ಕರ್ನಾಟಕ ಬಿಜೆಪಿಯಲ್ಲಿನ ಬಣ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡು ತಾರಕಕ್ಕೇರುತ್ತಿದ್ದಂತೆಯೇ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಿಡಿದೆದ್ದಿರುವ ಯತ್ನಾಳ್ಗೆ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದ್ದು, 10 ದಿನಗಳ ಒಳಗೆ ಉತ್ತರ ನೀಡುವಂತೆ ಸೂಚಿಸಿದೆ. ಆದರೆ ಇಲ್ಲಿ ಬಿಜೆಪಿ ಹೈಕಮಾಂಡ್ ಡಬಲ್ ಗೇಮ್ ಆಡುತ್ತಿದೆಯಾ ಅನ್ನೋದು ಹಲವರ ಪ್ರಶ್ನೆ. ಏಕೆಂದರೆ ಇದೂವರೆಗೆ ಯತ್ನಾಳ್ ಬಿಜೆಪಿ ಹೈಕಮಾಂಡಿಗೆ ತುಸುವಾದರೂ ಗಂಭೀರವಾದಂತೆ ಕಾಣುತ್ತಿಲ್ಲ. ಮಾತುಗಳಲ್ಲಿ ಕನಿಷ್ಠ ಮಟ್ಟದ ಹತೋಟಿಯೂ ಬಂದಿಲ್ಲ. ಹತೋಟಿ ಇದೆ ಎಂದು ಕಾಣುತ್ತಿರುವುದು ವಿಜಯೇಂದ್ರ ಮಾತುಗಳಲ್ಲಿ ಮಾತ್ರ. ಯತ್ನಾಳ್ ಬಣದಲ್ಲಿರುವ ಶಾಸಕ ರಮೇಶ್ ಜಾರಕಿಹೊಳಿ, ಮಾಜಿಗಳಾದ ಕುಮಾರ್ ಬಂಗಾರಪ್ಪ ಮೊದಲಾದವರೆಲ್ಲ ಯತ್ನಾಳ್ ಪರ ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ.
ನೋಟಿಸ್ ಅಸಲಿಯೋ.. ನಕಲಿಯೋ..?
ಇದು ಯತ್ನಾಳ್ ಅವರ ವಾದ. ಅವರ ಪ್ರಕಾರ ನೋಟಿಸ್ ಬಂದಿರೋದು ವಾಟ್ಸಪ್ಪಿನಲ್ಲಿ. ಪೋಸ್ಟಿನಲ್ಲಿ ಅಲ್ಲ. ಹೀಗಾಗಿ ಇದು ಅಸಲಿಯೋ ನಕಲಿಯೋ ಎಂಬ ಅನುಮಾನವಿದೆ. ಅಲ್ಲದೆ ವಿಜಯೇಂದ್ರ ತಮ್ಮ ತಂದೆಯ ಸಹಿಯನ್ನೇ ಪೋರ್ಜರಿ ಮಾಡಿದ್ದವರು. ಇದನ್ನೂ ಮಾಡಿರ್ತಾನೆ ಎಂದೆಲ್ಲ ಟೀಕೆ ಮಾಡಿದ್ದಾರೆ. ಇದು ಹೈಕಮಾಂಡ್ ಅನ್ನು ಟೀಕೆ ಮಾಡುವಂತಿದೆ. ಅನುಮಾನಿಸುವಂತಿದೆ.
ಯತ್ನಾಳ್ ದೆಹಲಿಗೆ.. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬೆಂಗಳೂರಿಗೆ..!
