ಬಸನಗೌಡ ಪಾಟೀಲ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವಿನ ಜಗಳ ಬೀದಿಗೆ ಬಿದ್ದಿದೆ. ಯಾರ್ ಏನಂದ್ರೂ ಡೋಂಟ್ ಕೇರ್.. ಎನ್ನುತ್ತಿರುವ ಯತ್ನಾಳ್, ಪುಟ್ಟದೊಂದು ಸೈನ್ಯವನ್ನೇ ಕಟ್ಟಿಕೊಂಡು ಬೀದಿ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಟೀಕೆಗಳ ಸುರಿಮಳೆ ಸುರಿಸುತ್ತಿದ್ದಾರೆ. ಅದರೆ ಬಿಜೆಪಿ ಹೈಕಮಾಂಡ್ ಒಂದು ನೋಟಿಸ್ ಕೊಟ್ಟು ಸುಮ್ಮನಾಗಿದೆ. ಕ್ರಮ ಏಕಿಲ್ಲ ಎಂಬ ಪ್ರಶ್ನೆ ಕಾರ್ಯಕರ್ತರದ್ದು.
ಈ ನಡುವೆ ಯತ್ನಾಳ್ ವಿರುದ್ಧ ಶಿಸ್ತುಕ್ರಮ ತಡೆದಿದ್ದು ತಪ್ಪಾಯ್ತು. ಅಮಿತ್ ಶಾ ಅವರೇ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆಗ ನಾನೇ ತಡೆದಿದ್ದೆ. ರಾಜ್ಯಾಧ್ಯಕ್ಷರಾದ ಬೆನ್ನಲ್ಲೇ ಶಿಸ್ತು ಕ್ರಮ ಬೇಡ ಎಂದು ತಡೆದಿದೆ. ಯತ್ನಾಳ್ ಅವರಿಗೆ ಇನ್ನೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದೆ ಎಂದಿರುವ ವಿಜಯೇಂದ್ರ, ಆಗ ತಪ್ಪು ಮಾಡಿದೆ ಎಂದು ನನಗೆ ಈಗ ಅನಿಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕನ್ನಡ ಪ್ರಭಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಮಾತು ಹೇಳಿಕೊಂಡಿದ್ದಾರೆ ವಿಜಯೇಂದ್ರ. ರಾಜ್ಯಾಧ್ಯಕ್ಷರಾದ ದಿನದಿಂದಲೂ ವಿಜಯೇಂದ್ರ ವಿರುದ್ಧ ಸಿಡಿಯುತ್ತಲೇ ಇರುವ ಯತ್ನಾಳ್ ಅವರ ಜೊತೆ ಮಾತುಕತೆ ನಡೆಸುವುದಕ್ಕೂಖ ಆಗಲಿಲ್ಲವೇ ಎಂಬ ಮಾತಿಗೆ ಮಾತನಾಡಿರುವ ವಿಜಯೇಂದ್ರ ಬಸನಗೌಡ ಪಾಟೀಲ ಯತ್ನಾಳ್ ಜೊತೆ ಮಾತುಕತೆಗೆ ಪ್ರಯತ್ನ ಮಾಡಿದ್ದ ವಿಷಯವನ್ನೂ ಬಹಿರಂಗಪಡಿಸಿದ್ದಾರೆ.
