ವಕ್ಫ್ ವಿರೋಧಿ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಸೂಚನೆ ಧಿಕ್ಕರಿಸಿ, ಪಕ್ಷದ ವೇದಿಕೆ ಬಿಟ್ಟು ಪ್ರತ್ಯೇಕ ಹೋರಾಟ ನಡೆಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಬಿಜೆಪಿಗೆ ಲಾಭ ಮಾಡುವುದರ ಬದಲಿಗೆ ಹಾನಿ ಮಾಡುತ್ತಿದ್ದಾರೆ ಎನ್ನುವ ವಾದ ಎಲ್ಲ ಕಡೆ ಕೇಳಿ ಬರುತ್ತಿದೆ. ಯತ್ನಾಳ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತ್ಯೇಕ ಹೋರಾಟದ ಕುರಿತಂತೆ ಇದೀಗ ಮಾಜಿ ಮುಖ್ಯ ಮಂತ್ರಿ .ಯಡಿಯೂರಪ್ಪ ಮೊದಲ ಬಾರಿಗೆ ಬಹಿರಂಗ ವಾಗಿ ಆಸಮಾಧಾನ ಹೊರಹಾಕಿದ್ದಾರೆ. ಸ್ವಸ್ವಪ್ರತಿಷ್ಠೆಗಾಗಿ ನಡೆಸುತ್ತಿರುವ ಹೋರಾಟ ಶಾಸಕ ಯತ್ನಾಳ ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಉಳಿದದ್ದು ಅವರಿಗೆ ಮತ್ತು ಪಕ್ಷದ ಕೇಂದ್ರದ ನಾಯಕರಿಗೆ ಬಿಟ್ಟದ್ದು. ಬಿಜೆಪಿಯಲ್ಲಿ ಕೆಲವರು ಒಡಕುಂಟು ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರ ಕೇಂದ್ರದ ವರಿಷ್ಠರಿಗೂ ಗೊತ್ತಿದೆ. ಪಕ್ಷದಲ್ಲಿ ಒಡಕು ಮೂಡಿಸುತ್ತಿರುವವರ ಬಗ್ಗೆ ಕೇಂದ್ರದ ವರಿಷ್ಠರಿಗೂ ಗೊತ್ತಿದೆ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಉಳಿದದ್ದು ಅವರಿಗೆ ಮತ್ತು ಪಕ್ಷದ ಕೇಂದ್ರದ ನಾಯಕರಿಗೆ ಬಿಟ್ಟದ್ದು ಎಂದಿರುವ ಯಡಿಯೂರಪ್ಪ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಇಟ್ಟುಕೊಂಡವರಿಗೆ ಈಗಲೂ ವಿನಂತಿಸುತ್ತೇನೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಚರ್ಚೆ ಮಾಡೋಣ ಬನ್ನಿ. ಏನಾದರೂ ಕೊರತೆ ಇದ್ದರೆ ಸರಿಪಡಿಸಿಕೊಂಡು, ಪಕ್ಷವನ್ನು ಬಲಪಡಿಸಿಕೊಂಡು ಮುಂದೆ ಸಾಗೋಣ ಎಂದು ಮನವಿ ಮಾಡಿದ್ದಾರೆ.
ಇತ್ತ ವಿಜಯೇಂದ್ರ ಅವರೂ ಕೂಡಾ ಹೋರಾಟ ಕೈಬಿಟ್ಟು ನಮ್ಮ ಜತೆ ಸೇರಿ ಕೆಲಸ ಮಾಡುವಂತೆ ಶಾಸಕ ಬಸನ ಗೌಡ ಯತ್ನಾಳ್‌ಗೆ ಮನವಿ ಮಾಡಿದ್ದಾರೆ. ಯತ್ನಾಳ್ ಸ್ವಪ್ರತಿಷ್ಠೆಯಿಂದ ವಕ್ಫ್ ಹೋರಾಟ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರಲ್ಲ. ಇನ್ನಾದರೂ ಅವರು ಜಾಗೃತ ರಾಗಿ ಒಟ್ಟಾಗಿ ಪಕ್ಷ ಬಲಪಡಿಸಲು ಸಹಕಾರ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.
