ಹಲವು ಸಮೀಕ್ಷೆಗಳಾಗಿವೆ. ಟೈಮ್ಸ್ ನೌ, ಸಿ-ವೋಟರ್-ಟಿವಿ 9, ಜನ್ ಕಿ ಬಾತ್-ಸುವರ್ಣ ನ್ಯೂಸ್, ಪಬ್ಲಿಕ್ ಟಿವಿ, ಕರ್ನಾಟಕ ಟಿವಿ, ಈದಿನ, ನ್ಯೂಸ್ 18.. ಸೇರಿದಂತೆ ಹಲವು ಸಮೀಕ್ಷೆಗಳಾಗಿವೆ. ಆದರೆ ಬಹುತೇಕ ಸಮೀಕ್ಷೆಗಳಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವು ಕಾಂಗ್ರೆಸ್ಸಿಗೆ ಹೆಚ್ಚು ಸ್ಥಾನ ಕೊಟ್ಟರೆ, ಇನ್ನೂ ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಇದೀಗ ಝೀನ್ಯೂಸ್-ಮ್ಯಾಟ್ರಿಜ್ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕರೂ ಆಶ್ಚರ್ಯವಿಲ್ಲ ಎಂಬ ಅಂಶ ವ್ಯಕ್ತವಾಗಿದೆ.
ಈ ಸಮೀಕ್ಷೆ ಪ್ರಕಾರ ಬಿಜೆಪಿ 103-115 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 79-91, ಜೆಡಿಎಸ್ 26-36, ಹಾಗೂ ಇತರರು 1-3 ಗೆಲ್ಲಲಿದ್ದಾರೆ. ಈ ಬಾರಿ ಬಿಜೆಪಿ ಶೇ.42, ಕಾಂಗ್ರೆಸ್ ಶೇ.40, ಜೆಡಿಎಸ್ ಶೇ.15 ಮತ್ತು ಇತರರು ಶೇ.3ರಷ್ಟುಮತ ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. 224 ಸದಸ್ಯಬಲದ ಕರ್ನಾಟಕ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನಗಳ ಅಗತ್ಯವಿದೆ. ಕಳೆದ ಬಾರಿ ಬಿಜೆಪಿ 104, ಕಾಂಗ್ರೆಸ್ 80, ಜೆಡಿಎಸ್ 37 ಸ್ಥಾನ ಗೆಲ್ಲುವಲ್ಲಿ ಸಫಲವಾಗಿದ್ದವು.
ಈ ಸಮೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುತ್ತಿರುವುದಕ್ಕೆ ಕಾರಣ, ಈ ಸಮೀಕ್ಷೆಯ ಗಾತ್ರ ಮತ್ತು ಸ್ಯಾಂಪಲ್. ಏಕೆಂದರೆ ಈ ಸಮೀಕ್ಷೆ ಒಟ್ಟು 1.80 ಲಕ್ಷ ಪುರುಷರು ಹಾಗೂ 1.12 ಲಕ್ಷ ಮಹಿಳೆಯರನ್ನು ಸಂಪರ್ಕಿಸಿ, ಪರಾಮರ್ಶಿಸಿ ಸಿದ್ಧವಾಗಿರುವಂತಹುದು. ಸಾಮಾನ್ಯವಾಗಿ ಸಮೀಕ್ಷೆಗಳಲ್ಲಿ ಇಷ್ಟು ದೊಡ್ಡ ಸ್ಯಾಂಪಲ್ ಸಂಗ್ರಹಿಸುವುದಿಲ್ಲ.
ಲಿಂಗಾಯತರು ಬಿಜೆಪಿಗೆ : ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರಾದರೂ, ಚುನಾವಣೆಯಲ್ಲಿ ಲಿಂಗಾಯತರು ಪ್ರಮುಖವಾಗಿ ಚರ್ಚೆಯಾಗುತ್ತಿದ್ದರೂ ಬಹುತೇಕ ಲಿಂಗಾಯತರು ತಮ್ಮ ಬೆಂಬಲ ಬಿಜೆಪಿಗೆ ಎಂದಿರುವುದು ವಿಶೇಷ. ಸಮೀಕ್ಷೆಯ ಪ್ರಕಾರ ಲಿಂಗಾಯತ ಸಮುದಾಯದ ಪೈಕಿ ಶೇ.66ರಷ್ಟು ಜನರು ಬಿಜೆಪಿ, ಶೇ.16ರಷ್ಟುಜನರು ಕಾಂಗ್ರೆಸ್ ಮತ್ತು ಶೇ.8ರಷ್ಟುಜನರು ಜೆಡಿಎಸ್ ಮತ್ತು ಶೇ.10ರಷ್ಟುಜನರು ಇತರರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಒಕ್ಕಲಿಗರಿಗೆ ಜೆಡಿಎಸ್ ಆಯ್ಕೆ ನಂ.1 : ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಒಕ್ಕಲಿಗರೇನೂ ಜೆಡಿಎಸ್`ನಿಂದ ಕಾಂಗ್ರೆಸ್ಸಿಗೆ ಶಿಫ್ಟ್ ಆಗಿಲ್ಲ. ಅವರ ಆಯ್ಕೆಯಲ್ಲಿ ಕುಮಾರಸ್ವಾಮಿ, ದೇವೇಗೌಡರಿಗೇ ಮೊದಲ ಪ್ರಾಶಸ್ತ್ಯ. ಒಕ್ಕಲಿಗರ ಸಮುದಾಯದ ಶೇ.52ರಷ್ಟುಜನ ಜೆಡಿಎಸ್ಗೆ, ಶೇ.28ರಷ್ಟುಜನರು ಕಾಂಗ್ರೆಸ್ಗೆ, ಶೇ.16ರಷ್ಟುಜನರು ಬಿಜೆಪಿಗೆ ಮತ್ತು ಶೇ.4ರಷ್ಟುಜನರು ಇತರರಿಗೆ ಮತ ಹಾಕುವುದಾಗಿ ಹೇಳಿದ್ದಾರೆ.
ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಬದಲಿಸುವ ಶಕ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಪ್ರಾಚಾರದಲ್ಲಿ ಮೋದಿ ಭಾಗಿ ಬಿಜೆಪಿ ಪಾಲಿಗೆ ಗೇಮ್ಚೇಂಜ್ ಆಗಿರಲಿದೆ ಎಂದು ಶೇ.44ರಷ್ಟುಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ.34ರಷ್ಟುಜನರು ಮೋದಿ ಭಾಗಿ ಭಾಗಶಃ ನೆರವಾಗಲಿದೆ ಎಂದಿದ್ದರೆ ಶೆ.22ರಷ್ಟುಜನರು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಜೊತೆಗೆ ರಾಹುಲ್ ಗಾಂಧಿ ಕೈಗೊಂಡ ದೇಶವ್ಯಾಪಿ ಭಾರತ್ ಜೋಡೋ ಯಾತ್ರೆ ಚುನಾವಣೆ ಮೇಲೆ ಹೆಚ್ಚಿನ ಪರಿಣಾಮ ಬೀರದು ಎಂದು ಮತದಾರರು ಹೇಳಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ. ನಂತರದ ಆಯ್ಕೆಯಾಗಿ ಕ್ರಮವಾಗಿ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸ್ಥಾನ ಪಡೆದಿದ್ದಾರೆ.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರ ಆಡಳಿತದ ಬಗ್ಗೆ ಶೇ.30ರಷ್ಟುಜನರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ.41ರಷ್ಟುಜನರು ಭಾಗಶಃ ಮತ್ತು ಶೇ.29ರಷ್ಟುಜನರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.