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರಾದ ತರುಣ್ ಚುಗ್ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ ಯತ್ನಾಳ್ ದೆಹಲಿಯಲ್ಲಿದ್ದಾರೆ. ನೋಟಿಸ್ ಕೊಟ್ಟಿರುವ ಕಾರಣಕ್ಕೆ ಹೋಗುತ್ತಿದ್ದೇನೆ ಎನ್ನುತ್ತಿದ್ದಾರಾದರೂ, ಯತ್ನಾಳ್ ಅವರು ವಕ್ಫ್ ಕುರಿತಂತೆ ರಚಿಸಲಾಗಿದ್ದ ಜಂಟಿ ಸಂಸದೀಯ ಮಂಡಳಿ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ. ಪಕ್ಷದ ಕಾರ್ಯದರ್ಶಿ ಯತ್ನಾಳ್ ಅವರು ಇಲ್ಲದ ಸಮಯದಲ್ಲಿ ಬೆಂಗಳೂರಿಗೆ ಬರುತ್ತಿರುವುದೇ ಡಬಲ್ ಗೇಮ್ ಎನ್ನುವಂತೆ ತೋರುತ್ತಿದೆ.
ಮೊದಲಿನಿಂದಲೂ ಹೈಕಮಾಂಡಿನವರ ಬೆಂಬಲ ಇಲ್ಲದೆ ಇಷ್ಟೆಲ್ಲ ಮಾತನಾಡಲು ಸಾಧ್ಯ ಇಲ್ಲ ಎನ್ನೋ ಅನುಮಾನ ವಿಜಯೇಂದ್ರ ಬೆಂಬಲಿಗರದ್ದು. ಯಾರೊಬ್ಬರೂ ಕೂಡಾ ಸಂತೋಷವೋ.. ಅಸಂತೋಷವೋ.. ಹೆಸರು ಹೇಳಲ್ಲ. ಈಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬೆಂಗಳೂರಿಗೆ ಬಂದು ಯಾರನ್ನು ಭೇಟಿ ಮಾಡಿ, ಯಾರಿಗೆ ಗಪ್ ಚುಪ್ ಅಂತಾರೆ ಅನ್ನೋದು ಪ್ರಶ್ನೆ.
ಇನ್ನು ಈ ಮಧ್ಯೆ ರಾಜ್ಯದ ಒಟ್ಟು 21 ಜಿಲ್ಲೆಗಳ ಬಿಜೆಪಿ ಘಟಕದ ಅಧ್ಯಕ್ಷರು ವಿಜಯೇಂದ್ರ ಪರ ಒಲವು ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರಿಲ್ಲದೆ ಬಿಜೆಪಿ ಸಂಘಟನೆ ಅಸಾಧ್ಯ ಎಂಬ ಸಂದೇಶ ನೀಡಿದ್ದಾರೆ.
ಈ ಹಿಂದೆಯೂ ಯತ್ನಾಳ್ ಅವರಿಗೆ ನೋಟಿಸ್ ಕೊಟ್ಟು, ಸುಮ್ಮನಾಗಿದ್ದ ಹೈಕಮಾಂಡ್, ಈ ನೋಟಿಸ್‌ನ್ನೂ ಸೈಲೆಂಟ್ ಆಗಿಡಲು ಮುಂದಾಗಿದೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇದು ವಿಜಯೇಂದ್ರ ಅಪ್ತರಿಗೆ. ಯತ್ನಾಳ್ ಆಪ್ತರ ಮಾತಿಗೆ ಬಂದರೆ ಯತ್ನಾಳ್ ಯಾರಿಗೂ ಜಗ್ಗಲ್ಲ. ಬಗ್ಗಲ್ಲ. ಕುಗ್ಗಲ್ಲ. 10 ದಿನಗಳ ನೋಟಿಸ್‌ಗೆ ಉತ್ತರ ಕೊಡಿ ಅನ್ನೋ ನೋಟಿಸಿಗೆ ಅವರಾಗಲೀ ಮಾಧ್ಯಮಗಳ ಮೂಲಕವೇ ಉತ್ತರ ಕೊಟ್ಟುಬಿಟ್ಟಿದ್ದಾರೆ. ಯತ್ನಾಳ್ ಡೋಂಟ್ ಕೇರ್ ಅನ್ನೋದನ್ನ ಮತ್ತೆ ಸಾಬೀತು ಮಾಡಿದ್ದಾರೆ.