ಒಂದೆಡೆ ಶಾಸಕ ತನ್ವೀರ್ ಸೇಠ್ ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆಯನ್ನು ಸ್ಥಾಪಿಸಿಯೇ ಸಿದ್ಧ ಎಂದು ಘೊಷಿಸಿದ್ದಾರೆ. ಇದು ಇಸ್ಲಾಂ ಸಂಪ್ರದಾಯಕ್ಕೆ ವಿರುದ್ಧ. ಪ್ರತಿಮೆ ಮಾಡುವುದು ಇಸ್ಲಾಂ ವಿರೋಧಿ ಎನ್ನುವುದು ಪ್ರತಿಮೆ ವಿರೋಧಿಗಳ ವಾದ. ಪ್ರಮೋದ್ ಮುತಾಲಿಕ್, ಪ್ರಲ್ಹಾಹ್ ಜೋಷಿ, ಪ್ರತಾಪ್ ಸಿಂಹ, ಯತ್ನಾಳ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಮೊದಲಾದವರು ಟಿಪ್ಪು ಪ್ರತಿಮೆ ಪರ ನಿಂತಿದ್ದಾರೆ. ಇದರ ನಡುವೆಯೇ ರಂಗಾಯಣದಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗಿದೆ.
ಟಿಪ್ಪು ನಿಜ ಕನಸುಗಳು ಅಡ್ಡಂಡ ಕಾರ್ಯಪ್ಪ ರಚಿತ ನಾಟಕ. ಇದು ಕಾಲ್ಪನಿಕವಲ್ಲ, ನಾನು ಬರೆದಿರುವ ಪ್ರತಿಯೊಂದಕ್ಕೂ ದಾಖಲೆಯಿದೆ. ಬರಹಗಾರನ ಸ್ವಾತಂತ್ರ್ಯ, ಕಲ್ಪನಾಶೀಲತೆ ಹೆಸರಲ್ಲಿ ನಾನು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿಯೊಂದಕ್ಕೂ ದಾಖಲೆ ನೀಡುತ್ತೇನೆ ಎನ್ನುತ್ತಿರುವ ಕಾರ್ಯಪ್ಪ ನಾಟಕವನ್ನು ಪುಸ್ತಕ ರೂಪಕ್ಕೂ ತಂದಿದ್ದಾರೆ. ಈ ಕೃತಿಯನ್ನು ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಬಿಡುಗಡೆ ಮಾಡಿದ್ದು ವಿಶೇಷ. ಮೈಸೂರಿನ ರಂಗಾಯಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಯೋಧ್ಯ ಪ್ರಕಾಶನದ ಶಶಾಂಕ್ ಭಟ್, ಪ್ರತಾಪ್ ಸಿಂಹ, ರೋಹಿತ್ ಚಕ್ರತೀರ್ಥ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಾಟಕದಲ್ಲಿ ಟಿಪ್ಪು ಸುಲ್ತಾನ್ ಕನ್ನಡ ವಿರೋಧಿ ನೀತಿಗಳು. ಮೇಲುಕೋಟೆಯ ಬ್ರಾಹ್ಮಣರ ಮೇಲೆ ಟಿಪ್ಪು ನಡೆಸಿದ ಕ್ರೌರ್ಯಗಳ ಕಥೆ, ಮಂಡಿಯಂ ಅಯ್ಯಂಗಾರ್‍ನ 700 ಬ್ರಾಹ್ಮಣರ ಹತ್ಯೆ, ಟಿಪ್ಪುವಿನ ಇಸ್ಲಾಮೀಕರಣದ ಭ್ರಮೆ, ಅದಕ್ಕಾಗಿ ಟಿಪ್ಪು ನಡೆಸಿದ ಎಲ್ಲ ಹಿಂಸೆ, ಕ್ರೌರ್ಯ, ಕನ್ನಡ ವಿರೋಧಿಸಿ ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಹೇರಿದ್ದು, ಮಡಿಕೇರಿಯಲ್ಲಿ ನಡೆಸಿದ ಕ್ರೌರ್ಯ, ಟಿಪ್ಪು ಖಡ್ಗದಲ್ಲಿರುವ ಉರ್ದುವಿನಲ್ಲಿರುವ ಬರಹ, ಇಸ್ಲಾಂ ಪ್ರೀತಿ, ಹಿಂದೂ ದ್ವೇಷ, ಶ್ರೀರಂಗಪಟ್ಟಣದಲ್ಲಿ ತಾಳೆಗರಿ ಸುಟ್ಟು ಉರ್ದು ಗ್ರಂಥಗಳನ್ನು ಇರಿಸಿದ್ದು.. ಇವೆಲ್ಲವನ್ನೂ ವಿವರವಾಗಿ ನೀಡಲಾಗಿದೆ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ. ಗಿರೀಶ್ ಕಾರ್ನಾಡ್ ಟಿಪ್ಪು ಕನಸುಗಳು ನಾಟಕ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನವಾಗುತ್ತಿದೆ.
