ಬಸನಗೌಡ ಪಾಟೀಲ ಯತ್ನಾಳ್ ಜನ ಬಯಸಿದರೆ ಹೊಸ ಪಕ್ಷ ಕಟ್ಟುತ್ತೇನೆ ಎಂದು ಘೋಷಿಸಿದ್ದಾರೆ. ಆದರೆ ಹೊಸ ಪಕ್ಷ ಕಟ್ಟುವುದು ಅಷ್ಟು ಸುಲಭವೇ.. ನಿಭಾಯಿಸುವುದು ಹೇಳಿಕೆ ಕೊಟ್ಟಷ್ಟು ಸುಲಭವೇ.. ಎಂದು ನೋಡಿದರೆ ಅಡ್ಡಿ ಆತಂಕಗಳೇ ಹೆಚ್ಚಾಗಿ ಕಾಣಿಸುತ್ತವೆ. ಏಕೆಂದರೆ ಒಂದು ಸಂಸ್ಥೆ ನಿಭಾಯಿಸುವುದಕ್ಕಿಂತ ದೊಡ್ಡ ಕಷ್ಟ ಒಂದು ಪಕ್ಷವನ್ನು ನಿಭಾಯಿಸುವುದು. ವೃತ್ತಿಪರ ಸಂಸ್ಥೆಗಳಲ್ಲಿ ಸಂಬಳ ಕೊಟ್ಟರೆ ಕೆಲಸ ಆಗುತ್ತದೆ. ದರ್ಪ ತೋರಿಸುವುದಕ್ಕೆ ಅವಕಾಶಗಳೂ ಇವೆ. ಲಾಭ ಬರುತ್ತದೋ.. ಇಲ್ಲವೋ.. ಪಕ್ಕಾ ಲೆಕ್ಕ ಹಾಕಬಹುದು.
ಆದರೆ.. ರಾಜಕೀಯ ಪಕ್ಷ ಎಂದರೆ ಹಾಗಲ್ಲ, ಅಲ್ಲಿ ಖರ್ಚು ಇರುತ್ತದೆ. ಮಾಡಲೇಬೇಕು. ಆದರೆ ಇಷ್ಟು ಖರ್ಚು ಮಾಡಿದೆ ಎಂದು ಹೇಳಿಕೊಳ್ಳುವಂತಿಲ್ಲ. ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ದೊಡ್ಡ ಸಂಪನ್ಮೂಲ ಬೇಕೇ ಬೇಕು. ಜೊತೆಗೆ ದರ್ಪ ತೋರಿಸುವಂತಿಲ್ಲ. ದರ್ಪ ತೋರಿಸಿದರೆ.. ಜೊತೆಗಿದ್ದವರು ಎದ್ದು ಹೋಗುತ್ತಾರೆ. ಎಷ್ಟೇ ದೊಡ್ಡ ನಾಯಕನಾದರೂ.. ತಗ್ಗಿ ಬಗ್ಗಿಯೇ ನಡೆಯಬೇಕು. ಇಷ್ಟೆಲ್ಲ ಆಗಿಯೂ, ಮಾಡಿದ ಖರ್ಚಿಗೆ ಲಾಭ ಬರುತ್ತದೆ ಅರ್ಥಾತ್ ಅಧಿಕಾರ ಸಿಗುತ್ತದೆ. ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಇಲ್ಲ. ಇದೆಲ್ಲದರ ಜೊತೆಯಲ್ಲೂ ಇನ್ನೊಂದಿಷ್ಟು ಸವಾಲುಗಳಿವೆ.
ಹಿಂದೂ ಮುಖಂಡ.. ಪಂಚಮಸಾಲಿ ಅಜೆಂಡಾ..!
ಇದು ಯತ್ನಾಳ್ ಅವರ ದೊಡ್ಡ ಸವಾಲು. ಅವರು ಹಿಂದುತ್ವ, ಕಟ್ಟರ್ ಹಿಂದುತ್ವ ಹೆಸರಲ್ಲಿ ಫೈರ್ ಬ್ರಾಂಡ್ ಎಂದೇನೋ ಹೆಸರು ಪಡೆದಿದ್ದಾರೆ. ಜೊತೆಗೆ ತಾನು ಪಂಚಮಸಾಲಿ ಲಿಂಗಾಯತ ಇದ್ದೀನಿ, ಪಂಚಮಸಾಲಿಗಳಿಗೆ ಬಿಜೆಪಿ ನಾಯಕತ್ವ ಬೇಕು ಅಂತಾರೆ. ಪಂಚಮಸಾಲಿಗಳ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇದು ಕಟ್ಟರ್ ಹಿಂದುತ್ವಕ್ಕೆ ವಿರುದ್ಧ ಅಲ್ಲವೇ.. ಎಂದರೆ ಅದು ಅನಿವಾರ್ಯ ಎಂಬ ಉತ್ತರ ಬರುತ್ತದೆ. ಓ.. ಹಾಗಾದರೆ ಇದು ಹಿಂದೂ.. ಹಿಂದುತ್ವದ ಅಜೆಂಡಾ.. ಪಂಚಮಸಾಲಿ ಮುಖಂಡ ಎಂಬ ಪ್ರಶ್ನೆ ಬರುತ್ತದೆ. ಆ ಗೊಂದಲ ನಿವಾರಿಸುವುದು ಯತ್ನಾಳ್ ಅವರ ದೊಡ್ಡ ಸವಾಲು.
