ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿಸುವಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಣ ಗೆದ್ದಿದೆ. ಹಾಗೆಂದು ಯತ್ನಾಳ್ ಅವರಿಗೆ ʻಬಿಜೆಪಿಯಿಂದ ಉಚ್ಚಾಟನೆʼ ಎನ್ನುವುದು ಹೊಸದೇನಲ್ಲ. ಈ ಹಿಂದೆ ಎರಡು ಬಾರಿ ಉಚ್ಚಾಟನೆಯಾಗಿದ್ದ ಯತ್ನಾಳ್, ಎರಡೂ ಬಾರಿಯೂ ವಾಪಸ್ ಬಂದಿದ್ದರು.
ಮೊದಲ ಉಚ್ಚಾಟನೆ : ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸತತ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಉಚ್ಚಾಟನೆಯಾಗಿದ್ದರು. 2009ರಲ್ಲಿ ಯಡಿಯೂರಪ್ಪ ಮತ್ತು ಅಂದಿನ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಉಚ್ಚಾಟನೆಗೊಂಡಿದ್ದರು.
ಎರಡನೇ ಉಚ್ಚಾಟನೆ : 2016ರಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಯತ್ನಾಳ್. ಆಗ ಉಚ್ಚಾಟನೆಯಾಗಿದ್ದ ಯತ್ನಾಳ್, ಜೆಡಿಎಸ್ ಜೊತೆ ಹೋಗಿದ್ದರು.
ಮೂರನೇ ಬಾರಿ ಉಚ್ಚಾಟನೆ : ಈಗ ಮೂರನೇ ಬಾರಿ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಪದೇ ಪದೆ ಹೇಳಿಕೆ ನೀಡಿದ ಪರಿಣಾಮ ಉಚ್ಚಾಟನೆ ಕ್ರಮ ಎದುರಿಸಬೇಕಾಗಿದೆ.
ಯಡಿಯೂರಪ್ಪ ಸಂಧಾನ : ತಮ್ಮ ವಿರುದ್ಧವೇ, ತಮ್ಮ ವ್ಯಕ್ತಿತ್ವದ ಬಗ್ಗೆಯೇ ಕೆಟ್ಟದಾಗಿ ಮಾತನಾಡಿದರೂ, ಯಡಿಯೂರಪ್ಪ ಅವರಿಗೆ ಯತ್ನಾಳ್ ಎಂದರೆ ವಿಶೇಷ ಮಮತೆ. ಈ ಹಿಂದೆ ಎರಡೂ ಬಾರಿ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಗೆ ಕರೆತಂದಿದ್ದವರು ಸ್ವತಃ ಯಡಿಯೂರಪ್ಪ. ಎರಡೂ ಬಾರಿ ಯತ್ನಾಳ್ ಅವರಿಗೆ ಬುದ್ದಿವಾದ ಹೇಳಿ ಪಕ್ಷಕ್ಕೆ ಮತ್ತೆ ಸೇರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಯತ್ನಾಳ್ ಅವರನ್ನು ಮೇಲ್ಮನೆಯಿಂದ ಗೆಲ್ಲಿಸಿಕೊಂಡಿದ್ದರು. ಅಷ್ಟೇ ಏಕೆ, 2023ರ ವಿಧಾನಸಭೆ ಚುನಾವಣೆಯಲ್ಲೂ ಯತ್ನಾಳ್ ಪರ ಪ್ರಚಾರ ಮಾಡಿದ್ದರು.
ಯತ್ನಾಳ್ ಉಚ್ಚಾಟನೆಗೆ ಅಡ್ಜಸ್ಟ್‌ಮೆಂಟ್ ಕಾರಣವಂತೆ..!
