ಹಾಸನ ರಾಜಕೀಯದಲ್ಲಿ ಮತ್ತೊಮ್ಮೆ ಉಲ್ಟಾ ಪಲ್ಟಾ ಪಾಲಿಟಿಕ್ಸ್ ಶುರುವಾಗಿದೆ. ಹಾಸನ ಇರೋದೇ ಹಾಗೆ. ಅಲ್ಲಿ ಈಗ ಈ ಪಕ್ಷದಲ್ಲಿದ್ದವರು, ಮುಂದಿನ ಚುನಾವಣೆ ಹೊತ್ತಿಗೆ ಮತ್ಯಾವುದೋ ಪಕ್ಷದಲ್ಲಿರುತ್ತಾರೆ. ಸರಳವಾಗಿ ಹೇಳಬೇಕೆಂದರೆ ದೇವೇಗೌಡ, ಕುಮಾರಸ್ವಾಮಿಯವರನ್ನು ವಾಚಾಮಗೋಚರವಾಗಿ ಹೊಗಳುತ್ತಿದ್ದ ಶಿವಲಿಂಗೇಗೌಡ, ಈಗ ಕಾಂಗ್ರೆಸ್ ಶಾಸಕ. ಈಗ ಟೀಕೆ ಮಾಡ್ತಿದ್ದಾರೆ. ದೇವೇಗೌಡ, ರೇವಣ್ಣ, ಕುಮಾರಸ್ವಾಮಿಯನ್ನು ಮುಗಿಸಿಯೇ ಸಿದ್ಧ ಎಂದು ಠೇಂಕಾರ ಮಾಡುತ್ತಿದ್ದ ಎ ಮಂಜು, ಈಗ ಜೆಡಿಎಸ್ ಶಾಸಕ. ದೇವೇಗೌಡರೇ ನನ್ನ ರಕ್ಷಕ ಎನ್ನುತ್ತಿದ್ದಾರೆ. ಈಗ ಪ್ರೀತಂ ಗೌಡ ಸರದಿ.
ಬಿಜೆಪಿ ಶಾಸಕರಾಗಿದ್ದ ಪ್ರೀತಂ ಗೌಡ, ಈಗ ಸೋತು ಮಾಜಿಯಾಗಿದ್ದಾರೆ. ಅವರೀಗ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ. ಅವರ ಈ ನಿಲುವಿಗೆ ಕಾರಣ, ಬಿಜೆಪಿ-ಜೆಡಿಎಸ್ ಮೈತ್ರಿ. ಏಕೆಂದರೆ ಪ್ರೀತಂ ಗೌಡ ಫೈಟ್ ಮಾಡಿದ್ದೇ ಜೆಡಿಎಸ್ ವಿರುದ್ಧ. ಹಾಸನದಲ್ಲಿ ಇದೇ ಪ್ರೀತಂ ಗೌಡ ಅವರನ್ನು ಸೋಲಿಸಲು ಜೆಡಿಎಸ್ ಶತಾಯಗತಾಯ ಹೋರಾಟ ಮಾಡಿತ್ತು. ಕಾಂಗ್ರೆಸ್ ಕೂಡಾ ಕೈಜೋಡಿಸಿತ್ತು. ಅದಾದ ಮೇಲೆ ಲೋಕಸಭೆ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗುತ್ತಿದ್ದಂತೆಯೇ ಕೆರಳಿದ ಪ್ರೀತಂ ಗೌಡ, ಹಾಸನ ಲೋಕಸಭೆಯಲ್ಲಿ ಜೆಡಿಎಸ್ ಪರ ಪ್ರಚಾರವನ್ನೂ ಮಾಡಲಿಲ್ಲ. ಜೊತೆಗೆ ಪ್ರಜ್ವಲ್ ರೇವಣ್ಣ ಅವರ ವಿಡಿಯೋ ರಿಲೀಸ್ ಹಿಂದೆ ಪ್ರೀತಂ ಗೌಡ ಕೈವಾಡವೂ ಇದೆ ಎಂಬ ಮಾತುಗಳಿದ್ದವು. ಜೊತೆಗೆ ಪಕ್ಷದ ಸಭೆ, ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿರುವ ಪ್ರೀತಂ ಗೌಡ, ದಿನೇ ದಿನೇ ಬಿಜೆಪಿಯಿಂದ ದೂರವಾಗುತ್ತಿದ್ದಾರೆ.
