ಸುಮಾರು 20 ನಿಮಿಷ ಮಾತುಕತೆಯನ್ನು ನಡೆಸಿದ್ದರು. ಈ ಭೇಟಿಯ ನಂತರ, ವಿಜಯೇಂದ್ರ ಮುಖ ಖುಷಿಯಿಂದ ಅರಳಿತ್ತು. ಮೋದಿ ಭೇಟಿಯ ನಂತರ ಮಾತನಾಡಿದ ವಿಜಯೇಂದ್ರ, ರಾಜ್ಯದ ಇನ್ನೊಂದು ಗುಂಪಿನ ಚಟುವಟಿಕೆಯ ಬಗ್ಗೆಯೂ ಪ್ರಧಾನಿಗಳಿಗೆ ವಿವರಿಸಿದ್ದೇನೆ ಎಂದು ಹೇಳಿದ್ದರು.
ವಿಜಯೇಂದ್ರ ಅವರ ಜೊತೆಗಿನ ಮಾತುಕತೆಗೆ ಮುನ್ನವೇ, ಕರ್ನಾಟಕದ ಬಿಜೆಪಿಯ ಸ್ಥಿತಿಗತಿಯ ವಿವರಣೆಯನ್ನು, ರಾಷ್ಟ್ರಾಧ್ಯಕ್ಷ ನಡ್ಡಾ ಅವರಿಂದ ಮೋದಿ ಪಡೆದುಕೊಂಡಿದ್ದರು. ಆ ವರದಿಯ ಪ್ರಕಾರ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದಿದ್ದರೂ, ವಿಜಯೇಂದ್ರ ಪಕ್ಷವನ್ನು ಸಂಘಟಿಸುತ್ತಿರುವ ರೀತಿಗೆ ಪ್ರಶಂಸೆ ವ್ಯಕ್ತವಾಗಿದೆ ಎನ್ನುವ ಮಾಹಿತಿಯಿದೆ.
ಹೀಗಾಗಿ ಶೀಘ್ರದಲ್ಲಿಯೇ ಜೆಪಿ ನಡ್ಡಾ ಅವರೇ ಬೆಂಗಳೂರಿಗೆ ಬರುತ್ತಿದ್ದು ಎಲ್ಲವೂ ಸರಿ ಹೋಗಲಿದೆ ಎಂಬ ವಿಶ್ವಾಸ ವಿಜಯೇಂದ್ರ ಅವರಿಗೆ ಇದ್ದಂತಿದೆ.