ಪಂಚಮಸಾಲಿ ಹತ್ತಿರ.. ಲಿಂಗಾಯತರೇ ದೂರ..
ಇದು ಇನ್ನೊಂದು ಸಮಸ್ಯೆ. ಏಕೆಂದರೆ ಯತ್ನಾಳ್, ಲಿಂಗಾಯತರಲ್ಲೇ ಒಂದು ಉಪಪಂಗಡ ಪಂಚಮಸಾಲಿಗಳ ನಾಯಕರಂತೆ ಆಡುತ್ತಾರೆಯೇ ಹೊರತು, ಲಿಂಗಾಯತರನ್ನೂ ಒಟ್ಟುಗೂಡಿಸುವ ಮಾತನ್ನಾಡುವುದಿಲ್ಲ. ಇದನ್ನು ನಿವಾರಿಸಿಕೊಳ್ಳದೇ ಹೋದರೆ, ಯತ್ನಾಳ್ ಪಂಚಮಸಾಲಿಗಳ ಒಂದು ವರ್ಗಕ್ಕೆ ಲೀಡರ್ ಆಗಬಹುದೇ ಹೊರತು, ಲಿಂಗಾಯತರ ನಾಯಕರೂ ಆಗುವುದಿಲ್ಲ. ಹೀಗಿರುವಾಗ ದೊಡ್ಡ ಮಟ್ಟದ ನಾಯಕರಾಗುವುದು ಹೇಗೆ..?
ಜೊತೆಗಿರುವವರೆಲ್ಲ ಕುಟಂಬ ರಾಜಕಾರಣದವರೇ..
ಇನ್ನು ಯತ್ನಾಳ್ ಮಾತನಾಡುವುದು ಕುಟುಂಬ ರಾಜಕಾರಣದ ವಿರುದ್ಧ. ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ. ಆದರೆ, ಯತ್ನಾಳ್ ಜೊತೆಗಿರುವವರೆಲ್ಲ ಕುಟುಂಬ ರಾಜಕಾರಣದ ಫಲಶೃತಿಗಳೇ. ರಮೇಶ್ ಜಾರಕಿಹೊಳಿ, ಜಿಎಂ ಸಿದ್ದೇಶ್ವರ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ.. ಎಲ್ಲರೂ ಕುಟುಂಬಸ್ಥರೇ. ಸಿಟಿ ರವಿ, ಪ್ರತಾಪ್ ಸಿಂಹ ಅವರನ್ನು ಹೊರಗೆ ನಿಲ್ಲಿಸಬಹುದು. ಇಬ್ಬರೂ ಯುವ ನಾಯಕರು. ಮಕ್ಕಳಿನ್ನೂ ರಾಜಕಾರಣಕ್ಕೆ ಬಂದಿಲ್ಲ. ಪರೋಕ್ಷವಾಗಿ ಬೆಂಬಲಿಸಿದ ಬೊಮ್ಮಾಯಿ, ಸೋಮಣ್ಣ, ಆರ್ ಅಶೋಕ್ ಮೊದಲಾದವರೂ ಕೂಡಾ ಕುಟುಂಬಸ್ಥರೇ. ಸ್ವಕುಟುಂಬ ಪ್ರೇಮಿಗಳೇ.
ಜೊತೆಗಿರುವವರು ಗೆಲ್ಲುವವರಲ್ಲ..!
