ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿಯಲ್ಲೀಗ ಉಗುಳಲಾಗದ ನುಂಗಲೂ ಆಗದ ಬಿಸಿ ಬಿಸಿ ತುಪ್ಪ. ಯತ್ನಾಳ್ ಅವರು ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ನಡೆಸುತ್ತಿರುವ ವಾಗ್ದಾಳಿ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್, ಜಿಎಂ ಸಿದ್ದೇಶ್ವರ, ಅರವಿಂದ ಲಿಂಬಾವಳಿ.. ಮೊದಲಾದವರನ್ನು ಒಗ್ಗೂಡಿಸಿ ಅಟ್ಯಾಕ್ ಮಾಡುತ್ತಿರುವುದು ಗುಟ್ಟೇನಲ್ಲ. ಅದು ಹಾದಿಬೀದಿಯಲ್ಲಿ ನಡೆಯುತ್ತಿದೆ. ಈ ನಡುವೆ ಬಿಎಸ್ ಯಡಿಯೂರಪ್ಪ ಯತ್ನಾಳ್ ಕೂಡಾ ನಮ್ಮವರೇ, ಕುಳಿತು ಮಾತನಾಡಿ ಬಗೆಹರಿಸಿಕೊಳ್ಳೋಣ ಎಂದು ಹೇಳಿದ್ದಾರೆ.
ಪರಸ್ಪರ ಕಚ್ಚಾಡುವುದರಿಂದ ಯಾರಿಗೂ ಲಾಭ ಇಲ್ಲ. ಈ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ರಾಜ್ಯ ಸರ್ಕಾರದ ವೈಫಲ್ಯ ವಿರುದ್ದ ಹೋರಾಟ ಮಾಡ ಬೇಕು. ಈ ನಿಟ್ಟಿನಲ್ಲಿ ಮುನ್ನಡೆಯುವ ವಿಶ್ವಾಸ ನಮ್ಮೆಲ್ಲರಿಗೂ ಇದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಷಯ ಎಲ್ಲರೂ ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿರೋದು ಯಡಿಯೂರಪ್ಪ.
ಅವರಷ್ಟೇ ಅಲ್ಲ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ.ರಾಘವೇಂದ್ರ ಕೂಡಾ ರಾಜ್ಯ ಬಿಜೆಪಿಯಲ್ಲಿ ಮೂಡಿರುವ ಗೊಂದಲದ ವಾತಾವರಣ ಸದ್ಯ ತಿಳಿಯಾ ಗುತ್ತಿದೆ. ಆದಷ್ಟು ಬೇಗ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆ ಹರಿಸಲು ಸಂಸದರೆಲ್ಲ ಸೇರಿ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ವಕ್ಫ್ ವಿರುದ್ಧ ನಿಮ್ಮ ಹೋರಾಟವನ್ನು ಮುಂದುವರಿಸಿ. ಆದರೆ, ಪಕದ ನಾಯಕರ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬೇಡಿ, ಏನಾದರೂ ಇದರೆ ವರಿಷ್ಠರ ಮುಂದೆ ಹೇಳಿ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಖಡಕ್ ಸೂಚನೆ ನೀಡಿದೆ.
ಪರಿಣಾಮ ಯತ್ನಾಳ್ ವಿರುದ್ಧ ಅಮಾನತಿನಂಥ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಕ್ಷೀಣಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ಸರಿದೂಗಿಸುವ ದಿಕ್ಕಿನಲ್ಲಿ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯತ್ನಾಳ್ ಅವರು ನಡೆಸುತ್ತಿರುವ ವಕ್ಫ್ ವಿರುದ್ಧದ ಹೋರಾಟಕ್ಕೆ ಬ್ರೇಕ್ ಹಾಕದೆ ಅವರ ಬಹಿರಂಗ ಹೇಳಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ನಡೆದಿದೆ.
ಜತೆಗೆ ಯತ್ನಾಳ್ ಅವರು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುವ ಅಥವಾ ಶನಿವಾರ ನಡೆಯುವ ಕೋರ್‌ಕಮಿಟಿ ಸಭೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ಪ್ರಸ್ತಾಪಿಸಿ ಚರ್ಚಿಸುವ ನಿರೀಕ್ಷೆಯಿದೆ.
ಯಡಿಯೂರಪ್ಪ ಮೃದು ಧೋರಣೆ ತಾಳುತ್ತಿರೋದ್ಯಾಕೆ ಎಂದರೆ ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿಯನ್ನು ಶೂನ್ಯದಿಂದ ಕಟ್ಟಿದವರು. ತಮ್ಮ ಮೇಲೆ ವೈಯಕ್ತಿಕ ದಾಳಿ ಆದಾಗ ಕಠಿಣ ಕ್ರಮ ತೆಗೆದುಕೊಳ್ಳಿ ಎಂದರೆ ತಪ್ಪು ಸಂದೇಶ ಹೋಗಲಿದೆ. ಮಗನಿಗಾಗಿ ಯಡಿಯೂರಪ್ಪ ಕ್ರಮ ತೆಗೆದುಕೊಳ್ಳೋಕೆ ಸೂಚಿಸಿದರು ಎಂದು ಹೇಳಿದಂತಾಗುತ್ತದೆ. ಇಲ್ಲಿಯೂ ಪುತ್ರ ಪ್ರೇಮ ಮೆರೆಯುತ್ತಿದ್ದಾರೆ ಎಂಬ ಕಾರಣಕ್ಕೆ ಯಡಿಯೂರಪ್ಪ ಸಂಧಾನಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳೋದು ಹೈಕಮಾಂಡಿಗೆ ಬಿಟ್ಟ ವಿಚಾರ. ಯತ್ನಾಳ್ ಈ ರೀತಿ ಮಾತನಾಡೋದು ಹೊಸದೇನೂ ಅಲ್ಲ. ಈ ಹಿಂದೆ ಮೋದಿ ಬಗ್ಗೆಯೂ ಹೀಗೆ ಮಾತನಾಡಿದ್ದರು. ಹೀಗಾಗಿ ಹೈಕಮಾಂಡ್ ಕ್ರಮ ಕೈಗೊಳ್ಳುತ್ತದೆ ಎಂಬ ನಂಬಿಕೆಯೇ ಇದಕ್ಕೆಲ್ಲ ಕಾರಣವಾಗಿದೆ.
ಈ ಮಧ್ಯೆ ಯತ್ನಾಳ್ ಬಣವೇನೂ ಬಗ್ಗಿಲ್ಲ. ಅವರು ಈಗಲೂ ಬಹಿರಂಗವಾಗಿಯೇ ಪ್ರತ್ಯೇಕ ಸಭೆ ಮಾಡುತ್ತಿದ್ದಾರೆ. ಅತ್ತ ವಿಜಯೇಂದ್ರ ತಮ್ಮ ಮತ್ತು ಶಿವಕುಮಾರ್ ಮಧ್ಯೆ ಇರುವ ಒಳ ಒಪ್ಪಂದದ ಬಗ್ಗೆ ದಾಖಲೆಗಳಿದ್ದರೆ ಕೊಡಿ ಎಂದು ಯತ್ನಾಳ್ ಅವರಿಗೆ ಸವಾಲು ಹಾಕಿದ್ಧಾರೆ.