ಪಕ್ಷದಲ್ಲಿ ಶಿಸ್ತು-ತ್ಯಾಗಕ್ಕೆ ಮೊದಲ ಆದ್ಯತೆ. ಭಿನ್ನಮತ ಮುಂದುವರೆಯಲು ಬಿಟ್ಟರೆ ಪಕ್ಷಕ್ಕೆ ಇನ್ನಷ್ಟು ಹಾನಿ ಎಂದು ಉಚ್ಚಾಟನೆಯ ಕಠಿಣ ಶಿಕ್ಷೆ ಪ್ರಕಟಿಸಿದೆ ಬಿಜೆಪಿ ಹೈಕಮಾಂಡ್. ಯತ್ನಾಳ್ ಅವರ ಉಚ್ಚಾಟನೆಗೆ ಇದೇ ಕಾರಣ ನೀಡಲಾಗುತ್ತಿದ್ದರೂ, ಯತ್ನಾಳ್ ಅವರು ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪುಷ್ಟಿ ಸಿಕ್ಕಿದೆ. ಇತ್ತೀಚೆಗೆ ಕೆಎನ್ ರಾಜಣ್ಣ ಮಾತು ಕೇಳಿ, ಹನಿ ಟ್ರಾಪ್ ಹಗರಣವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದ ಯತ್ನಾಳ್, ಅದರಿಂದ 18 ಶಾಸಕರ ಸಸ್ಪೆಂಡಿಗೆ ಕಾರಣಕರ್ತರಾಗಿದ್ದರು. ಜೊತೆಗೆ ಎಂಬಿ ಪಾಟೀಲ್ ಜೊತೆ ಕುಚ್ ಕುಚ್ ಕೇಳಿ ಬರುತ್ತಿತ್ತು. ಅಲ್ಲದೆ ಯತ್ನಾಳ್ ಅವರ ಹೇಳಿಕೆಗಳಲ್ಲಿ, ಮಾತುಗಳಲ್ಲಿ ಲಗಾಮು ಇರಲಿಲ್ಲ. ಕೆಲವೊಮ್ಮೆ ಅದು ಮೋದಿ ವಿರುದ್ಧವೂ ಸ್ಪೋಟಗೊಂಡು.. ಆಮೇಲೆ ಅದು ಹಾಗಲ್ಲ.. ಹೀಗೆ ಎಂದು ತೇಪೆ ಹಾಕುವ ಮಟ್ಟಕ್ಕೆ ಬರುತ್ತಿತ್ತು. ಇದೆಲ್ಲದರಿಂದ ಬೇಸತ್ತ ಬಿಜೆಪಿ ಹೈಕಮಾಂಡ್, ಉಚ್ಚಾಟನೆ ಅಸ್ತ್ರ ಪ್ರಯೋಗ ಮಾಡಿದೆ.
ಉಚ್ಚಾಟನೆ ಅನಿವಾರ್ಯವಾಗಿತ್ತೇ..?
ಯತ್ನಾಳ್ ಮತ್ತು ವಿಜಯೇಂದ್ರ ನಡುವಿನ ಬಿಕ್ಕಟ್ಟನ್ನು ಬಗೆಹರಿಸುವ ಯಾವುದೇ ಕೆಲಸವನ್ನು ಹೈಕಮಾಂಡ್ ನಾಯಕರು ಮಾಡಲೇ ಇಲ್ಲ. ಒಂದು ಗಟ್ಟಿಯಾದ ಮಾತು ಹೇಳಿದ್ದರೆ ಯತ್ನಾಳ್ ಸೈಲೆಂಟ್ ಆಗುತ್ತಿದ್ದರು. ಅದೇ ವೇಳೆ ವಿಜಯೇಂದ್ರಗೂ ಬುದ್ದಿ ಹೇಳಿ ಸರಿಪಡಿಸಿಕೊಂಡು ಹೋಗುವಂತೆ ಸೂಚಿಸಿದ್ದರೆ ಸಾಕಿತ್ತು. ಈಗ ಯತ್ನಾಳ್ ಅವರನ್ನು ಉಚ್ಚಾಟಿಸಿ, ಅವರನ್ನು ಇನ್ನಷ್ಟು ರೊಚ್ಚಿಗೆಬ್ಬಿಸಿದಂತೆ ಆಗಿದೆ. ಉಗುರಿನಲ್ಲಿ ಹೋಗುವ ಸಮಸ್ಯೆಗೆ, ಕೊಡಲಿ ತೆಗೆದುಕೊಂಡ ಕಾರಣ.. ಈ ಗಾಯ ಇಷ್ಟಕ್ಕೇ ನಿಲ್ಲಲ್ಲ. ವ್ರಣವಾಗುವುದಂತೂ ಖಂಡಿತ.