ಇನ್ನು ಯತ್ನಾಳ್ ಸೇರಿದಂತೆ ಯತ್ನಾಳ್ ಜೊತೆಯಲ್ಲಿರುವ ಬಹುತೇಕ ನಾಯಕರು ಸ್ವಯಂಬಲದಿಂದ ಗೆಲ್ಲುವವರಲ್ಲ. ಇದಕ್ಕೆ ಹೊರತಾಗಿ ಕಾಣಿಸುತ್ತಿರುವುದು ರಮೇಶ್ ಜಾರಕಿಹೊಳಿ ಮಾತ್ರ. ಉಳಿದಂತೆ ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಜಿಎಂ ಸಿದ್ದೇಶ್ವರ, ಸಿಟಿ ರವಿ ಸೋತ ನಾಯಕರು. ಪ್ರತಾಪ್ ಸಿಂಹ, ಬಿಪಿ ಹರೀಶ್, ಅಷ್ಟೇ ಏಕೆ ಪತ್ನಿಗೆ ಟಿಕೆಟ್ ಕೊಡಿಸಿದ್ದ ಅರವಿಂದ ಲಿಂಬಾವಳಿಯೂ ಕಷ್ಟದಲ್ಲಿ ಗೆದ್ದವರೇ. ಜೊತೆಗೆ ಯತ್ನಾಳ್ ಅವರಿಗೆ 2023ರ ಈ ಚುನಾವಣೆಯಲ್ಲಿಯೇ ಯಡಿಯೂರಪ್ಪ ಪ್ರಚಾರ ಮಾಡಿದ್ದರು. ಲೋಕಸಭೆಯಲ್ಲಿ ಅದೇ ಯತ್ನಾಳ್ ಪಕ್ಷಕ್ಕೆ ತಮ್ಮ ಕ್ಷೇತ್ರದಲ್ಲೇ ಲೀಡ್ ಕೊಡಿಸಲು ಆಗಲಿಲ್ಲ. ಹೀಗೆ ಬಿಜೆಪಿಯಯಂತ ಸಂಘಟಿತ ಪಕ್ಷದಲ್ಲಿಯೇ ಸ್ವಯಂ ಶಕ್ತಿ ಇಲ್ಲದವರು ಹೊಸ ಪಕ್ಷ ಕಟ್ಟಿದರೆ ಹೇಗೆ ಸಪೋರ್ಟ್ ಮಾಡ್ತಾರೆ..?
ಆರ್ ಎಸ್ ಎಸ್ ಬೆಂಬಲ ಇಲ್ಲ
ಇನ್ನು ಯತ್ನಾಳ್ ಹೋರಾಟದಲ್ಲಿ ಯತ್ನಾಳ್ ಅವರಿಗೆ ಆರ್ ಎಸ್ ಎಸ್/ಬಿಜೆಪಿ ಕಾರ್ಯಕರ್ತರ ಬೆಂಬಲವೂ ಒಂದಿಷ್ಟು ಇತ್ತು. ಆದರೆ ಯತ್ನಾಳ್ ಉಚ್ಚಾಟನೆಯಾಗುತ್ತಿದ್ದಂತೆಯೇ ಕಲ್ಲಡ್ಕ ಪ್ರಭಾಕರ್ ಅವರಂತಹ ಹಿರಿಯ ಸಂಘದ ನಾಯಕರೇ ಯತ್ನಾಳ್ ಅವರಿಗೆ ಬುದ್ದಿ ಹೇಳಿದ್ದಾರೆ. ನಾಯಕರೇ ಮಾತನಾಡುತ್ತಿಲ್ಲ ಎಂದಾದಾಗ, ಕಾರ್ಯಕರ್ತರು ಏನ್ ಮಾಡ್ತಾರೆ..
ಯತ್ನಾಳ್ ನಾಲಗೆಯೇ ಅಲ್ಲೂ ಶತ್ರು..!
ಯತ್ನಾಳ್ ಅವರ ದೊಡ್ಡ ಶತ್ರು ನಾಲಗೆ. ಅವರು ಯಾರನ್ನೂ ಬಿಡುವವರಲ್ಲ. ಆದರೆ ನಾಯಕನಾದವನು ರಾಜಕೀಯವನ್ನು ಮೆದುಳಿನಿಂದ ಮಾಡಬೇಕೇ ಹೊರತು, ನಾಲಗೆಯಿಂದ ಅಲ್ಲ. ಮಾತುಗಳು ಹಿಡಿತದಲ್ಲಿರಬೇಕು. ಅದು ಇಲ್ಲದ ಕಾರಣಕ್ಕೇ ಯತ್ನಾಳ್ ಅವರ ಸ್ನೇಹಿತರ ಬಳಗ ದೂರವಾಗಿದೆ. ಈ ಹಿಂದೆ ಇದ್ದವರು ಜೊತೆಗಿಲ್ಲ. ಈಗಲೂ ಅಷ್ಟೇ, ಈಗ ಇರುವವರು, ಮುಂದಿನ ದಿನಗಳಲ್ಲಿ ಯತ್ನಾಳ್ ಜೊತೆ ಇರುವುದಿಲ್ಲ.
ಇವೆಲ್ಲವನ್ನೂ ಮೀರಿ ಯತ್ನಾಳ್ ಅವರ ಹೊಸ ಪಕ್ಷ ಗೆದ್ದರೆ, ಅದು ಪವಾಡವೇ ಸರಿ.