ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿ ಉಚ್ಚಾಟಿಸಿದ ಮೇಲೆ ಒಂದು ರೀತಿಯಲ್ಲಿ ಯತ್ನಾಳ್ ಅವರು ಒಬ್ಬಂಟಿಯಾಗಿದ್ದಾರೆ. ಯತ್ನಾಳ್ ಅವರನ್ನು ಅವರದ್ದೇ ತಂಡದಲ್ಲಿದ್ದ ಕೆಲವು ನಾಯಕರು ಭೇಟಿ ಮಾಡಿ ಸಮಾಧಾನ ಮಾಡಿದ್ದು ಒಂದು ಸಲ ಅಷ್ಟೇ, ಅದಾದ ಮೇಲೆ ಅಂತರ ಕಾಯ್ದುಕೊಂಡಿದ್ದಾರಂತೆ. ಕೆಲವರಂತೂ ಯತ್ನಾಳ್ ಅವರು ಫೋನ್ ಮಾಡಿದರೆ, ಎರಡು ಮೂರು ಬಾರಿ ಮಿಸ್ ಮಾಡಿ, ಆನಂತರ ಬ್ಯುಸಿ ಇದ್ವು ಅಣ್ಣಾ ಅಂತಾ ರಿಟರ್ನ್ ಕಾಲ್ ಮಾಡ್ತಾರಂತೆ. ಮೊದಲು ಹೀಗಿರಲಿಲ್ಲ, ಯತ್ನಾಳ್ ಫೋನ್ ಮಾಡಿದರೆ ಎಂಗೇಜ್ ಇದ್ದರೂ, ಆ ಕಾಲ್ ಕಟ್ ಮಾಡಿ, ಯತ್ನಾಳ್ ಜೊತೆ ಮಾತನಾಡುತ್ತಿದ್ದರಂತೆ. ಪರಿಸ್ಥಿತಿ ಬದಲಾಗಿದ್ದು ಏಕೆ..? ಏಕೆಂದರೆ ಯತ್ನಾಳ್ ಅವರು ನಿರೀಕ್ಷೆ ಮಾಡಿದಷ್ಟು ಪ್ರಬಲ ನಾಯಕರಲ್ಲ ಎಂದು ಸ್ವತಃ ಯತ್ನಾಳ್ ಜೊತೆಗಿದ್ದ ನಾಯಕರೇ ಹೇಳುತ್ತಿರುವುದು.
ಮೂಲಗಳ ಪ್ರಕಾರ ಯತ್ನಾಳ್ ಜೊತೆಗಿದ್ದ ಪ್ರತಿಯೊಬ್ಬ ನಾಯಕರಿಗೂ ಅವರದ್ದೇ ಆದ ಒಂದು ಪರ್ಸನಲ್ ಅಜೆಂಡಾಗಳಿದ್ದವು. ಆ ಅಜೆಂಡಾಗಳಿಗೆ ಯತ್ನಾಳ್ ಅವರು ಟೂಲ್ ಕಿಟ್ ಆದರಷ್ಟೇ. ಯತ್ನಾಳ್ ಮಾತನಾಡುತ್ತಿದ್ದರು. ಅವರ ಜೊತೆಗಿದ್ದವರು ತಮ್ಮ ತಮ್ಮ ಕೆಲಸ ಮಾಡಿಕೊಂಡರಷ್ಟೇ. ಈಗ ಅವರಲ್ಲಿ ಯಾರೂ ಯತ್ನಾಳ್ ಜೊತೆ ಹೋಗುವುದಿಲ್ಲ. ಅವರಿಗೆ ಬಿಜೆಪಿಯಲ್ಲೇ ಒಂದೊಳ್ಳೆಯ ಸ್ಥಾನಮಾನ, ಗೌರವಯುತ ಹುದ್ದೆಗಳು ಸಿಗುತ್ತವೆ. ಅದಕ್ಕೆಲ್ಲ ಕಾರಣವಾಗುವುದು ಯತ್ನಾಳ್ ಎನ್ನುತ್ತಾರೆ ರಾಜಕೀಯ ತಜ್ಞರು.
