ಗೀತಾ ಶಿವ ರಾಜ್ ಕುಮಾರ್ ಅವರೀಗ ಕಾಂಗ್ರೆಸ್ ಸದಸ್ಯೆ. 2014ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿ ಸೋತಿದ್ದ ಗೀತಾ ಅವರು ಇದೀಗ ಕಾಂಗ್ರೆಸ್ ಸೇರಿದ್ದಾರೆ. ಸೊರಬ ಕ್ಷೇತ್ರದಲ್ಲಿ ಬಂಗಾರಪ್ಪನವರ ಇಬ್ಬರೂ ಮಕ್ಕಳು ಮುಖಾಮುಖಿಯಾಗಿದ್ದಾರೆ. ಕುಮಾರ್ ಬಂಗಾರಪ್ಪ ಬಿಜೆಪಿಯಿಂದ (ಮೊದಲು ಕಾಂಗ್ರೆಸ್ಸಿನಲ್ಲೇ ಇದ್ದವರು) ಮತ್ತು ಕಾಂಗ್ರೆಸ್ಸಿನಿಂದ ಮಧು ಬಂಗಾರಪ್ಪ (ಮೊದಲು ಜೆಡಿಎಸ್`ನಲ್ಲಿದ್ದವರು) ಸ್ಪರ್ಧಿಸಿದ್ದಾರೆ. ಗೀತಾ ಅವರು ಮಧು ಬಂಗಾರಪ್ಪ ಪರ ನಿಂತಿದ್ದಾರೆ. ಇದರ ನಡುವೆಯೇ ಕಾಂಗ್ರೆಸ್ ಸೇರಿದ್ದಾರೆ. ಪ್ರಾಥಮಿಕ ಸದಸ್ಯತ್ವ ಸ್ವೀಕರಿಸಿದ್ದಾರೆ. ಗೀತಾ ಅವರನ್ನು ಬರಮಾಡಿಕೊಂಡಿರುವುದು ಡಿಕೆ ಶಿವಕುಮಾರ್. ಅಂದಹಾಗೆ ಗೀತಾ ಅವರಷ್ಟೇ ಅಲ್ಲ, ಪತ್ನಿಯ ಜೊತೆ ಶಿವಣ್ಣ ಕೂಡಾ ಪ್ರಚಾರ ಮಾಡಲಿದ್ದಾರಂತೆ.
ಕಳೆದ ಬಾರಿ ಗೀತಾ ಅವರು ಎಲೆಕ್ಷನ್ನಿಗೆ ನಿಂತಿದ್ದಾಗ ಪುನೀತ್ ರಾಜಕುಮಾರ್ ಇದ್ದರು. ಅತ್ತಿಗೆಗೆ ಶುಭ ಕೋರುತ್ತೇನೆ. ಅವರಿಗೆ ಒಳ್ಳೆಯದಾಗಲಿ. ಅವರು ಗೆದ್ದು ಬರಲಿ. ಆದರೆ ನಾನು ಪ್ರಚಾರಕ್ಕೆ ಹೋಗುತ್ತಿಲ್ಲ. ಹೋಗುವುದಿಲ್ಲ ಎಂದಿದ್ದರು. ಈಗ ರಾಘವೇಂದ್ರ ರಾಜಕುಮಾರ್ ಕೂಡಾ ಅದೇ ಮಾತು ಹೇಳಿದ್ದಾರೆ.
ಗೀತಾ ಶಿವರಾಜ್ಕುಮಾರ್ ಅವರು ನನ್ನ ಅತ್ತಿಗೆ, ಶಿವರಾಜ್ ಕುಮಾರ್ ಅವರು ನನಗೆ ಅಣ್ಣ ನನಗೆ ಇಷ್ಟು ಮಾತ್ರವೇ ಗೊತ್ತು, ನನಗೆ ಇಷ್ಟು ಮಾತ್ರವೇ ಮುಖ್ಯ. ಇನ್ಯಾವುದು ನನ್ನದಲ್ಲ, ಇದು ಎರಡು ಬಿಟ್ಟರೆ ಬೇರೆ ಯಾವುದೂ ನನಗೆ ಗೊತ್ತಿಲ್ಲ. ಅವರು ನನಗೆ ಅಣ್ಣ-ಅತ್ತಿಗೆ ಅಷ್ಟೆ ನನಗೆ ಸಂಬಂಧ ಇದೆ ಇನ್ಯಾವುದೂ ಅಲ್ಲ ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್.
ಅಂದಹಾಗೆ ರಾಘವೇಂದ್ರ ರಾಜಕುಮಾರ್ ಈ ಮಾತು ಹೇಳಿದ್ದು ರಾಘವೇಂದ್ರ ಸ್ಟೋರ್ಸ್ ಪ್ರೀಮಿಯರ್ ಶೋನಲ್ಲಿ. ಆ ಚಿತ್ರಕ್ಕೆ ಹೀರೋ ಜಗ್ಗೇಶ್. ಬಿಜೆಪಿ ರಾಜ್ಯಸಭಾ ಸದಸ್ಯ. ಪತ್ರಕರ್ತರು ಈ ಪ್ರಶ್ನೆ ಎತ್ತಿದಾಗ ಕೂಡಲೇ ಪಕ್ಕದಲ್ಲಿದ್ದ ಜಗ್ಗೇಶ್ ಬೇಡ..ಬೇಡ.. ಇಲ್ಲಿ ಈ ಪ್ರಶ್ನೆ ಕೇಳಬೇಡಿ ಎಂದು ಪತ್ರಕರ್ತರಿಗೆ ಮನವಿ ಮಾಡಿದರೂ, ಮಾತನಾಡಿದ ರಾಘವೇಂದ್ರ ರಾಜಕುಮಾರ್ ಕೇಳಲಿ ಬಿಡಿ, ಉತ್ತರ ಕೊಡುತ್ತೇನೆ ಎಂದು ಈ ಮಾತು ಹೇಳಿದ್ದಾರೆ.
ರಾಜಕೀಯ ಅಂದ್ರೆ ಹೇಗಿರುತ್ತೆ ನೋಡಿ.. ಸುದೀಪ್ ಅವರು ಈಗ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಆದರೆ ಅವರು ಅಕ್ಕ ಎಂದು ಗೌರವಿಸುವ ಗೀತಾ ಶಿವಣ್ಣ ಕಾಂಗ್ರೆಸ್ಸಿಗೆ. ಅಣ್ಣ ಎಂದು ಪ್ರೀತಿಸುವ ಶಿವರಾಜ್ ಕುಮಾರ್ ಕಾಂಗ್ರೆಸ್ಸಿನಲ್ಲಿ. ಶಿವಣ್ಣರನ್ನು ಅತ್ಯಂತ ಗೌರವಿಸುವ ಜಗ್ಗೇಶ್, ತಾರಾ, ಶೃತಿ ಎಲ್ಲರೂ ಇರುವುದು ಬಿಜೆಪಿಯಲ್ಲಿ. ಹಾಗೆಯೇ ಸುದೀಪ್ ಅವರನ್ನು ಗೌರವಿಸುವ ಸಾಧುಕೋಕಿಲ ಇರುವುದು ಕಾಂಗ್ರೆಸ್ಸಿನಲ್ಲಿ.