ಸಿದ್ದೇಶ್ವರ ಸ್ವಾಮಿಗಳ ಪ್ರವಚನಕ್ಕೆ ಹಣ ಕೊಡಬೇಕಿರಲಿಲ್ಲ. ಬೆಳಗ್ಗೆ 5 ಗಂಟೆಗೆಲ್ಲ ಶುರುವಾಗುತ್ತಿದ್ದ ಪ್ರವಚನದಲ್ಲಿ ದೊಡ್ಡ ದೊಡ್ಡ ಪಾಂಡಿತ್ಯ ಪ್ರದರ್ಶನವೂ ಇರುತ್ತಿರಲಿಲ್ಲ. ಅವರ ಪ್ರವಚನ ಕೇಳಲು ಬರುತ್ತಿದ್ದವರು ಶ್ರೀಮಂತರಲ್ಲ, ಬಹುತೇಕರು ಅನಕ್ಷರಸ್ತರು. ಆದರೆ ಇವರ ಮಾತಿನಲ್ಲಿ ವಿಜ್ಞಾನ ಇರುತ್ತಿತ್ತು. ಪುರಾಣವೂ ಇರುತ್ತಿತ್ತು. ಬಾಹ್ಯಾಕಾಶ ವಿಜ್ಞಾನದಂತಹ ಕಥೆಗಳನ್ನು ಬದುಕಿಗೆ ಸಮೀಕರಿಸಿ ಹೇಳುತ್ತಿದ್ದನ್ನು ಕೇಳುವುದೇ ಒಂದು ಅದ್ಭುತ. ಅದು ಅನಕ್ಷರಸ್ಥರಿಗ ಅರ್ಥವಾಗುವಂತೆ ಹೇಳುತ್ತಿದ್ದ ಪರಿಯೇ ವಿಶೇಷ. ಇಂತಹ ಸ್ವಾಮೀಜಿ ಬಯಸಿದ್ದರೆ ವೈಭವದ ಬದುಕು ಕಷ್ಟವೇ ಇರಲಿಲ್ಲ.
ಈಗಿನ ಕೆಲವು ಸ್ವಾಮಿಗಳು ಎಂತಹ ವೈಭವದ ಬದುಕು ಬದುಕಿದ್ದಾರೆಂದರೆ ಅವರಿಗೆ ಓಡಾಡಲು ಪುಟ್ಟ ಕಾರ್ ಸಾಕಾಗುವುದಿಲ್ಲ. ಐಷಾರಾಮಿ ಕಾರುಗಳೇ ಬೇಕು. ಕಾರಿಗೆ ಇನ್ಯಾರೋ ಪೆಟ್ರೋಲ್ ಹಾಕಿಸಬೇಕು. ಅವರ ಊಟಕ್ಕೆ ಫೈವ್ ಸ್ಟಾರ್.. ಸೆವೆನ್ ಸ್ಟಾರ್ ಹೋಟೆಲ್ಲುಗಳಲ್ಲೇ ಊಟದ ವ್ಯವಸ್ಥೆಯಾಗಬೇಕು. ಸ್ವಾಮಿಗಳನ್ನು ಕರೆಸಿ ಪಾದಪೂಜೆ ಮಾಡಬೇಕೆಂದರೆ ಲಕ್ಷ ಲಕ್ಷ ದೇಣಿಗೆ ಕೊಡಬೇಕು. ದುಡ್ಡಿಲ್ಲದ ಬಡ ಭಕ್ತರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದ ಸ್ವಾಮೀಜಿಗಳು ಕಳ್ಳೆಪುರಿಯಂತೆ ಸಿಗುತ್ತಿರುವ ಈ ಕಾಲದಲ್ಲಿ ಸಿದ್ದಪ್ಪಾಜಿಯವರ ಬದುಕು ಮತ್ತು ಜೀವನ ಎರಡೂ ಆದರ್ಶವೇ.
ಸಿದ್ದಪ್ಪಾಜಿಯವರನ್ನು ಊರಿಗೆ ಬರಬೇಕೆಂದರೆ ಗ್ರಾಮಸ್ಥರು ದೊಡ್ಡ ದೊಡ್ಡವರನ್ನೆಲ್ಲ ಕರೆಸಬೇಕಿರಲಿಲ್ಲ. ಊರನ್ನು ಸ್ವಚ್ಚವಾಗಿಟ್ಟುಕೊಂಡರೆ ಬರುತ್ತೇನೆ ಎನ್ನುತ್ತಿದ್ದರು. ಅವರ ಪಾದಧೂಳಿಯ ಸ್ಪರ್ಶಕ್ಕಾಗಿ ಕಾಯುತ್ತಿದ್ದ ಭಕ್ತರು ನಾ ಮುಂದು ತಾ ಮುಂದು ಎಂದು ಮುಂದೆ ನಿಂತು ಇಡೀ ಊರನ್ನು ಸ್ವಚ್ಛ ಮಾಡುತ್ತಿದ್ದರು. ಆಮೂಲಕ ಸಿದ್ದೇಶ್ವರ ಸ್ವಾಮೀಜಿ ಸ್ವಚ್ಛತೆಯ ಅಭಿಯಾನವನ್ನೇ ನಡೆಸುತ್ತಿದ್ದರು. ಬುದ್ದಿಯವರ ಪ್ರವಚನ ಕೇಳಲು ಸಾವಿರಾರು ಜನ ಊರೂರುಗಳಿಂದ ಓಡೋಡಿ ಬರುತ್ತಿದ್ದರು. ಚಾಪೆ ಹಾಸಿಕೊಂಡು ಕೂರುತ್ತಿದ್ದರು. ಮುಂಜಾನೆಯ ತಂಪಲ್ಲಿ ನಿಶ್ಯಬ್ಧದ ನಡುವೆ ಸ್ವಾಮೀಜಿಗಳ ಪ್ರವಚನ ಶುರುವಾಯಿತೆಂದರೆ ಅಲ್ಲಿ ಪಿನ್ ಡ್ರಾಪ್ ಸೈಲೆನ್ಸ್. ಸೂಜಿ ಬಿದ್ದರೂ ಕೇಳಿಸುವಷ್ಟು ಮೌನವಿರುತ್ತಿತ್ತು.
ವೈಭೋಗ ಎಂಬುದು ಹುಲಿ ಸವಾರಿ ಇದ್ದ ಹಾಗೆ. ಹುಲಿಯ ಮೇಲೆ ಬಂದಾಗ ಜನ ಹುಲಿಯನ್ನು ನೋಡಿ ಹೆದರುತ್ತಾರೆ. ಕೈಮುಗಿಯುತ್ತಾರೆ. ಆದರೆ ಆ ಹುಲಿಯ ಮೇಲಿಂದ ಕೆಳಗಿಳಿದರೆ ಆ ಹುಲಿಯೇ ನಮ್ಮನ್ನು ತಿಂದು ಹಾಕುತ್ತದೆ. ಇದು ವೈಭವದ ಜೀವನದ ಬಗ್ಗೆ ಅಪ್ಪಾವರು ಹೇಳುತ್ತಿದ್ದ ಮಾತು.