ಅಡಕೆ, ಭಾರತೀಯರ ಪ್ರಮುಖ ಬೆಳೆಗಳಲ್ಲಿ ಒಂದು. ಈ ಅಡಕೆಯಿಂದಾಗಿ ಭಾರತದಲ್ಲಿ ಕೋಟ್ಯಂತರ ಉದ್ಯಮಗಳು, ರೈತರು ಬದುಕುತ್ತಿದ್ದಾರೆ. ಲಕ್ಷಾಂತರ ಮಂದಿ ಪಾನ್ ಬೀಡಾ ಹಾಕಿ ಬದುಕುವವರಿದ್ದಾರೆ. ಗುಟ್ಕಾ ಕೂಡಾ ಅಷ್ಟೇ, ಹಲವು ಕಂಪೆನಿಗಳು ಭಾರತದಲ್ಲಿ ಬದುಕುತ್ತಿವೆ. ಮದುವೆ ಮನೆಗಳಷ್ಟೇ ಏಕೆ, ಮನೆಯಲ್ಲಿಯೂ ತಾಂಬೂಲ ಹಾಕಿಕೊಳ್ಳೋದು ಕಾಮನ್. ಆದರೆ ಅಂತಹ ತಾಂಬೂಲ, ಅಡಕೆಗೆ ಸಂಕಷ್ಟ ತಂದಿಟ್ಟಿದೆ ವಿಶ್ವ ಆರೋಗ್ಯ ಸಂಸ್ಥೆ ವರದಿ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂಗಸಂಸ್ಥೆ ಇಂಟರ್ ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆ್ಯಂಡ್ ಕ್ಯಾನ್ಸರ್(ಐಎಆರ್‌ಸಿ) 2024 ಅ. 9ರಂದು ಬಿಡುಗಡೆ ಮಾಡಿದ ವರದಿಯಲ್ಲಿ ಮತ್ತೆ ಅಡಕೆಯನ್ನು ಕ್ಯಾನ್ಸರ್ ಕಾರಕ ಎಂದು ಹೇಳಿದೆ. ಈ ವರದಿ ದಿ ಲ್ಯಾನ್ಸೆಟ್ ಅಂಕಾಲಜಿ ಎಂಬ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಐಎಆರ್‌ಸಿ ಸಂಸ್ಥೆ ಬಾಯಿ ಕ್ಯಾನ್ಸರ್ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಪ್ರತಿ ಐದು ವರ್ಷಕ್ಕೊಮ್ಮೆ ವಿಶ್ವ ಕ್ಯಾನ್ಸರ್ ವರದಿ ಪ್ರಕಟಿಸುತ್ತದೆ. ಈ ಹಿಂದಿನ ಐಎಆರ್‌ಸಿಯ ವರದಿಗಳಲ್ಲೂ ಅಡಕೆ ಕ್ಯಾನ್ಸರ್‌ಕಾರಕ ಎಂದೇ ಉಲ್ಲೇಖವಾಗಿದ್ದರೂ ಈಗಿನ ವರದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಅಡಕೆ ಬಳಕೆ ನಿಯಂತ್ರಿಸಿದರೆ ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಪ್ರಮಾಣವನ್ನು ಬಹುತೇಕ ತಗ್ಗಿಸಬಹುದು ಎಂದು ಹೇಳಿರುವುದು ಅಡಕೆ ಬೆಳೆಗಾರರಿಗೆ ಆತಂಕಕಾರಿ ಸಂಗತಿಯಾಗಿ ಕಾಣುತ್ತಿದೆ.
ಐಎಆರ್‌ಸಿ ವರದಿಯಲ್ಲಿ ತಂಬಾಕು ಮಿಶ್ರಿತ ಅಡಕೆ ಮಾತ್ರವಲ್ಲ, ನೇರವಾಗಿ ಅಡಕೆ ಬೆಳೆಯನ್ನೇ ನಿಯಂತ್ರಿಸಬೇಕು ಎಂದು ಹೇಳುತ್ತಿದೆ. ಹೊಗೆಸೊಪ್ಪು ರಹಿತ ತಂಬಾಕು, ಆ ಅಡಕೆಯಲ್ಲಿರುವ ಅಡಕೆ ಬಳಕೆಗೆ ಕಡಿವಾಣ ಹಾಕಿದರೆ ವಿಶ್ವದ ಮೂರನೇ ಒಂದರಷ್ಟು ಬಾಯಿ ಕ್ಯಾನ್ಸರ್ ತಡೆಯಬಹುದು ಎನ್ನುವುದು ವರದಿಯ ಪ್ರಮುಖ ಅಂಶ.