ಯತ್ನಾಳ್ ಅವರ ಜೊತೆ ಮಾತುಕತೆಗೆ ಪಕ್ಷದ ನಾಯಕರನ್ನು ಕಳುಹಿಸಿದ್ದೆ. ನೇರಾನೇರ ಖುದ್ದು ಭೇಟಿಗೆ ಒಪ್ಪಿರಲಿಲ್ಲ ಯತ್ನಾಳ್ ಒಪ್ಪಿರಲಿಲ್ಲ. ಹೀಗಾಗಿ ಪಕ್ಷದ ನಾಯಕರಾದ ರವಿಕುಮಾರ್, ಅಭಯ ಪಾಟೀಲ್, ವೀರಣ್ಣ ಚರಂತಿಮಠ ಅವರ ಮೂಲಕ ಮಾತುಕತೆಗೆ ಪ್ರಯತ್ನಿಸಿದ್ದೆ. ಆದರೆ ಮುಖಾಮುಖಿ ಕುಳಿತು ಚರ್ಚೆ ಮಾಡುವುದಕ್ಕೂ ಯತ್ನಾಳ್ ಸಿದ್ಧರಿರಲಿಲ್ಲ ಎಂದಿರುವ ವಿಜಯೇಂದ್ರ ʻʻಯತ್ನಾಳ್ ಅವರಿಗೆ ಯಡಿಯೂರಪ್ಪ ಅವರನ್ನು ಬೈದರೆ ದೊಡ್ಡ ಲೀಡರ್ ಆಗುತ್ತೇನೆ ಎಂಬ ಭ್ರಮೆ ಇದೆʼʼ ಎಂದಿದ್ದಾರೆ.
ಯತ್ನಾಳ್ ಅವರ ಹೇಳಿಕೆ ನೋಡುತ್ತಿದ್ದರೆ ಕಿಚ್ಚು ಮತ್ತು ಉತ್ಸಾಹ ಹೆಚ್ಚುತ್ತದೆ ಎಂದಿರುವ ವಿಜಯೇಂದ್ರ ಆಂತರಿಕ ಕಿತ್ತಾಟದಿಂದ ಕಾರ್ಯಕರ್ತರ ಉತ್ಸಾಹ ಕುಂದಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದಾರೆ. ಇವುಗಳಗೆ ಶೀಘ್ರದಲ್ಲೇ ಇತಿಶ್ರೀ ಹಾಡುವ ಸೂಚನೆ ಕೊಟ್ಟಿರುವ ವಿಜಯೇಂದ್ರ, ಯತ್ನಾಳ್ ಪ್ರಕರಣವನ್ನು ಯಾವ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದಾರೆ ಎನ್ನುವ ಕುತೂಹಲವೂ ಇದೆ.
ಈ ನಡುವೆ ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ತೀವ್ರಗೊಳ್ಳುತ್ತಿದೆ. ವಕ್ಫ್ ನೋಟಿಸ್ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಜಾಗೃತಿ ಅಭಿಯಾನಕ್ಕೆ ತಿರುಗೇಟು ನೀಡುವ ಸಂಬಂಧ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪರ ಮಾಜಿ ಸಚಿವರು, ಶಾಸಕರ ಬಣ ಮುಂದಾಗಿದೆ. ಇದಕ್ಕೆ ಪೂರಕವಾಗಿ 29ರಿಂದ ರಾಜ್ಯ ಪ್ರವಾಸ ಕೈಗೊಂಡು, ಬಳಿಕ ಸಮಾವೇಶ ದಿನಾಂಕ ಅಂತಿಮಗೊಳಿಸಲಿದೆ.
ಬುಧವಾರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಮಾಜಿ ಸಚಿವರಾಧ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್, ಮಾಜಿ ಶಾಸಕರಾದ ಸಂಪಂಗಿ, ಎಂ.ಡಿ.ಲಕ್ಷ್ಮಿ ನಾರಾಯಣ, ತಿಪ್ಪರಾಜು, ಬಸವರಾಜ್ ಸಭೆ ನಡೆಸಿದ್ದಾರೆ. ಯಾವುದೇ ವ್ಯಕ್ತಿಯ ಇಲ್ಲವೇ ಬಣದ ಪರವಾಗಿ ಸಮಾವೇಶ ನಡೆಸದೆ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಿ ಹೊಸ ಹುರುಪು ತುಂಬಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದೇ ಇದರ ಮುಖ್ಯ ಉದ್ದೇಶ ಎಂದು ಸಭೆಯಲ್ಲಿ ತಿಳಿಸಿದ್ದಾರೆ.