ಇತ್ತ ಕಲಬುರಗಿಯಲ್ಲಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್ ಕಲಬುರಗಿಯಲ್ಲಿ ಇವತ್ತು ನಮ್ಮ ಪಕ್ಷದ ಬಹಳಷ್ಟು ಮುಖಂಡರು ನಮ್ಮ ಜೊತೆ ಬರಲಿಕ್ಕಿಲ್ಲ. ಈಗ ರಾಜಕುಮಾರ್ ಪಾಟೀಲ್ ತೇಲ್ಕೂರ ಬಂದಿದ್ದಾರೆ. ಮುಂದೆ ಒಬ್ಬೊಬ್ಬರೇ ನಮ್ಮ ಜೊತೆ ಬರುತ್ತಾರೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಮುಂದೆ ಟಿಕೆಟ್ ಕೊಡುವ ಅಧಿಕಾರ ನಮಗೆ ಬರುತ್ತೆ. ಹೈಕಮಾಂಡ್ ಗೆ ನನ್ನ ವಿರುದ್ದ ಪತ್ರ ಬರೆಯುತ್ತಿರುವುದು ಹೊಸದೇನೂ ಅಲ್ಲ. ನನ್ನ ವಿರುದ್ದ ನೀಡಿರುವ ದೂರುಗಳೇ ಒಂದು ರೂಮ್ ತುಂಬಿವೆ. ಆದರೆ ಏನು ಮಾಡಕ್ಕಾಗಿಲ್ಲ ಎಂದು ನೇರವಾಗಿಯೇ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ.
ಬಿ.ವೈ.ವಿಜಯೇಂದ್ರ ಹೋರಾಟನೇ ಮಾಡಲ್ಲ. ವಿಜಯೇಂದ್ರ ವಕ್ಫ್ ವಿರುದ್ಧ ಎಲ್ಲಿ ಹೋರಾಟ ಮಾಡಿದ್ದಾನೆ? ಯಾವ ಹಳ್ಳಿಗೆ ಹೋಗಿ ರೈತರ ಮನವಿ ಸ್ವೀಕರಿಸಿದ್ದಾನೆ ತೋರಿಸಿ. ರಾತ್ರಿಯಾದ್ರೆ ಸಾಕು ಡಿಕೆ-ಸಿದ್ದರಾಮಯ್ಯ ಮನೆಯಲ್ಲಿ ಇರ್ತಾರೆ. ಅವರು ಎಲ್ಲಿ ರೈತರ ಪರವಾಗಿ ಹೋರಾಟ ಮಾಡ್ತಾರೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ನೂರೆಂಟು ಕೇಸ್ ಇದೆ. ಕಾಪಾಡೋ ಶಿವಪ್ಪ ಅಂತಾ ಡಿಸಿಎಂ ಡಿಕೆ ಮನೆಯಲ್ಲಿ ಇರ್ತಾರೆ. ಕಾಪಾಡೋ ಸಿದ್ದರಾಮಯ್ಯ ಅಂತಾ ಅವರ ಮನೆಯಲ್ಲಿ ಇರ್ತಾರೆ ಎಂದು ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೊಸ ಟೀಂ ಕಟ್ಟೋಣ ಎನ್ನುವ ಯತ್ನಾಳ್ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದ್ದು, ಈ ಸಂಬಂಧ ವಿಜಯೇಂದ್ರ ಬಣ ಯಾವ ರೀತಿ ಹೆಜ್ಜೆ ಇಡುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಈ ಹೇಳಿಕೆಯನ್ನು ಗಮನಿಸಿದರೆ ವಿಜಯೇಂದ್ರ ಅವರನ್ನು ಬದಲಾವಣೆ ಮಾಡಬೇಕು. ಇಲ್ಲವಾದಲ್ಲಿ ಹೊಸ ತಂಡ ರಚನೆ ಮಾಡುವ ಸುಳಿವು ಸಹ ಕೊಟ್ಟಂತಿದೆ.
ಯತ್ನಾಳ್ ಅವರ ಹೋರಾಟಕ್ಕೆ ಪಕ್ಷದಲ್ಲಿರುವ ಬಹುತೇಕ ಶಾಸಕರು, ಜಿಲ್ಲಾಧ್ಯಕ್ಷರು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಕೈಜೋಡಿಸಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಒಟ್ಟಾಗಿ ವಕ್ಪ್ ವಿಚಾರವಾಗಿ ಒಟ್ಟಾಗಿ ಹೋರಾಡಬೇಕಿದ್ದ ವಿಪಕ್ಷ ಬಿಜೆಪಿ ಈಗಾಗಲೇ ಎರಡು ಭಾಗವಾಗಿದೆ. ಇದರ ಲಾಭ ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯನವರಿಗೆ ಸಿಗಲಿದೆ.