ಜಾಗತಿಕವಾಗಿ ಹೊಗೆ ರಹಿತ ತಂಬಾಕಿನಿಂದ ಉಂಟಾಗಿರುವ 1,20,200 ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ 83,400 ಪ್ರಕರಣ ಭಾರತದಲ್ಲೇ ದಾಖಲಾಗಿದೆ. 2022ರಲ್ಲಿ ಈ ಅಧ್ಯಯನ ನಡೆಸಿದ್ದು, ಬಹುತೇಕ ಅಧ್ಯಯನ ಉತ್ತರ ಭಾರತದಲ್ಲೇ ನಡೆದಿದೆ ಎನ್ನುವುದು ಪ್ರಮುಖ ಅಂಶವಾಗಿದೆ.
ಜಾಗತಿಕವಾಗಿ 600 ಮಿಲಿಯನ್ ಮಂದಿ ತಂಬಾಕು ಇಲ್ಲದ ಅಡಕೆಯ ದಾಸರಾಗಿದ್ಧಾರಂತೆ. ಅದರಲ್ಲಿ 300 ಮಿಲಿಯನ್ ಜನ ಅಡಕೆಯನ್ನು ನೇರವಾಗಿ ತಿನ್ನುತ್ತಾರೆ. ಕ್ಷಿಣ ಮಧ್ಯ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಇತರೆ ಹೆಚ್ಚಿನ ದೇಶಗಳಲ್ಲಿ ಅಡಕೆ ಬಳಕೆಯಲ್ಲಿದೆ ಎಂದು ಹೇಳಿದೆ ವರದಿ.
ತಂಬಾಕು, ಗುಟ್ಕಾ ಹಾಗೂ ಅಡಕೆಯಂಥ ಹೊಗೆರಹಿತ ತಂಬಾಕು ಉತ್ಪನ್ನಗಳ ಹೆಚ್ಚಿನ ಬಳಕೆಯಿಂದ ಏಷ್ಯಾದ ದೇಶಗಳಲ್ಲಿ ಭಾರತ ಅತೀ ಹೆಚ್ಚು ಬಾಯಿ ಕ್ಯಾನ್ಸರ್ ಪ್ರಕರಣ ಹೊಂದಿದೆ ಎಂದು ಕ್ಯಾನ್ಸರ್ ವಿಭಾಗದ ವಿಜ್ಞಾನಿ ಡಾ.ಹ್ಯಾರಿಯೆಟ್ ರುಮ್ಗೇ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹೊಗೆರಹಿತ ತಂಬಾಕು ಮತ್ತು ಅಡಕೆ ಬಳಕೆಯಿಂದ ಉಂಟಾಗುವ ಎಲ್ಲ ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲಿ ಭಾರತದಲ್ಲಿ 83,400, ಬಾಂಗ್ಲಾದೇಶ 9,700, ಪಾಕಿಸ್ತಾನ 8,900, ಚೀನಾ 3,200, ಮ್ಯಾನ್ಮಾರ್ 1,600, ಶ್ರೀಲಂಕಾ 1,300, ಇಂಡೋನೇಷ್ಯಾ 990 ಹಾಗೂ ಥಾಯ್‌ಲ್ಯಾಂಡ್‌ನಲ್ಲಿ 785 ಕೇಸ್‌ಗಳು ವರದಿಯಾಗಿದೆ.
ಅಡಕೆ ಕ್ಯಾನ್ಸರ್‌ಕಾರಕ ಎಂಬ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕೆಲ ವರ್ಷಗಳಿಂದ ವಿಚಾರಣೆ ನಡೆಯುತ್ತಲೇ ಇದೆ. 1998 ರಿಂದಲೂ ಅಂತಾರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಅಡಕೆ ಹಾನಿಕಾರಕ ಎಂದೇ ಉಲ್ಲೇಖಿಸಲಾಗುತ್ತಿದೆ. ಅಡಕೆ ಆರೋಗ್ಯದಾಯಕ, ಸಾಂಪ್ರದಾಯಿಕವಾಗಿಯೂ ಅಡಕೆ ಬಳಸುತ್ತಾರೆ. ಮೌಲ್ಯವರ್ಧಿತ ಉತ್ಪನ್ನವಾಗಿಯೂ ಉಪಯೋಗಿಸುತ್ತಾರೆ ಎಂಬುದನ್ನು ಆಧಾರ ಸಹಿತ ಸಾಬೀತುಪಡಿಸಲಾಗಿದೆ. ಇದರ ಜತೆಗೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಮಾರುಕಟ್ಟೆ ಅಧ್ಯಯನ ವರದಿಗಳೂ ಅಭಿಪ್ರಾಯ ಮಂಡಿಸಿದ್ದರೂ ಅದು ಐಎಆರ್‌ಸಿ ತಲುಪಿಲ್ಲ. ಹೀಗಾಗಿ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸಾಬೀತುಪಡಿಸಲು ಸಾಧ್ಯವಾಗದೇ ಇರುವುದು ಈಗ ಅಡಕೆ ಬೆಳೆ ಮೇಲೆ ನಿಷೇಧದ ತೂಗುಗತ್ತಿಗೆ ಕಾರಣವಾಗಿದೆ.