ಕೃತಿ ಬಿಡುಗಡೆ ಮಾತನಾಡಿದ ಎಸ್.ಎಲ್. ಭೈರಪ್ಪ ಟಿಪ್ಪು ಸ್ವಭಾವತಃ ಕ್ರೂರಿ. ಜನರನ್ನು ಮೂಟೆಯಲ್ಲಿ ಕಟ್ಟಿ ನಂದಿ ಬೆಟ್ಟದ ಮೇಲಿಂದ ಕೆಳಗೆ ಎಸೆಯುತ್ತಿದ್ದ. ಅಷ್ಟು ಕ್ರೂರಿ. ಅಂತಹವನ ಜಯಂತಿ ಆಚರಣೆಯ ಹಿಂದೆ ರಾಜಕೀಯ ಕೆಲಸ ಮಾಡುತ್ತಿದೆ. ಬೇಕಿದ್ದರೆ ತಾಯಿಯ ಜುಟ್ಟು ಹಿಡಿದು ಒಪ್ಪಿಸುವಷ್ಟರ ಮಟ್ಟಿಗೆ ಟಿಪ್ಪು ಪ್ರೇಮ ತುಂಬಿದೆ. ಸಂವಿಧಾನ ಬರೆಯುವಾಗ ಬಾಬಾ ಸಾಹೇಬ್ ಅಂಬೇಡ್ಕರ್ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಬಿಟ್ಟು ಬಿಡಿ ಎಂದಿದ್ದರು. ಆದರೆ ಕಾಂಗ್ರೆಸ್ಸಿನವರು ಗಾಂಧೀಜಿ ಮಾತಿಗೆ ಬದ್ಧರಾದರು. ನಮ್ಮವರು ರೈಲಿಗೆ ಟಿಪ್ಪು ಹೆಸರಿಡುತ್ತಾರೆ. ಕಲಾಂ ಹೆಸರು ಇಡೋಕೆ ಸಿದ್ಧರಿಲ್ಲ. ಟಿಪ್ಪುವನ್ನು ಅನಗತ್ಯವಾಗಿ ಹೀರೋ ಮಾಡಿಕೊಂಡು ಬರುತ್ತಿದ್ದಾರೆ ಎಂದರು ಎಸ್.ಎಲ್.ಭೈರಪ್ಪ.
ಟಿಪ್ಪು ನಡೆಸಿದ ದೌರ್ಜನ್ಯದ ಕಾರಣಕ್ಕೇ ಇವತ್ತಿಗೂ ಮೇಲುಕೋಟೆಯ ಬ್ರಾಹ್ಮಣರು ದೀಪಾವಳಿ ಆಚರಿಸುವುದಿಲ್ಲ ಎಂದ ಅಡ್ಡಂಡ ಕಾರ್ಯಪ್ಪ ನಾಟಕಕ್ಕೆ ಮುನ್ನುಡಿ ಬರೆದ ಎಸ್.ಎಲ್.ಭೈರಪ್ಪ ಹಾಗೂ ಬೆನ್ನುಡಿ ಬರೆದ ಚಕ್ರವರ್ತಿ ಸೂಲೆಬೆಲೆ ಅವರನ್ನು ಅಭಿನಂದಿಸಿದರು.