ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ರಾಜ್ಯ ಬಿಜೆಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದೆ. ವಿಜಯೇಂದ್ರ ಬಣ ಸಂಭ್ರಮಿಸುತ್ತಿದ್ದರೆ, ಯತ್ನಾಳ್ ಬಣ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಯತ್ನಾಳ್ ಬಣದ ನಡೆ : ರಾಜೀನಾಮೆ ಶುರು..!
ಶಾಸಕ ಯತ್ನಾಳ್ ಅವರ ಉಚ್ಚಾಟನೆ ಬೆನ್ನಲ್ಲೇ ಕೆಲ ಬಿಜೆಪಿ ಕಾರ್ಯಕರ್ತರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ನಗರ ಯುವ ಮೋರ್ಚಾ ಉಪಾಧ್ಯಕ್ಷ ನಂದು ಗಡಗಿ, ನಗರ ಮಂಡಲದ ರೈತ ಮೋರ್ಚಾ ಅಧ್ಯಕ್ಷ ರಾಜು ಬಿರಾದಾರ, ಬಿಜೆಪಿ ನಗರ ಮಂಡಲ ಎಸ್ ಟಿ ಮೋರ್ಚಾ ಅಧ್ಯಕ್ಷ ಪ್ರವೀಣ ನಾಟೀಕಾರ, ನಗರ ಮಂಡಲ ಒಬಿಸಿ ಮೋರ್ಚಾ ಉಪಾಧ್ಯಕ್ಷ ಭೀಮು ಮಾಶ್ಯಾಳ, ಒಬಿಸಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಪಿಂಟು ಚೋರಗಿ, ನಗರ ಮಂಡಲ ಉಪಾಧ್ಯಕ್ಷ ಬಸವರಾಜ್ ಗೊಳಸಂಗಿ, ನಗರ ಮಂಡಲ ಕಾರ್ಯಾಲಯ ಕಾರ್ಯದರ್ಶಿ ಅಮಿತ್ ಗರುಡಕರ ಸೇರಿ 170+ ಸ್ಥಳೀಯ ನಾಯಕರು, ಕಾರ್ಯಕರ್ತರು ರಾಜೀನಾಮೆ ಕೊಟ್ಟಿದ್ದಾರೆ.
ಯತ್ನಾಳ್ ಬಣದ ನಡೆ : ಪ್ರತ್ಯೇಕ ಸಭೆ
ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ, ಬಿ.ವಿ.ನಾಯಕ್, ಬಿ.ಪಿ.ಹರೀಶ್ ಮತ್ತಿತರರಿಗೂ ಇದೀಗ ಆತಂಕ ಶುರುವಾಗಿದೆ. ಒಂದು ವೇಳೆ ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುವ ನಿರ್ಧಾರ ಹೊರಬಿದ್ದಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿ ಸಭೆ ಕರೆದಿದ್ದಾರೆ.
ತಟಸ್ಥರ ವಿಚಿತ್ರ ಹೆಜ್ಜೆ : ಅಯ್ಯೋ ಪಾಪ..
ಇನ್ನು ಬಸವರಾಜ ಬೊಮ್ಮಾಯಿ, ಸಿಟಿ ರವಿ, ಪ್ರತಾಪ್ ಸಿಂಹ, ಸದಾನಂದ ಗೌಡ, ಆರ್ ಅಶೋಕ್ ಮೊದಲಾದವರೆಲ್ಲ ಅಯ್ಯೋ ಪಾಪ.. ಹೀಗಾಗಬಾರದಿತ್ತು ಎನ್ನುತ್ತಿದ್ದಾರೆ. ಬಿ.ಶ್ರೀರಾಮುಲು ಮಾತ್ರ, ಹೈಕಮಾಂಡ್ ಎದುರು ಇದನ್ನು ಪ್ರಶ್ನೆ ಮಾಡುವುದಾಗಿ ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಓಪನ್ ಆಗಿ ʻಯತ್ನಾಳ್ ಒಂಟಿಯಲ್ಲʼ ಎಂದಿದ್ದರೆ, ಶ್ರೀರಾಮುಲು ʻಉಚ್ಚಾಟನೆ ಮರುಪರಿಶೀಲಿಸಿʼ ಎಂದು ಮನವಿ ಮಾಡುವುದಾಗಿ ಹೇಳಿದ್ದಾರೆ.
ವಿಜಯೇಂದ್ರ ಬಣದ ಸಂತಸ :
ವಿಜಯೇಂದ್ರ ಬಣದಲ್ಲಿದ್ದ ನಾಯಕರೆಲ್ಲ ಯತ್ನಾಳ್ ಉಚ್ಚಾಟನೆಯನ್ನು ಸ್ವಾಗತಿಸಿದ್ದಾರೆ. ಆದರೆ ಇದರ ಜೊತೆಗೆ ಎಚ್ಚರಿಕೆಯೂ ಇದೆ. ವಿಜಯೇಂದ್ರ ಬಣ, ಮುಂಬರುವ ಸ್ಥಳೀಯ ಸಂಸ್ಥೆ ಜಿಪಂ, ತಾಪಂ ಚುನಾವಣೆಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲೇಬೇಕು. ಇಲ್ಲದೇ ಹೋದರೆ, ವಿಜಯೇಂದ್ರ ನಾಯಕತ್ವದ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಇನ್ನು ಸದ್ಯಕ್ಕೆ ಬಿಜೆಪಿಯಲ್ಲಿಯೇ ಇರೋ ಬಹುತೇಕ ದೊಡ್ಡ ದೊಡ್ಡ ನಾಯಕರು ವಿಜಯೇಂದ್ರ ಅವರ ನಾಯಕತ್ವವನ್ನೇನೂ ಒಪ್ಪಿಲ್ಲ. ಅವರದ್ದು ಒಳಗೊಳಗೆ ತಂತ್ರಗಾರಿಕೆ ನಡೆಯುತ್ತಲೇ ಇರುತ್ತದೆ. ಯತ್ನಾಳ್ ವಿಷಯದಲ್ಲಿ ಮೌನವಾಗಿದ್ದಂತೆ ಇನ್ನು ಮುಂದೆ ಇರುವುದಕ್ಕಾಗಲ್ಲ. ಒಂದಂತೂ ಸತ್ಯ, ವಿಜಯೇಂದ್ರ, ಯಡಿಯೂರಪ್ಪ ಅವರ ಮಗನೇ ಹೊರತು, ಯಡಿಯೂರಪ್ಪ ಅಲ್ಲ. ಈ ವಾಸ್ತವ ವಿಜಯೇಂದ್ರ ಅವರಿಗೆ ಅರ್ಥವಾದರೆ ಸಾಕು, ವಿಜಯೇಂದ್ರ ಅರ್ಧ ಯುದ್ಧ ಗೆದ್ದಂತೆ.