ಪ್ರೀತಂ ಗೌಡರನ್ನು ಕಾಂಗ್ರೆಸ್ ಕರೆತರುವ ಪ್ರಯತ್ನದಲ್ಲಿ ಯಶಸ್ಸು ಕಂಡ ಡಿಕೆಶಿ, ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಜೆಡಿಎಸ್ ಜೊತೆ ಮೈತ್ರಿ, ಹಾಸನ ಬಿಜೆಪಿ ನಾಯಕ ಪ್ರೀತಂ ಗೌಡಗೆ ಇಷ್ಟವಿಲ್ಲ ಎಂಬುದನ್ನೇ ಡಿಕೆಶಿ ತಮ್ಮ ಯೋಜನೆಗೆ ಬಳಸಿಕೊಂಡಂತೆ. ಯಾರ ವಿರುದ್ಧ ಹೋರಾಡಿದ್ದೆವೋ.. ಅವರನ್ನೇ ಗೆಲ್ಲಿಸಬೇಕಾ ಎಂದಿದ್ದ ಪ್ರೀತಂ ಗೌಡ, ಹಾಸನ ಲೋಕಸಭೆ ಚುನಾವಣೆ ವೇಳೆಯಲ್ಲಿಯೇ ಪ್ರಚಾರದಿಂದ ದೂರ ಇದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ವಾಲಿದ ಪ್ರೀತಂ ಗೌಡ, ಈಗ ಕಾಂಗ್ರೆಸ್ಸನ್ನು ಅಧಿಕೃತವಾಗಿ ಸೇರುವ ದಿನ ದೂರವಿಲ್ಲ.
ಆದರೆ ಪ್ರೀತಂ ಗೌಡ ಬಿಜೆಪಿಯಲ್ಲಿ ಯಡಿಯೂರಪ್ಪ, ವಿಜಯೇಂದ್ರ ಜೊತೆಗೆ ಚೆನ್ನಾಗಿಯೇ ಇದ್ದವರು. ಅತ್ತ ಯಡಿಯೂರಪ್ಪ ವಿರೋಧಿ ಬಣದಲ್ಲಿರುವ ಸಿಟಿ ರವಿ ಅವರ ಜೊತೆಯಲ್ಲೂ ಚೆನ್ನಾಗಿಯೇ ಇದ್ದಾರೆ. ಹಾಸನದಂತಹ ಜಿಲ್ಲೆಯಲ್ಲಿ ದೇವೇಗೌಡರಿಗೆ ದೊಡ್ಡ ಮಟ್ಟದಲ್ಲಿ ತೊಡೆ ತಟ್ಟಿದ್ದರು ಎನ್ನುವ ಕಾರಣಕ್ಕಾಗಿಯೇ ಯಡಿಯೂರಪ್ಪ ವಿರೋಧಿ ಬಣಕ್ಕೆ ಹಾಗೂ ಯಡಿಯೂರಪ್ಪ ಬಣಕ್ಕೆ ಇಷ್ಟವಾಗಿದ್ದ ಪ್ರೀತಂ ಗೌಡ, ಈಗ ದೇವೇಗೌಡರು ಬಿಜೆಪಿ ಜೊತೆ ಕೈಜೋಡಿಸಿದ ಕಾರಣಕ್ಕೆ ಬಿಜೆಪಿಯನ್ನೇ ಬಿಡುತ್ತಿದ್ದಾರೆ.
ಆದರೆ ಪ್ರೀತಂ ಗೌಡ ಅವರನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಕೆಕ ಬಿಜೆಪಿಯಲ್ಲಿರುವ ನಾಯಕರು ಸಿದ್ಧರಿಲ್ಲ. ಆರ್ ಎಸ್ ಎಸ್ ಕೂಡಾ ತಯಾರಿಲ್ಲ. ಆದರೆ ಪ್ರೀತಂ ಗೌಡ, ಎಕ್ಸಿಟ್ ಪಕ್ಕಾ ಆಗಿದೆಯಂತೆ.