ಯತ್ನಾಳ್ ಪರ ಜಯಮೃತ್ಯುಂಜಯ ಸ್ವಾಮೀಜಿ :
ವಿಜಯಪುರದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಸ್ವಾಮೀಜಿ ನೇತೃತ್ವದಲ್ಲಿ ಯತ್ನಾಳ್ ಪರ ರಾಜ್ಯ ಮಟ್ಟದ ಹೋರಾಟಕ್ಕೆ ನಿರ್ಧಾರವಾಗಿದೆ. ವಿಶೇಷ ಎಂದರೆ ಇದೇ ಜಯಮೃತ್ಯುಂಜಯ ಸ್ವಾಮೀಜಿ ಈ ಹಿಂದೆ ಕಾಂಗ್ರೆಸ್ ಪರ ಬಹಿರಂಗವಾಗಿಯೇ ಮತ ಕೇಳಿದ್ದವರು. ಪಂಚಮಸಾಲಿ ಸಮುದಾಯದಲ್ಲಿಯೇ ಹಲವು ಮಠಗಳಿವೆ. ಆದರೆ ಯತ್ನಾಳ್ ಜೊತೆಗೆ ಬಂದಿರುವುದು ಜಯಮೃತ್ಯುಂಜಯ ಸ್ವಾಮೀಜಿ ಮಾತ್ರ. ವಚನಾನಂದ ಸ್ವಾಮೀಜಿಯೂ ಬಂದಿಲ್ಲ. ಕಾಂಗ್ರೆಸ್ ಪರ ಮತ ಕೇಳಿದ್ದ, ಬಿಜೆಪಿಗೆ ವೋಟು ಬೇಡ ಎಂದು ಹೇಳಿದ್ದ ಜಯಮೃತ್ಯುಂಜಯ ಸ್ವಾಮೀಜಿ, ಕಾಂಗ್ರೆಸ್ ಪರ ನಿಂತಿರುವ ರಾಜಕೀಯ ಸ್ವಾಮೀಜಿ ಎಂಬ ಅಭಿಪ್ರಾಯವೂ ಎಲ್ಲೆಡೆ ಕೇಳಿ ಬರುತ್ತಿದೆ. ಇನ್ನು ಸಭೆಗೆ ಹೋದವರು ಸ್ಥಳೀಯ ಕಾರ್ಯಕರ್ತರಷ್ಟೇ.
ಮತ್ತೆ ಬಿಜೆಪಿಗೆ ವಾಪಸ್ ತರಲು ಯತ್ನ :
ಯತ್ನಾಳ್ ಅವರನ್ನು ವಾಪಸ್ ಕರೆತರಲು ಮುಂದೆ ಬರ್ತೀವಿ. ಹೈಕಮಾಂಡ್ ಜೊತೆ ಚರ್ಚೆ ಮಾಡ್ತೀವಿ. ಯತ್ನಾಳ್ ವಾಪಸ್ ಕರೆತರಲು ಹೈಕಮಾಂಡ್‌ಗೆ ಮನವಿ ಮಾಡ್ತೀವಿ ಎಂದು ಹೇಳಿದ್ದಾರೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ. ಯತ್ನಾಳ್ ರೆಬೆಲ್ಸ್ ಟೀಂ ಜೊತೆ ಮಾತನಾಡಿರುವ ಕುಮಾರ್ ಬಂಗಾರಪ್ಪ ಪಕ್ಷ ಸಂಘಟನೆ ಮಾಡುವ ಬಗ್ಗೆ ಮುಂದೆ ನಿರ್ಧಾರ ಮಾಡೋಣ. ಯತ್ನಾಳ್ ಅವರು ಇಂದು ನಮ್ಮ ಸಭೆಯಲ್ಲಿ ಇಲ್ಲ. ಆದ್ರೆ ಈ ಹೋರಾಟದ ಕೀರ್ತಿ ಯತ್ನಾಳ್ ಅವರಿಗೆ ಸಲ್ಲಬೇಕು. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರ್ತೀವಿ. ಅವರು ಮುಂದಿನ ನಿರ್ಧಾರ ತೆಗೆದುಕೊಳ್ತಾರೆ ಎಂದಿದ್ಧಾರೆ.